1 :
ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರ ಸ್ವಾಮಿಯ ದರ್ಶನವಾಯಿತು.
2 : ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ,
3 : ಸ್ವಾವಿೂ, ದಯವಿರಲಿ, ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿ.
4 : ನೀರು ತರಿಸಿಕೊಡುತ್ತೇನೆ. ಕಾಲು ತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ.
5 : ಸ್ವಲ್ಪ ಆಹಾರ ತರುತ್ತೇನೆ. ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತಿದ್ದೀರಲ್ಲವೆ?” ಎನ್ನಲು ಅವರು “ನೀನು ಹೇಳಿದಂತೆಯೇ ಆಗಲಿ,” ಎಂದರು.
6 : ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿ ಆಕೆಗೆ, “ಹಸನಾದ ಮೂರು ಸೇರುಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು,” ಎಂದನು.
7 : ಅನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆಮಾಡಿದನು.
8 : ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗೂ ಅಟ್ಟಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡಿ ಮುಗಿಸುವವರೆಗೂ ಅವನೇ ಹತ್ತಿರ ನಿಂತು ಉಪಚಾರ ಮಾಡಿದನು.
9 : ಬಳಿಕ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಆ ಅತಿಥಿಗಳು ವಿಚಾರಿಸಿದಾಗ, “ಅಲ್ಲಿ ಗುಡಾರದಲ್ಲಿದ್ದಾಳೆ,” ಎಂದು ಉತ್ತರಕೊಟ್ಟನು.
10 : ಆಗ ಸರ್ವೇಶ್ವರಸ್ವಾಮಿ, “ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಳಿಗೆ ಮಗನಿರುತ್ತಾನೆ,” ಎಂದರು. ಈ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿದ್ದಿತು.
11 : ಅಬ್ರಹಾಮನು ಮತ್ತು ಸಾರಳು ಬಹುವೃದ್ಧರಾಗಿದ್ದರು; ಸಾರಳಿಗೆ ಮುಟ್ಟು ನಿಂತು ಹೋಗಿತ್ತು.
12 : ಎಂತಲೇ ಆಕೆ, “ನನ್ನಂಥ ಮುದುಕಿಗೆ ಸಂಭೋಗ ಸಾಧ್ಯವೆ? ನನ್ನ ಯಜಮಾನರೂ ಮುದುಕರಲ್ಲವೆ?” ಎಂದುಕೊಂಡು ನಕ್ಕಳು.
13 : ಅಬ್ರಹಾಮನಿಗೆ, ಸರ್ವೇಶ್ವರ “ಸಾರಳು ತಾನು ಮುದುಕಿಯಾದ ಕಾರಣ ಹೆರಲು ಸಾಧ್ಯವೆ’ ಎಂದು ನಕ್ಕಿದ್ದು ಏಕೆ?
14 : ಸರ್ವೇಶ್ವರನಿಗೆ ಅಸಾಧ್ಯವಾದುದು ಯಾವುದು? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುತ್ತಾನೆ” ಎಂದು ಹೇಳಿದರು.
15 : ಆಗ ಸಾರಳು ಭಯದಿಂದ, “ನಾನು ನಗಲಿಲ್ಲ” ಎಂದು ನಿರಾಕರಿಸಿದಳು. ಸರ್ವೇಶ್ವರ, “ಹಾಗನ್ನಬೇಡಮ್ಮಾ, ನೀನು ನಕ್ಕದ್ದು ನಿಜ,” ಎಂದರು.
16 : ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮ್ ಕಾಣಿಸುತ್ತಿದ್ದ ಒಂದು ಸ್ಥಳಕ್ಕೆ ಬಂದರು. ಅವರನ್ನು ಸಾಗಕಳುಹಿಸುತ್ತಾ ಅಬ್ರಹಾಮನೂ ಅವರ ಜೊತೆಯಲ್ಲೇ ಅಲ್ಲಿಗೆ ಬಂದನು.
17 : ಆಗ ಸರ್ವೇಶ್ವರ ತಮ್ಮೊಳಗೆ ಇಂತೆಂದುಕೊಂಡರು: “ನಾನು ಮಾಡಬೇಕು ಎಂದಿರುವ ಕಾರ್ಯವನ್ನು ಅಬ್ರಹಾಮನಿಂದ ಮರೆಮಾಡುವುದು ಸರಿಯಲ್ಲ.
18 : ಅವನಿಂದ ಮಹಾ ಬಲಿಷ್ಠವಾದ ರಾಷ್ಟ್ರವೊಂದು ಹುಟ್ಟಬೇಕಾಗಿದೆ. ಅವನ ಮುಖಾಂತರ ಜಗದ ಎಲ್ಲ ರಾಷ್ಟ್ರಗಳಿಗೆ ನನ್ನ ಆಶೀರ್ವಾದ ದೊರಕಬೇಕಾಗಿದೆ.
19 : ಅವನು ತನ್ನ ಪುತ್ರ ಪೌತ್ರರಿಗೆ, ‘ನೀವು ನ್ಯಾಯ ನೀತಿಯನ್ನು ಪಾಲಿಸುತ್ತಾ ಸರ್ವೇಶ್ವರಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು,’ ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ.”
20 : ಇದಲ್ಲದೆ ಸರ್ವೇಶ್ವರ, “ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪಕೃತ್ಯವೂ ಘೋರವಾದುದು.
21 : ನನಗೆ ಮುಟ್ಟಿರುವ ದೂರಂತೆ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ,” ಎಂದುಕೊಂಡರು.
22 : ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಸರ್ವೇಶ್ವರಸ್ವಾಮಿಯ ಸಂಗಡವೇ ಉಳಿದುಕೊಂಡನು.
23 : ಅವನು ಅವರ ಹತ್ತಿರಕ್ಕೆ ಬಂದು, “ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶ ಮಾಡುವಿರೋ?
24 : ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ಸಜ್ಜನರಿದ್ದಾರು. ಅದರಲ್ಲಿ ಐವತ್ತು ಮಂದಿ ಸಜ್ಜನರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ?
25 : ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೆ?” ಎಂದನು.
26 : ಅದಕ್ಕೆ ಸರ್ವೇಶ್ವರ, “ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುತ್ತೇನೆ,” ಎಂದರು.
27 : ಆಗ ಅಬ್ರಹಾಮನು “ನಾನಂತೂ ಮಣ್ಣುಬೂದಿ. ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ.
28 : ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು ಮಂದಿ ಕಡಿಮೆಯಾಗಿದ್ದಾರು. ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶ ಮಾಡುವಿರೋ?” ಎಂದು ಕೇಳಲು ಸರ್ವೇಶ್ವರ, “ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವುದಿಲ್ಲ” ಎಂದರು.
29 : ಅಬ್ರಹಾಮನು ಇನ್ನೂ ಮುಂದುವರೆದು, “ಒಂದು ವೇಳೆ ಅಲ್ಲಿ ನಲವತ್ತು ಮಂದಿ ಸಿಕ್ಕಾರು” ಎನ್ನಲು “ನಲವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ,” ಎಂದರು.
30 : ಅಬ್ರಹಾಮನು, “ಸ್ವಾವಿೂ, ಕೋಪಮಾಡಬೇಡಿ; ಇನ್ನೂ ಮಾತಾಡುತ್ತೇನೆ. ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಸರ್ವೇಶ್ವರ, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೂ ಅದನ್ನು ನಾಶಮಾಡುವುದಿಲ್ಲ” ಎಂದರು.
31 : ಅವನು, “ಸ್ವಾಮಿಯ ಸಂಗಡ ಮಾತನಾಡಲು ನಾನು ಇನ್ನೂ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತೇ ಮಂದಿ ಅಲ್ಲಿ ಸಿಕ್ಕಾರು,” ಎನ್ನಲು, ಸರ್ವೇಶ್ವರ, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು.
32 : ಅಬ್ರಹಾಮನು, “ಸ್ವಾವಿೂ, ಸಿಟ್ಟುಗೊಳ್ಳಬೇಡಿ; ಇನ್ನು ಒಂದೇ ಒಂದು ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತೇ ಮಂದಿ ಸಿಕ್ಕಾರು” ಎನ್ನಲು, ಸರ್ವೇಶ್ವರ, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು.
33 : ಅನಂತರ ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿ ಸರ್ವೇಶ್ವರಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.