Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆದಿಕಾಂಡ


1 : ಅಬ್ರಾಮನು ತನ್ನದುದನ್ನೆಲ್ಲಾ ತೆಗೆದುಕೊಂಡು ಹೆಂಡತಿ ಮತ್ತು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.
2 : ಈಗ ಅವನಿಗೆ ಪಶುಪ್ರಾಣಿಗಳಿದ್ದವು, ಬೆಳ್ಳಿ ಬಂಗಾರವಿತ್ತು. ಅವನೀಗ ಘನ ಧನವಂತನಾಗಿದ್ದನು.
3 : ಅಲ್ಲಿಂದ ಮುಂದೆ ಪ್ರಯಾಣ ಮಾಡುತ್ತಾ
4 : ಬೇತೇಲಿಗೂ ಆಯಿ ಎಂಬ ಊರಿಗೂ ನಡುವೆ ತಾನು ಹಿಂದೆ ಗುಡಾರ ಹಾಕಿ ಬಲಿಪೀಠವನ್ನು ಕಟ್ಟಿದ ಕ್ಷೇತ್ರವನ್ನು ತಲುಪಿದನು. ಅಲ್ಲಿ ಸರ್ವೇಶ್ವರಸ್ವಾಮಿಯ ನಾಮಸ್ಮರಣೆ ಮಾಡಿ ಆರಾಧಿಸಿದನು.
5 : ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೆ ಕುರಿಮಂದೆಗಳೂ ದನಕರುಗಳೂ ಗುಡಾರಬಿಡಾರಗಳೂ ಇದ್ದವು.
6 : ಈ ಕಾರಣ ಅವರಿಬ್ಬರ ಜೀವನಕ್ಕೆ ಅಲ್ಲಿ ಸ್ಥಳ ಸಾಲದೆ ಹೋಯಿತು. ಇಬ್ಬರಿಗೂ ಪಶುಪ್ರಾಣಿಗಳು ಹೇರಳವಾಗಿದ್ದುದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರಲು ಆಗಲಿಲ್ಲ.
7 : ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಬೇರೆ. ಇದೂ ಅಲ್ಲದೆ, ಆ ಕಾಲದಲ್ಲಿ ಕಾನಾನ್ಯರೂ ಪೆರಿಜೀಯರೂ ಅದೇ ನಾಡಿನಲ್ಲಿ ವಾಸವಾಗಿದ್ದರು.
8 : ಆದುದರಿಂದ ಅಬ್ರಾಮನು ಲೋಟನಿಗೆ ಹೀಗೆಂದನು: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು. ನಾವು ಬಳಗದವರು.
9 : ನಾಡೆಲ್ಲಾ ನಿನ್ನ ಕಣ್ಮುಂದಿದೆ. ದಯವಿಟ್ಟು ನನ್ನನ್ನು ಬಿಟ್ಟು ಬೇರೆ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುತ್ತೇನೆ.”
10 : ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೊದೋಮ್ - ಗೊಮೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯ ಪಡೆದಿತ್ತು.
11 : ಆದುದರಿಂದ ಲೋಟನು ಜೋರ್ಡನ್ ನದಿಯ ಸುತ್ತಲಿನ ಪ್ರದೇಶವನ್ನು ಆರಿಸಿಕೊಂಡು ಪೂರ್ವ ದಿಕ್ಕಿನ ಕಡೆಗೆ ಹೊರಟನು. ಹೀಗೆ ಅವರಿಬ್ಬರೂ ಬೇರೆ ಬೇರೆ ಆದರು.
12 : ಜೋರ್ಡನ್ ನದಿಯ ಸುತ್ತಣ ಊರುಗಳಲ್ಲಿ ವಾಸಮಾಡುತ್ತಾ ಸೊದೋಮ್‍ಗೆ ಸವಿೂಪದಲ್ಲಿ ಗುಡಾರ ಹಾಕಿದನು.
13 : ಸೊದೋಮಿನ ಪಟ್ಟಣದವರು ಬಹಳ ದುಷ್ಟರು. ಪ್ರಭುವಿನ ದೃಷ್ಟಿಯಲ್ಲಿ ಕಡುಪಾಪಿಗಳು.
14 : ಲೋಟನು ಅಬ್ರಾಮನನ್ನು ಬಿಟ್ಟುಹೋದ ಬಳಿಕ ಸರ್ವೇಶ್ವರಸ್ವಾಮಿ ಅಬ್ರಾಮನಿಗೆ, “ನೀನು ಇರುವ ಸ್ಥಳದಿಂದಲೇ ದಕ್ಷಿಣೋತ್ತರ ಪೂರ್ವ ಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡು.
15 : ನಿನ್ನ ಕಣ್ಣಿಗೆ ಕಾಣಿಸುವ ಈ ಪ್ರಾಂತ್ಯವನ್ನೆಲ್ಲಾ ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾಗಿ ಕೊಡುತ್ತೇನೆ.
16 : ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯಾತರನ್ನಾಗಿ ಮಾಡುತ್ತೇನೆ. ಭೂಮಿಯ ಧೂಳನ್ನು ಲೆಕ್ಕಿಸಲು ಸಾಧ್ಯವಾದಲ್ಲಿ ನಿನ್ನ ಸಂತಾನದವರನ್ನು ಲೆಕ್ಕಿಸಲು ಸಾಧ್ಯವಾದೀತು.
17 : ನೀನೆದ್ದು ಈ ನಾಡಿನ ಉದ್ದಗಲಕ್ಕೂ ತಿರುಗಾಡು; ಇದನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಹೇಳಿದರು
18 : ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರ ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆವೃಕ್ಷಗಳ ತೋಪಿಗೆ ಬಂದು ವಾಸಮಾಡಿದನು. ಸರ್ವೇಶ್ವರಸ್ವಾಮಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.

· © 2017 kannadacatholicbible.org Privacy Policy