Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಆ ದಿನಗಳಲ್ಲಿ ಬಾಬಿಲೋನಿನ ಅರಸ ಅಮ್ರಾಫೆಲನು, ಎಲ್ಲಸಾರಿನ ಅರಸ ಅರಿಯೋಕನು, ಏಲಾಮಿನ ಅರಸ ಕೆದೊರ್ಲ ಗೋಮರನು ಮತ್ತು ಗೋಯಿಮದ ಅರಸ ತಿದ್ಗಾಲನು - ಈ ನಾಲ್ವರು
2 : ಈಗ ಲವಣ ಸಮುದ್ರ ಎನಿಸಿಕೊಳ್ಳುವ ಸಿದ್ದೀಮ್ ತಗ್ಗುಪ್ರದೇಶದಲ್ಲಿ ಒಂದುಗೂಡಿದ್ದ ಸೊದೋಮಿನ ಅರಸ ಬೆರಗ, ಗೊಮೋರದ ಅರಸ ಬಿರ್ಶಗ, ಅದ್ಮಾಹದ ಅರಸ ಶಿನಾಬ, ಚೆಬೋಯಿಮನ ಅರಸ ಶೆಮೇಬರ, ಬೆಲಗಿನ (ಅಂದರೆ ಚೋಗರದ) ಅರಸ - ಈ ಐವರೊಡನೆ ಯುದ್ಧಮಾಡಿದರು.
3 : ಈಗ ಲವಣ ಸಮುದ್ರ ಎನಿಸಿಕೊಳ್ಳುವ ಸಿದ್ದೀಮ್ ತಗ್ಗುಪ್ರದೇಶದಲ್ಲಿ ಒಂದುಗೂಡಿದ್ದ ಸೊದೋಮಿನ ಅರಸ ಬೆರಗ, ಗೊಮೋರದ ಅರಸ ಬಿರ್ಶಗ, ಅದ್ಮಾಹದ ಅರಸ ಶಿನಾಬ, ಚೆಬೋಯಿಮನ ಅರಸ ಶೆಮೇಬರ, ಬೆಲಗಿನ (ಅಂದರೆ ಚೋಗರದ) ಅರಸ - ಈ ಐವರೊಡನೆ ಯುದ್ಧಮಾಡಿದರು.
4 : ಬೆರಗ ಮೊದಲಾದ ಈ ಐದು ಅರಸರು ಹನ್ನೆರಡು ವರ್ಷಕಾಲ ಕೆದೊರ್ಲಗೋಮರನಿಗೆ ಅಧೀನರಾಗಿ ಇದ್ದರು. ಹದಿಮೂರನೆಯ ವರ್ಷದಲ್ಲಿ ತಿರುಗಿಬಿದ್ದರು.
5 : ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಮತ್ತು ಅವನಿಗೆ ಸೇರಿದ ರಾಜರೂ ಬಂದು ಅಷ್ಟರೋತ್ ಕರ್ನಯಿಮ್ ಎಂಬಲ್ಲಿ ರೆಫಾಯರನ್ನೂ ಹಾಮ್ ಎಂಬಲ್ಲಿ ಏಮಿಯರನ್ನೂ ಸೋಲಿಸಿದರು.
6 : ಇದಲ್ಲದೆ ಎದೋಮ್ ಗುಡ್ಡ ಪ್ರಾಂತ್ಯದಲ್ಲಿ ವಾಸವಾಗಿದ್ದ ಹೋರಿಯರನ್ನು ಅಲ್ಲೇ ಸೋಲಿಸಿ, ಮರಳುಗಾಡಿಗೆ ಹತ್ತಿರವಿರುವ ಏಲ್ಪಾರಾನಿನವರೆಗೂ ಹಿಂದಟ್ಟಿದರು.
7 : ಅನಂತರ ಎನ್ಮಿಷ್ಪಾಟ್ ಎನ್ನಲ್ಪಟ್ಟ ಕಾದೇಶ್‍ಗೆ ಹಿಂದಿರುಗಿ ಬಂದು ಅಮಾಲೇಕ್ಯರ ಸಮಸ್ತ ನಾಡನ್ನು ಮತ್ತು ಹಚಚೋನ್ ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಜಯಿಸಿದರು.
8 : ಆಗ ಸೊದೋಮ್, ಗೊಮೋರ, ಅದ್ಮಾಹ, ಚೆಬೋಯಿಮ್, ಚೋಗರ್ ಎಂಬ ಬೇಲಗ್, ಈ ಪಟ್ಟಣಗಳ ರಾಜರು ಹೊರಟು ಅವರೆಗೆದುರಾಗಿ, ಅಂದರೆ
9 : ಏಲಾಮನ ಅರಸ ಕೆದೊರ್ಲಗೋಮರ್, ಗೋಯಿಮದ ಅರಸ ತಿದ್ಗಾಲ, ಬಾಬಿಲೋನಿನ ಅರಸ ಅಮ್ರಾಫೆಲ, ಎಲ್ಲಸಾರಿನ ಅರಸ ಅರಿಯೋಕ ಇವರಿಗೆ ವಿರೋಧವಾಗಿ ಸಿದ್ದೀಮ್ ತಗ್ಗುಪ್ರದೇಶದಲ್ಲಿ ತಮ್ಮ ದಂಡನ್ನು ನಿಲ್ಲಿಸಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರನ್ನು ಎದುರಿಸಿದರು.
10 : ಆ ಸಿದ್ದೀಮ್ ತಗ್ಗಿನಲ್ಲಿ ಕಲ್ಲರಗಿನ ಕೆಸರುಗುಣಿಗಳು ಬಹಳವಿದ್ದವು. ಸೊದೋಮ್ ಗೋಮೋರದ ರಾಜರಕಡೆಯವರು ಹಿಮ್ಮೆಟ್ಟಿ ಓಡಿ ಹೋಗುವಾಗ ಆ ಗುಣಿಗಳಲ್ಲಿ ಬಿದ್ದು ಸತ್ತರು. ಉಳಿದವರು ಬೆಟ್ಟಗಳಿಗೆ ಓಡಿಹೋದರು.
11 : ಗೆದ್ದ ಆ ನಾಲ್ಕು ರಾಜರು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಸೂರೆಮಾಡಿದರು. ಅವುಗಳಲ್ಲಿದ್ದ ಆಸ್ತಿಪಾಸ್ತಿಯನ್ನೂ ದವಸ ಧಾನ್ಯಗಳನ್ನೂ ದೋಚಿಕೊಂಡು ಹೋದರು.
12 : ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗ ಲೋಟನನ್ನು ಅವನ ಆಸ್ತಿಪಾಸ್ತಿ ಸಹಿತ ಹಿಡಿದುಕೊಂಡು ಹೋದರು.
13 : ತಪ್ಪಿಸಿಕೊಂಡು ಓಡಿಹೋದವರಲ್ಲಿ ಒಬ್ಬ ವ್ಯಕ್ತಿ ಹಿಬ್ರಿಯನಾದ ಅಬ್ರಾಮನ ಬಳಿಗೆ ಬಂದು ನಡೆದುದನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿ ವಾಸವಾಗಿದ್ದನು. ಮಮ್ರೆಯನಿಗೆ ಎಷ್ಕೋಲ ಮತ್ತು ಆನೇರ ಎಂಬ ಸಹೋದರರಿದ್ದರು. ಇವರಿಗೂ ಅಬ್ರಾಮನಿಗೂ ಒಪ್ಪಂದವಿತ್ತು.
14 : ಅಬ್ರಾಮನು ತನ್ನ ತಮ್ಮನ ಮಗ ಸೆರೆಗೆ ಸಿಕ್ಕಿರುವುದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದು ಸುಶಿಕ್ಷಿತರಾದ 318 ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧ ಮಾಡಿಕೊಂಡು ಹೊರಟನು. ಈ ನಾಲ್ಕು ಮಂದಿ ರಾಜರನ್ನು ದಾನೂರಿನವರೆಗೆ ಹಿಂದಟ್ಟಿದನು.
15 : ಅಲ್ಲಿ ತನ್ನ ದಂಡನ್ನು ಇಬ್ಭಾಗವಾಗಿ ವಿಂಗಡಿಸಿ ರಾತ್ರಿ ವೇಳೆಯಲ್ಲಿ ಶತ್ರುಗಳ ಮೇಲೆಬಿದ್ದು ಸೋಲಿಸಿದನು. ಅಲ್ಲದೆ ದಮಸ್ಕಸ್ ಪಟ್ಟಣದ ಉತ್ತರಕ್ಕಿರುವ ಹೋಬಾ ಊರಿನತನಕ ಹಿಂದಟ್ಟಿದನು.
16 : ಆ ರಾಜರು ಅಪಹರಿಸಿದ್ದ ಎಲ್ಲ ವಸ್ತುಗಳನ್ನು ಕಿತ್ತುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನು ಬಿಡುಗಡೆ ಮಾಡಿದನು; ಅವನ ಆಸ್ತಿಪಾಸ್ತಿಯನ್ನು, ಸೆರೆಯಲ್ಲಿದ್ದ ಮಹಿಳೆಯರನ್ನು ಮತ್ತು ಇತರರನ್ನು ಬಿಡಿಸಿಕೊಂಡು ಹಿಂದಿರುಗಿದನು.
17 : ಅಬ್ರಾಮನು ಕೆದೊರ್ಲಗೋಮರನನ್ನೂ ಅವನೊಂದಿಗಿದ್ದ ರಾಜರನ್ನೂ ಸೋಲಿಸಿ ಬಂದಾಗ ಸೊದೋಮಿನ ಅರಸನು ಅವನನ್ನು ಶಾವೆ ತಗ್ಗಿನಲ್ಲಿ (ಅದಕ್ಕೆ ಅರಸನ ತಗ್ಗು ಎಂಬ ಹೆಸರೂ ಉಂಟು) ಭೇಟಿಯಾಗಲು ಬಂದನು.
18 : ಸಾಲೇಮಿನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು:
19 : “ ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಆಶೀರ್ವಾದ ಅಬ್ರಾಮನಿಗಿರಲಿ; ನಿನ್ನ ಶತ್ರುಗಳನ್ನು ನಿನ್ನ ಕೈವಶ ಮಾಡಿದ ಆ ಪರಾತ್ಪರ ದೇವರಿಗೆ ಸ್ತೋತ್ರವಾಗಲಿ!”
20 : ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕಿಸದೇಕನಿಗೆ ಕೊಟ್ಟನು.
21 : ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿ ತಂದ ಜನರನ್ನು ನನಗೆ ಕೊಡು: ಆಸ್ತಿಯನ್ನು ನೀನೇ ಇಟ್ಟುಕೊ,” ಎಂದನು.
22 : ಅದಕ್ಕೆ ಅಬ್ರಾಮನು, “ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಕಡೆಗೆ ಕೈಯೆತ್ತಿ ಪ್ರಮಾಣ ಮಾಡುತ್ತೇನೆ:
23 : ನಿನಗೆ ಸೇರಿದವುಗಳಲ್ಲಿ ಯಾವುದನ್ನೂ, ಒಂದು ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ‘ನನ್ನಿಂದ ಅಬ್ರಾಮನು ಐಶ್ವರ್ಯವಂತನಾದ’ ಎಂದು ಹೇಳಿಕೊಳ್ಳುವುದಕ್ಕೂ ನಿನಗೆ ಆಸ್ಪದ ಇರಬಾರದು.
24 : ನನಗೆ ಏನೂ ಬೇಡ. ಆಳುಗಳು ತಿಂದದ್ದು ಸಾಕು. ನನ್ನ ಜೊತೆಗಾರರಾದ ಅನೇರ, ಎಷ್ಕೋಲ ಮತ್ತು ಮಮ್ರೆ ಅವರಿಗೆ ಬರತಕ್ಕ ಪಾಲು ಮಾತ್ರ ಅವರಿಗೆ ಸೇರಲಿ,” ಎಂದು ಹೇಳಿದನು.

· © 2017 kannadacatholicbible.org Privacy Policy