1 :
ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು.
2 : ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು;
3 : ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು.
4 : ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು.
5 : ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು.
6 : ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು.
7 : ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.
8 : ಅಂದು, ಸಂಜೆಯ ತಂಗಾಳಿಯಲ್ಲಿ, ಸರ್ವೇಶ್ವರನಾದ ದೇವರು ತೋಟದೊಳಗೆ ಸಂಚರಿಸುವ ಸಪ್ಪಳವು ಕೇಳಿಸಿತು. ಅವರಿಗೆ ಕಾಣಿಸಿಕೊಳ್ಳಬಾರದೆಂದು ಆದಾಮನೂ ಹವ್ವಳೂ ಹಿಂದೆ ಅವಿತುಕೊಂಡರು.
9 : ಆದರೆ ಸರ್ವೇಶ್ವರನಾದ ದೇವರು, “ಎಲ್ಲಿರುತ್ತೀಯಾ?” ಎಂದು ಆದಾಮನನ್ನು ಕೂಗಿ ಕೇಳಿದರು.
10 : ಅದಕ್ಕೆ ಅವನು, “ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ,” ಎಂದನು.
11 : ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?” ಎಂದು ಕೇಳಿದರು.
12 : ಅದಕ್ಕೆ ಆದಾಮನು, “ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ,” ಎಂದನು.
13 : ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಆಕೆ, “ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು,” ಎಂದು ಉತ್ತರ ಕೊಟ್ಟಳು.
14 :
ಆಗ, ಸರ್ವೇಶ್ವರನಾದ ದೇವರು,
ಇಂತೆಂದರು ಸರ್ಪಕ್ಕೆ:
“ಈ ಪರಿಯ ಕೃತ್ಯವನ್ನು
ನೀನೆಸಗಿದುದರಿಂದ
ಶಾಪಗ್ರಸ್ತನಾದೆ ಎಲ್ಲ ಪಶು
ಪ್ರಾಣಿಗಳಿಗಿಂತ;
ಹರಿದಾಡುವೆ ಹೊಟ್ಟೆಯ ಮೇಲೆ
ಇಂದಿನಿಂದ
ತಿನ್ನುವೆ ಮಣ್ಣನೆ ಜೀವಮಾನ
ಪರಿಯಂತ.
15 : ಹಗೆತನವಿರಿಸುವೆನು ನಿನಗೂ ಈ
ಮಹಿಳೆಗೂ
ನಿನ್ನ ಸಂತಾನಕ್ಕೂ ಇವಳ
ಸಂತಾನಕ್ಕೂ.
ಜಜ್ಜುವುದಿವಳ ಸಂತಾನ ನಿನ್ನ
ತಲೆಯನ್ನುಕಚ್ಚುವೆ
ನೀನಾ ಸಂತಾನದ ಹಿಮ್ಮಡಿಯನು.”
16 : ಬಳಿಕ ಆ ಮಹಿಳೆಗೆ:
“ಹೆಚ್ಚಿಸುವೆನು ಪ್ರಸವಕಾಲದ
ನಿನ್ನ ವೇದನೆಯನ್ನು;
ಹೆರುವೆ ನೀನು ಸಂಕಷ್ಟದಿಂದಲೇ
ಮಕ್ಕಳನ್ನು.
ಆದರೂ ನಿನಗಿರುವುದು ಗಂಡನ ಬಯಕೆ
ಒಳಗಾಗುವೆ ನೀನು ಆತನ ಒಡೆತನಕ್ಕೆ.”
17 : ಅನಂತರ ಆದಾಮನಿಗೆ:
“ತಿನ್ನಬಾರದೆಂದು ನಾ ವಿಧಿಸಿದ
ಮರದ ಹಣ್ಣನ್ನು
ತಿಂದೆ ನೀನು, ಕೇಳಿ ನಿನ್ನಾ
ಮಡದಿಯ ಮಾತನ್ನು.
ಇದಕಾರಣ ಹಾಕಿರುವೆನು ಶಾಪ
ಹೊಲನೆಲಕ್ಕೆ
ದುಡಿವೆ ನೀನು ಜೀವಮಾನವಿಡೀ
ಅದರ ಕೃಷಿಗೆ.
18 : ಬೆಳಸುವುದದು ಅತುಳ ಕಳೆಯನ್ನು,
ಮುಳ್ಳುಗಿಡಗಳನ್ನು
ತಿನ್ನಬೇಕಾಗುವುದು ನೀನು ಬೈಲಿನ
ಬೆಳೆಯನ್ನು.
19 : ನೀನುತ್ಪತ್ತಿಯಾದ ಮಣ್ಣಿಗೆ ಮರಳಿ
ಸೇರುವ ತನಕ
ಗಳಿಸಬೇಕು ಕವಳವನ್ನು
ನೆತ್ತಿ ಬೆವರಿಡುತ.
ಮಣ್ಣಿನಿಂದಲೇ ಬಂದವನು ನೀನು
ಮರಳಿ ಮಣ್ಣಿಗೆ ಸೇರತಕ್ಕವನು.”
20 : ಆದಾಮನು ತನ್ನ ಹೆಂಡತಿಗೆ “ಹವ್ವ” ಎಂದು ಹೆಸರಿಟ್ಟನು. ಏಕೆಂದರೆ ಮಾವನಕುಲಕ್ಕೆ ಮೂಲಮಾತೆ ಆಕೆ.
21 : ಸರ್ವೇಶ್ವರನಾದ ದೇವರು ಆದಾಮನಿಗೂ ಆತನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು.
22 : ಸರ್ವೇಶ್ವರನಾದ ದೇವರು, “ಮನುಷ್ಯನು ಈಗ ನಮ್ಮಲ್ಲಿ ಒಬ್ಬರಂತೆ ಒಳಿತು - ಕೆಡುಕುಗಳ ಜ್ಞಾನವನ್ನು ಪಡೆದುಬಿಟ್ಟಿದ್ದಾನೆ. ಇನ್ನು ಅಮರ ಜೀವಿಯಾಗಲು ಜೀವವೃಕ್ಷದ ಹಣ್ಣಿಗೆ ಕೈ ಚಾಚಿ ಬಿಡಬಾರದು,” ಎಂದುಕೊಂಡರು.
23 : ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿ ಬಿಟ್ಟರು.
24 : ಅದಲ್ಲದೆ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕಾಗಿ ಆ ವನದ ಪೂರ್ವದಿಕ್ಕಿನಲ್ಲೆ ‘ಕೆರೂಬಿ’ಯರನ್ನೂ ಪ್ರಜ್ವಲಿಸುತ್ತಾ ಎಲ್ಲ ಕಡೆ ಸುತ್ತುವ ಕತ್ತಿಯನ್ನೂ ಇರಿಸಿದರು.