1 : ಆ ಯಜ್ಞದ ಕುರಿಮರಿ ಏಳನೆಯ ಮುದ್ರೆಯನ್ನು ಒಡೆದಾಗ ಸ್ವರ್ಗದಲ್ಲಿ ಅರ್ಧ ಗಂಟೆಯವರೆಗೆ ಮೌನವುಂಟಾಯಿತು.
2 : ಬಳಿಕ ನಾನು, ದೇವರ ಸಾನ್ನಿಧ್ಯದಲ್ಲಿ ನಿಂತಿದ್ದ ಏಳು ದೇವದೂತರನ್ನು ಕಂಡೆ. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು.
3 : ಅನಂತರ ಮತ್ತೊಬ್ಬ ದೇವದೂತನು ಬಂದು ಬಲಿಪೀಠದ ಬಳಿ ನಿಂತನು. ಅವನ ಕೈಯಲ್ಲಿ ಚಿನ್ನದ ಧೂಪಾರತಿ ಇತ್ತು. ಸಿಂಹಾಸನದ ಸಮ್ಮುಖದಲ್ಲಿರುವ ಚಿನ್ನದ ಬಲಿಪೀಠದ ಮೇಲೆ ದೇವಜನರೆಲ್ಲರ ಪ್ರಾರ್ಥನೆಯೊಡನೆ ಸಮರ್ಪಿಸಲು ಅವನಿಗೆ ಬಹಳಷ್ಟು ಧೂಪವನ್ನು ಕೊಡಲಾಗಿತ್ತು.
4 : ದೂಪದ ಸುವಾಸನೆ ದೇವಜನರ ಪ್ರಾರ್ಥನೆಯೊಂದಿಗೆ ಆ ದೂತನ ಕೈಯಿಂದ ದೇವರ ಸನ್ನಿಧಿಗೆ ಏರಿಹೋಯಿತು.
5 : ಅನಂತರ ಆ ದೇವದೂತನು ಧೂಪಾರತಿಯನ್ನು ಎತ್ತಿಕೊಂಡು, ಅದನ್ನು ಬಲಿಪೀಠದ ಮೇಲಿದ್ದ ಕೆಂಡಗಳಿಂದ ತುಂಬಿಸಿ, ಭೂಮಿಗೆ ಎಸೆದನು. ಆಗ ಮಿಂಚು, ಗುಡುಗು, ಗರ್ಜನೆಗಳು ಮತ್ತು ಭೂಕಂಪವು ಉಂಟಾದವು.
ತುತೂರಿಗಳ ನಾದ
6 : ಏಳು ತುತೂರಿಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರು ತಮ್ಮ ತಮ್ಮ ತುತೂರಿಗಳನ್ನು ಊದಲು ಸಿದ್ಧರಾದರು.
7 : ಮೊದಲನೆಯ ದೇವದೂತನು ತುತೂರಿಯನ್ನು ಊದಿದನು. ಭೂಮಿಯ ಮೇಲೆ ರಕ್ತಮಿಶ್ರಿತವಾದ ಆಲಿಕಲ್ಲಿನ ಮತ್ತು ಬೆಂಕಿಯ ಸುರಿಮಳೆಯಾಯಿತು. ಪರಿಣಾಮವಾಗಿ, ಭೂಮಿಯ ಮೂರನೆಯ ಒಂದು ಭಾಗ ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು. ಹಸಿರು ಹುಲ್ಲೆಲ್ಲಾ ಉರಿದುಹೋಯಿತು.
8 : ಎರಡನೆಯ ದೇವದೂತನು ತುತೂರಿಯನ್ನು ಊದಿದನು. ಬೆಂಕಿ ಹತ್ತಿ ಉರಿಯುತ್ತಿರುವ ಪರ್ವತವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರಕ್ಕೆ ಎಸೆಯಲಾಯಿತು. ಸಮುದ್ರದಲ್ಲಿ ಮೂರನೆಯ ಒಂದು ಭಾಗ ರಕ್ತವಾಗಿ ಮಾರ್ಪಟ್ಟಿತು.
9 : ಸಮುದ್ರದಲ್ಲಿದ್ದ ಜಲಜಂತುಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋಯಿತು. ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾಯಿತು.
10 : ಮೂರನೆಯ ದೇವದೂತನು ತುತೂರಿಯನ್ನು ಊದಿದನು. ಪಂಜಿನಂತೆ ಉರಿಯುತ್ತಿದ್ದ ದೊಡ್ಡ ನಕ್ಷತ್ರವೊಂದು ಆಕಾಶದಿಂದ ಕೆಳಕ್ಕೆ ಬಿತ್ತು. ಅದು ನದಿಗಳಲ್ಲಿ ಮೂರನೆಯ ಒಂದು ಭಾಗದ ಮೇಲೂ ನೀರಿನ ಒರತೆಗಳ ಮೇಲೂ ಬಿತ್ತು.
11 : ಆ ನಕ್ಷತ್ರದ ಹೆಸರು ‘ವಿಷಕನ್ಯೆ’. ನೀರಿನಲ್ಲಿ ಮೂರನೆಯ ಒಂದು ಭಾಗ ವಿಷವಾಯಿತು; ಇದರಿಂದಾಗಿ ಅನೇಕರು ನೀರನ್ನು ಕುಡಿದು ಸತ್ತರು.
12 : ನಾಲ್ಕನೆಯ ದೇವದೂತನು ತುತೂರಿಯನ್ನು ಊದಿದನು. ಸೂರ್ಯಚಂದ್ರ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗಕ್ಕೆ ಧಕ್ಕೆ ಉಂಟಾಯಿತು. ಅವುಗಳ ಮೂರನೆಯ ಒಂದು ಭಾಗ ಕಾಂತಿಹೀನವಾಯಿತು. ಇದರಿಂದಾಗಿ ಹಗಲಿನಲ್ಲೂ ರಾತ್ರಿಯಲ್ಲೂ ಮೂರನೆಯ ಒಂದು ಭಾಗದಷ್ಟು ಬೆಳಕು ಕಡಿಮೆಯಾಯಿತು.
13 : ಅನಂತರ ಆಕಾಶ ಮಧ್ಯದಲ್ಲಿ ಒಂದು ಗರುಡ ಪಕ್ಷಿ ಹಾರಾಡುತ್ತಿರುವುದುನ್ನು ನಾನು ಕಂಡೆ. ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತೂರಿಯನ್ನು ಊದುವಾಗ ಭೂನಿವಾಸಿಗಳಿಗೆ ಕೇಡು, ಕೇಡು, ಕೇಡು,” ಎಂದು ಗಟ್ಟಿಯಾಗಿ ಕೂಗುತ್ತಿತ್ತು.