1 :
ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮಬ್ಬಾಯಿತು. ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು, “ಮಗನೇ,” ಎನ್ನಲು ಏಸಾವನು, “ಇಗೋ, ಇಲ್ಲೇ ಇದ್ದೇನೆ,” ಎಂದನು.
2 : ಇಸಾಕನು ಅವನಿಗೆ, “ನೋಡು, ನಾನು ಮುದುಕನಾಗಿಬಿಟ್ಟೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ;
3 : ಆದುದರಿಂದ ನಿನ್ನ ಆಯುಧಗಳನ್ನೂ ಬಿಲ್ಲುಬತ್ತಳಿಕೆಗಳನ್ನೂ ತೆಗೆದುಕೊಂಡು ಕಾಡಿಗೆ ಹೋಗು; ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ;
4 : ಅದರಿಂದ ನನಗಿಷ್ಟವಾಗಿರುವ ಸವಿಯೂಟವನ್ನೂ ಅಣಿಮಾಡಿ ಬಡಿಸು. ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಮನಸಾರೆ ಆಶೀರ್ವದಿಸುತ್ತೇನೆ,” ಎಂದು ಹೇಳಿದನು.
5 : ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿದ್ದಿತು. ಏಸಾವನು ಬೇಟೆಯಾಡಲು ಕಾಡಿಗೆ ಹೋಗಿದ್ದಾಗ,
6 : ಆಕೆ ತನ್ನ ಮಗ ಯಕೋಬನಿಗೆ, “ನಿನ್ನ ತಂದೆ ನಿನ್ನಣ್ಣ ಏಸಾವನ ಸಂಗಡ ಮಾತನಾಡುತ್ತಾ,
7 : ‘ನೀನು ಹೋಗಿ ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ, ಅದರಿಂದ ನನಗೆ ಸವಿ ಊಟವನ್ನು ಅಣಿಮಾಡಿ ಬಡಿಸು; ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಸರ್ವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಮನಸಾರೆ ಆಶೀರ್ವದಿಸುತ್ತೇನೆ,’ ಎಂದು ಹೇಳಿದ್ದನ್ನು ಕೇಳಿದ್ದೇನೆ.
8 : ಆದುದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನಾನು ಹೇಳುವಂತೆ ಮಾಡು:
9 : ಮೇಕೆ ಮಂದೆಯ ಬಳಿಗೆ ಹೋಗಿ ಎರಡು ಒಳ್ಳೆಯ ಮೇಕೆಮರಿಗಳನ್ನು ಬೇಗನೆ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ಸವಿಯೂಟವನ್ನು ನಾನೇ ಅಣಿಮಾಡುತ್ತೇನೆ.
10 : ನೀನು ಅದನ್ನು ಅವರ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹಾಗೆ ಮಾಡಿದರೆ ಅವರು ಸಾಯುವುದಕ್ಕೆ ಮುಂಚೆ ನಿನ್ನನ್ನೇ ಮನಸಾರೆ ಆಶೀರ್ವದಿಸುವರು,” ಎಂದಳು.
11 : ಅದಕ್ಕೆ ಯಕೋಬನು, “ನನ್ನ ಅಣ್ಣನ ಮೈತುಂಬ ರೋಮಗಳಿಗೆ. ನನ್ನ ಮೈ ಆದರೋ ನುಣ್ಣಗಿದೆ;
12 : ಒಂದು ವೇಳೆ ತಂದೆ ನನ್ನನ್ನು ಮುಟ್ಟಿನೋಡಿಯಾರು; ನಾನು ಅವರಿಗೆ ವಂಚಕನಾಗಿ ತೋರಿ ಬಂದರೆ ಆಶೀರ್ವಾದಕ್ಕೆ ಬದಲಾಗಿ ಶಾಪ ಬರಮಾಡಿಕೊಳ್ಳುತ್ತೇನೆ,” ಎಂದನು.
13 : ಆಗ ಅವನ ತಾಯಿ, “ಮಗನೇ, ಅವರು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆ ಮರಿಗಳನ್ನು ತೆಗೆದುಕೊಂಡು ಬಾ,” ಎಂದಳು.
14 : ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾದ ಸವಿ ಊಟವನ್ನು ಸಿದ್ಧಪಡಿಸಿದಳು.
15 : ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು.
16 : ಮೇಕೆಮರಿಗಳ ಚರ್ಮವನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿದಳು.
17 : ತಾನು ಸಿದ್ಧ ಮಾಡಿದ್ದ ಸವಿಯೂಟವನ್ನು ಸುಟ್ಟಿದ್ದ ರೊಟ್ಟಿಯನ್ನೂ ತನ್ನ ಮಗ ಯಕೋಬನ ಕೈಗೆ ಕೊಟ್ಟಳು.
18 : ಯಕೋಬನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು. ತಂದೆಯು, “ಏನು ಮಗನೇ, ನೀನು ಯಾವ ಮಗನು?” ಎಂದು ಕೇಳಿದನು.
19 : ಯಕೋಬನು; “ನಾನೇ ನಿಮ್ಮ ಹಿರಿಯ ಮಗ ಏಸಾವನು; ನಿಮ್ಮ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕುಳಿತುಕೊಂಡು ನಾನು ತಂದಿರುವ ಬೇಟೆಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಹೇಳಿದನು.
20 : ಇಸಾಕನು, “ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?” ಎಂದು ಕೇಳಿದನು. ಯಕೋಬನು, “ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು,” ಎಂದನು.
22 : ಯಕೋಬನು ಹತ್ತಿರಕ್ಕೆ ಬಂದಾಗ ತಂದೆ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಕೋಬನ ಸ್ವರ; ಆದರೆ ಕೈ ಏಸಾವನ ಕೈ”, ಎಂದುಕೊಂಡನು.
24 : ಯಕೋಬನ ಕೈಗಳು ಅವನ ಅಣ್ಣನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು.
24 : ಆದರೂ ಮರಳಿ, “ನೀನು ನಿಶ್ಚಯವಾಗಿ ನನ್ನ ಮಗ ಏಸಾವನೋ” ಎಂದು ಕೇಳಿದನು. ಯಕೋಬನು “ಹೌದು,” ಎಂದು ಉತ್ತರ ಕೊಟ್ಟನು.
ಆಗ ಇಸಾಕನು, “ಊಟಮಾಡಲು ಆ ಬೇಟೆ ಮಾಂಸವನ್ನು ತಂದು ಬಡಿಸು. ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ,” ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು.
25 : ಆಗ ಇಸಾಕನು, “ಊಟಮಾಡಲು ಆ ಬೇಟೆ ಮಾಂಸವನ್ನು ತಂದು ಬಡಿಸು. ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ,” ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು.
26 : ಬಳಿಕ ಅವನ ತಂದೆ ಇಸಾಕನು, “ಮಗನೇ, ಹತ್ತಿರ ಬಂದು ನನಗೆ ಮುತ್ತು ಕೊಡು,” ಎಂದನು. ಅವನು ಹತ್ತಿರ ಬಂದು ಮುದ್ದಿಟ್ಟಾಗ
27 : ಇಸಾಕನು ಅವನ ಉಡುಗೆತೊಡಿಗೆಗಳ ಸುವಾಸನೆಯನ್ನು ಮೂಸಿ ನೋಡಿ, ಅವನಿಗೆ ಹೀಗೆಂದು ಆಶೀರ್ವಾದ ಮಾಡಿದನು -
“ನನ್ನ ಸುಕುಮಾರನಿಂದೇಳುವ ಸುವಾಸನೆ
ಸರ್ವೇಶ್ವರನಾಶೀರ್ವದಿಸಿದ ಮೊಗೆನೆಲದ
ಸುವಾಸನೆಯಂತಿದೆ.
28 : ದಯಪಾಲಿಸಲಿ ದೇವ ನಿನಗೆ ಆಗಸದ
ಮಂಜನು, ಸಾರವುಳ್ಳ ಹೊಲವನು
ಅನುಗ್ರಹಿಸಲಿ ಹೇರಳ ದವಸ
ಧಾನ್ಯವನು, ದ್ರಾಕ್ಷಾರಸವನು.
29 : ಸೇವೆಗೈಯಲಿ ನಿನಗೆ ಹೊರನಾಡುಗಳು
ಅಡ್ಡಬೀಳಲಿ ನಿನಗೆ ಹೊರಜನಾಂಗಗಳು.
ಒಡೆಯನಾಗು ಸೋದರರಿಗೆ
ಅಡ್ಡಬೀಳಲಿ ತಾಯಕುಡಿ ನಿನಗೆ
ಶಾಪವಿರಲಿ ನಿನ್ನನ್ನು ಶಪಿಸುವವರಿಗೆ
ಆಶೀರ್ವಾದವು ನಿನ್ನನ್ನು
ಹರಸುವವರಿಗೆ!”
30 :
ಯಕೋಬನು ತಂದೆ ಇಸಾಕನಿಂದ ಆಶೀರ್ವಾದ ಪಡೆದು ಹೊರಟು ಹೋದನು. ಕೂಡಲೆ ಅವನ ಅಣ್ಣ ಏಸಾವನು ಬೇಟೆಯಿಂದ ಹಿಂದಿರುಗಿ ಬಂದನು.
31 : ಅವನು ಕೂಡ ಸವಿ ಊಟವನ್ನು ಅಣಿಮಾಡಿ ತಂದೆಯ ಬಳಿಗೆ ತಂದು, “ಅಪ್ಪಾ, ಏಳಿ; ನಿನ್ನ ಮಗನಾದ ನಾನು ತಂದಿರುವ ಬೇಟೆಯ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಕೇಳಿಕೊಂಡನು.
32 : “ನೀನು ಯಾರು?” ಎಂದು ತಂದೆ ಇಸಾಕನು ವಿಚಾರಿಸಲು, “ನಾನೇ ನಿಮ್ಮ ಜ್ಯೇಷ್ಠಪುತ್ರ ಏಸಾವನು” ಎಂದು ಉತ್ತರ ಕೊಟ್ಟನು.
33 : ಆಗ ಇಸಾಕನು ಗಡಗಡನೆ ನಡುಗುತ್ತಾ, “ಹಾಗಾದರೆ ಬೇಟೆಯಾಡಿ ನನಗೆ ಊಟ ತಂದು ಕೊಟ್ಟವನಾರು? ನೀನು ಬರುವುದಕ್ಕೆ ಮುಂಚೆ ಅವನು ತಂದುದನ್ನು ಊಟಮಾಡಿ ಅವನನ್ನೇ ಅಂತಿಮವಾಗಿ ಆಶೀರ್ವದಿಸಿಬಿಟ್ಟೆನು; ಅವನಿಗೆ ಮಾಡಿದ ಆಶೀರ್ವಾದ ಇನ್ನು ತಪ್ಪಲಾರದು,” ಎಂದನು.
34 : ತಂದೆಯ ಈ ಮಾತುಗಳನ್ನು ಕೇಳಿ ಏಸಾವನು ದುಃಖಕ್ರಾಂತನಾದನು. ಬಹಳವಾಗಿ ಅತ್ತನು. “ಅಪ್ಪಾ, ತಂದೆಯೇ ನನ್ನನ್ನು, ನನ್ನನ್ನು ಕೂಡ ಆಶೀರ್ವದಿಸು,” ಎಂದು ಬೇಡಿಕೊಂಡನು.
35 : ಇಸಾಕನು, “ನಿನ್ನ ತಮ್ಮ ಮೋಸದಿಂದ ಬಂದು ನಿನಗಾಗಬೇಕಿದ್ದ ಆಶೀರ್ವಾದವನ್ನು ಪಡೆದುಕೊಂಡು ಹೋದನು,” ಎಂದನು.
36 : ಅದಕ್ಕೆ ಏಸಾವನು, ‘ಯಕೋಬ’ ಎಂಬ ಹೆಸರು ಅವನಿಗೆ ತಕ್ಕುದಾಗಿದೆ; ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ. ಹಿಂದೆ ನನ್ನ ಜ್ಯೇಷ್ಠತನದ ಹಕ್ಕನ್ನು ಅಪಹರಿಸಿದ; ಈಗ ನನಗೆ ಬರಬೇಕಾಗಿದ್ದ ಆಶೀರ್ವಾದವನ್ನು ಕಿತ್ತುಕೊಂಡಿದ್ದಾನೆ,” ಎಂದು ಹೇಳಿ ತನ್ನ ತಂದೆಯನ್ನು ನೋಡಿ, “ನನಗೆಂದೇ ನಿಮ್ಮಲ್ಲಿ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.
37 : ಆಗ ಇಸಾಕನು, “ಅವನನ್ನು ನಿನಗೆ ಒಡೆಯನನ್ನಾಗಿ ನೇಮಿಸಿದ್ದೇನೆ; ಸಹೋದರರನ್ನೇ ಅವನಿಗೆ ಕೆಲಸಗಾರರನ್ನಾಗಿ ಕೊಟ್ಟಿದ್ದೇನೆ; ದವಸ ಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನಿಗೆ ಬಿಟ್ಟಿದ್ದೇನೆ. ಹೀಗಿರಲು ಮಗನೇ, ನಾನು ನಿನಗೇನು ತಾನೆ ಮಾಡಲು ಸಾಧ್ಯ?” ಎಂದನು.
38 : “ಅಪ್ಪಾ, ನಿಮ್ಮಲ್ಲಿ ಒಂದೇ ಆಶೀರ್ವಾದ ಮಾತ್ರ ಇತ್ತೋ? ನನ್ನನ್ನು, ನನ್ನನ್ನು ಕೂಡ ಆಶೀರ್ವಾದ ಮಾಡಪ್ಪಾ,” ಎಂದು ಗೋಳಾಡುತ್ತಾ ಅತ್ತನು.
39 : ಆಗ ಇಸಾಕನು -
“ಸಾರವತ್ತಾದ ಭೂಮಿಗೆ ದೂರ
ಆಗಸದಿಂದೇಳುವ ಮಂಜಿಗೆ ದೂರ
40 : ಬಾಳ ನಡೆಸುವ ಕತ್ತಿಕಠಾರಿಯಿಂದಲೇ
ಕೂಲಿಯಾಳಾಗುವೆ ಸೋದರನಿಗೆ
ಮುರಿಯುವೆ ಅವ ಹೊರಿಸಿದ ನೊಗವ
ಸ್ವಾತಂತ್ರ್ಯಕ್ಕಾಗಿ ನೀ ಬಂಡಾಯ
ಹೂಡಿದಾಗ.”
41 : ತಂದೆಯಿಂದ ಯಕೋಬನು ಪಡೆದುಕೊಂಡ ಆಶೀರ್ವಾದದ ನಿಮಿತ್ತ ಏಸಾವನು ಯಕೋಬನ ಮೇಲೆ ಹಗೆಗೊಂಡನು. “ತಂದೆಯ ಮರಣಕ್ಕಾಗಿ ದುಃಖಿಸುವ ಕಾಲ ಸವಿೂಪಿಸಿತು. ಆ ಬಳಿಕ ನನ್ನ ತಮ್ಮ ಯಕೋಬನನ್ನು ಕೊಂದುಹಾಕುತ್ತೇನೆ,” ಎಂದು ತನ್ನೊಳಗೇ ನೆನೆಸಿಕೊಂಡನು.
42 : ತನ್ನ ಹಿರಿಯ ಮಗ ಏಸಾವನ ಅನಿಸಿಕೆಯು ರೆಬೆಕ್ಕಳಿಗೆ ತಿಳಿದು ಬಂದಾಗ ಆಕೆ ತನ್ನ ಕಿರಿಯ ಮಗ ಯಕೋಬನನ್ನು ಕರೆದು ಹೀಗೆಂದಳು: “ನೋಡು, ನಿನ್ನ ಅಣ್ಣ ಏಸಾವನು ನಿನ್ನನ್ನು ಕೊಂದು ಸೇಡುತೀರಿಸಿಕೊಳ್ಳಬೇಕೆಂದಿದ್ದಾನೆ.
43 : ಆದುದರಿಂದ ಮಗನೇ, ನನ್ನ ಮಾತನ್ನು ಕೇಳು: ನೀನು ಎದ್ದು ಖಾರಾನ್ ಊರಿನಲ್ಲಿರುವ ನನ್ನ ಅಣ್ಣ ಲಾಬಾನನ ಬಳಿಗೆ ಓಡಿಹೋಗು.
44 : ಕೆಲವು ಕಾಲ, ಅಂದರೆ ನಿನ್ನಣ್ಣನ ಕೋಪ ಶಮನ ಆಗುವವರೆಗೂ ಅವನ ಬಳಿಯಲ್ಲೇ ಇರು.
45 : ನಿನ್ನ ಅಣ್ಣನು ನೀನು ಮಾಡಿರುವುದನ್ನು ಮರೆತು ತನ್ನ ಕೋಪವನ್ನು ಬಿಟ್ಟಾಗ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುತ್ತೇನೆ. ನಾನೇತಕ್ಕೆ ನಿಮ್ಮಿಬ್ಬರನ್ನೂ ಒಂದೇ ದಿನದಲ್ಲಿ ಕಳೆದುಕೊಳ್ಳಬೇಕು?” ಎಂದು ಹೇಳಿದಳು.
46 :
ಅನಂತರ ರೆಬೆಕ್ಕಳು ಇಸಾಕನಿಗೆ, “ಹಿತ್ತಿಯರಾದ ಈ ಹೆಣ್ಣುಗಳ ದೆಸೆಯಿಂದ ನನ್ನ ಬಾಳು ಬೇಸರವಾಗಿದೆ. ಯಕೋಬನು ಕೂಡ ಈ ನಾಡಿನ ಹೆಣ್ಣನ್ನು ಆರಿಸಿಕೊಂಡು ಇಂಥ ಹಿತ್ತಿಯ ಹುಡುಗಿಯನ್ನೇ ಮದುವೆಮಾಡಿಕೊಂಡರೆ ನಾನು ಇನ್ನು ಬದುಕಿ ಪ್ರಯೋಜನ ಇಲ್ಲ,” ಎಂದು ಹೇಳಿದಳು.