Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಪರಲೋಕ-ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು.
2 : ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು
3 : ಆ ಏಳನೆಯ ದಿನವು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲ ಮುಗಿಸಿ ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.
4 : ಇತಿ, ಪರಲೋಕ - ಭೂಲೋಕಗಳ ನಿರ್ಮಾಣ ಚರಿತ್ರೆ.
5 : ದೇವರಾದ ಸರ್ವೇಶ್ವರ ಸ್ವಾಮಿ ಪರಲೋಕ - ಭೂಲೋಕಗಳನ್ನು ಸೃಷ್ಟಿ ಮಾಡಿದಾಗ ಯಾವ ಗಿಡಗಳೂ ಭೂಮಿಯಲ್ಲಿ ಇರಲಿಲ್ಲ. ಯಾವ ಬೀಜವೂ ಮೊಳೆತಿರಲಿಲ್ಲ. ಏಕೆಂದರೆ ದೇವರಾದ ಸರ್ವೇಶ್ವರ ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ.
6 : ಆದರೂ ಭೂಮಿಯಿಂದ ನೀರು ಉಕ್ಕಿಬಂದು ನೆಲಕ್ಕೆ ನೀರೆರೆಯುತ್ತಿತ್ತು.
7 : ಹೀಗಿರಲು, ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು.
8 : ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.
9 : ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು - ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು.
10 : ಏದೆನ್ ಪ್ರದೇಶದಲ್ಲಿ ಒಂದು ನದಿ ಹುಟ್ಟಿ ಆ ವನಕ್ಕೆ ನೀರೆರೆಯುತ್ತಿತ್ತು. ಅದು ಅಲ್ಲಿಂದ ಹರಿದು ಆಚೆಕಡೆ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು.
11 : ಮೊದಲನೆಯದರ ಹೆಸರು ಪೀಶೋನ್. ಇದು ಬಂಗಾರ ದೊರಕುವ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಆ ದೇಶದ ಬಂಗಾರ ಅಪ್ಪಟವಾದುದು.
12 : ‘ಬದೋಲಖ’ ಎಂಬ ವಿಶೇಷ ಸಾಂಬ್ರಾಣಿ, ‘ಗೋಮೇಧಿಕ’ ಎಂಬ ರತ್ನವೂ ಅಲ್ಲಿ ದೊರಕುತ್ತವೆ.
13 : ಎರಡನೆ ನದಿಯ ಹೆಸರು ಗೀಹೋನ್, ಇದು ಕೂಷ್ ದೇಶವನ್ನೆಲ್ಲಾ ಸುತ್ತುತ್ತದೆ.
14 : ಮೂರನೇ ನದಿಯ ಹೆಸರು ಟೈಗ್ರಿಸ್. ಇದು ಅಸ್ಸೀರಿಯಾ ದೇಶದ ಪೂರ್ವಕ್ಕೆ ಹರಿಯುತ್ತದೆ. ನಾಲ್ಕನೆಯದು ಯೂಫ್ರೆಟಿಸ್ ನದಿ.
15 : ದೇವರಾದ ಸರ್ವೇಶ್ವರ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಬಿಟ್ಟರು.
16 : ಇದಲ್ಲದೆ, ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ “ನೀನು ಈ ತೋಟದಲ್ಲಿರುವ ಎಲ್ಲ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು.
17 : ಆದರೆ ಒಳಿತು - ಕೆಡುಕುಗಳ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದೆಯಾದರೆ, ಅದೇ ದಿನ ಸತ್ತು ಹೋಗುವೆ,” ಎಂದು ವಿಧಿಸಿದರು.
18 : ಅನಂತರ ದೇವರಾದ ಸರ್ವೇಶ್ವರ, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿ ಮಾಡುವೆನು,” ಎಂದರು.
19 : ಎಲ್ಲ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿದ ಅವರು, ಮನುಷ್ಯನು ಇವುಗಳಿಗೆ ಏನೇನು ಹೆಸರಿಡುವನೋ ನೋಡೋಣವೆಂದು ಅವನ ಬಳಿಗೆ ಅವುಗಳನ್ನು ಬರಮಾಡಿದರು. ಆ ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳಿಗೆ ಹೆಸರು ಆಯಿತು.
20 : ಹೀಗೆ ಮನುಷ್ಯನು ಎಲ್ಲ ಸಾಕು ಪ್ರಾಣಿಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡು ಮೃಗಗಳಿಗೂ ಹೆಸರಿಟ್ಟನು; ಆದರೆ ಅವನಿಗೆ ಸರಿಬೀಳುವ ಜೊತೆಗಾತಿ ಅವುಗಳಲ್ಲಿ ಕಾಣಿಸಲಿಲ್ಲ.
21 : ಹೀಗಿರುವಲ್ಲಿ ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿದರು. ಅವನು ನಿದ್ರಿಸುತ್ತಿರುವಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು.
22 : ಆ ಎಲುಬನ್ನು ಮಹಿಳೆಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಬರಮಾಡಿದರು.
23 : ಅವನು ಆಕೆಯನ್ನು ನೋಡಿ ಹೀಗೆಂದನು: ಸರಿ, ನನಗೀಗ ಇವಳು ನನ್ನೆಲುಬಿನ ಎಲುಬು, ನನ್ನೊಡಲಿನ ಒಡಲು ನರನಿಂದ ಉತ್ಪತ್ತಿಯಾದಿವಳನ್ನು ನಾರಿಯೆಂದೇ ಕರೆವರು.
24 : ಈ ಕಾರಣ, ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು.
25 : ಆ ಸ್ತ್ರೀಪುರುಷರಿಬ್ಬರೂ ಬೆತ್ತಲೆ ಆಗಿದ್ದರೂ ನಾಚಿಕೊಳ್ಳಲಿಲ್ಲ.

· © 2017 kannadacatholicbible.org Privacy Policy