Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರಕಟನೆ


1 : ನಾನು ಈ ದೃಶ್ಯವನ್ನು ಸಹ ಕಂಡೆ: ಸಿಂಹಾಸನದಲ್ಲಿ ಆಸೀನರಾಗಿರುವವರ ಬಲಗೈಯಲ್ಲಿ ಒಂದು ಸುರುಳಿ ಇತ್ತು. ಅದರ ಒಳಭಾಗದಲ್ಲೂ ಹೊರಭಾಗದಲ್ಲೂ ಬರೆಯಲಾಗಿತ್ತು. ಅದನ್ನು ಏಳು ಮುದ್ರೆಗಳಿಂದ ಮುದ್ರಿಸಲಾಗಿತ್ತು.
2 : ಬಲಿಷ್ಠ ದೇವದೂತನೊಬ್ಬನು ಮಹಾಶಬ್ದದಿಂದ, “ಈ ಮುದ್ರೆಗಳನ್ನು ಒಡೆದು ಸುರುಳಿಯನ್ನು ಬಿಚ್ಚಲು ಯೋಗ್ಯನು ಯಾರು?” ಎಂದು ಪ್ರಕಟಿಸಿದನು.
3 : ಸ್ವರ್ಗದಲ್ಲಾಗಲಿ, ಭೂಮಿಯಲ್ಲಾಗಲಿ, ಪಾತಾಳದಲ್ಲಾಗಲಿ, ಆ ಸುರುಳಿಯನ್ನು ಬಿಚ್ಚುವುದಕ್ಕೂ ಇಲ್ಲವೆ ಅದನ್ನು ಬಿಚ್ಚಿನೋಡುವುದಕ್ಕೂ ಯಾರಿಂದಲೂ ಸಾಧ್ಯವಾಗಲಿಲ್ಲ.
4 : ಆ ಸುರುಳಿಯನ್ನು ಬಿಚ್ಚಲೂ ನೋಡಲೂ ಯೋಗ್ಯನು ಒಬ್ಬನೂ ಇಲ್ಲವಲ್ಲ ಎಂದು ನಾನು ಬಹುವಾಗಿ ದುಃಖಿಸಿದೆ.
5 : ಆಗ ಸಭಾ ಪ್ರಮುಖರಲ್ಲಿ ಒಬ್ಬರು ನನಗೆ, “ದುಃಖಿಸಬೇಡ, ಇಗೋ, ಯೂದಕುಲದ ಸಿಂಹವೂ ದಾವೀದನ ವಂಶಜರೂ ಆದ ಒಬ್ಬರು ಜಯಗಳಿಸಿದ್ದಾರೆ. ಅವರು ಆ ಏಳು ಮುದ್ರೆಗಳನ್ನು ಒಡೆದು ಈ ಸುರುಳಿಯನ್ನು ಬಿಚ್ಚಬಲ್ಲರು”, ಎಂದು ಹೇಳಿದರು.
6 : ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಸಭಾಪ್ರಮುಖರಿದ್ದ ಸ್ಥಳಕ್ಕೂ ನಡುವೆ ಒಂದು ಕುರಿಮರಿ ನಿಂತಿರುವುದನ್ನು ಕಂಡೆ. ಅದು ಈಗಾಗಲೇ ಬಲಿಗೋಸ್ಕರ ವಧೆಯಾಗಿದ್ದಂತೆ ಕಾಣುತ್ತಿತ್ತು. ಆ ಕುರಿಮರಿಗೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಇಡೀ ಜಗತ್ತಿಗೆ ಕಳುಹಿಸಲಾದ ದೇವರ ಸಪ್ತ ಆತ್ಮಗಳೇ ಅವು.
7 : ಆ ಯಜ್ಞದ ಕುರಿಮರಿಯಾದವರು ಮುಂದೆ ಬಂದು ಸಿಂಹಾಸನದಲ್ಲಿ ಆಸೀನರಾಗಿದ್ದವರ ಬಲಗೈಯಲ್ಲಿದ್ದ ಸುರುಳಿಯನ್ನು ತೆಗೆದುಕೊಂಡರು.
8 : ಸುರುಳಿಯನ್ನು ತೆಗೆದುಕೊಂಡಾಗ, ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಸಭಾಪ್ರಮುಖರೂ ಆ ಯಜ್ಞದ ಕುರಿಮರಿಯ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಸಭಾಪ್ರಮುಖರ ಕೈಗಳಲ್ಲಿ ಕಿನ್ನರಿಯೂ ಚಿನ್ನದ ಧೂಪಾರತಿಗಳೂ ಇದ್ದವು. ಆ ಧೂಪಾರತಿಗಳಲ್ಲಿ ದೇವಜನರ ಪ್ರಾರ್ಥನೆಯೆಂಬ ಧೂಪವು ತುಂಬಿತ್ತು.
9 : ಅವರು ಈ ಹೊಸ ಗೀತೆಯನ್ನು ಹಾಡುತ್ತಿದ್ದರು: “ಸುರುಳಿಯನ್ನು ಸ್ವೀಕರಿಸಲು ನೀ ಯೋಗ್ಯನು ಅದರ ಮುದ್ರೆಗಳನ್ನು ಮುರಿಯಲು ನೀ ಶಕ್ತನು. ಸಮರ್ಪಿಸಿಕೊಂಡಿರುವೆ ನಿನ್ನನೇ ನೀ ಬಲಿಯರ್ಪಣೆಯಾಗಿ ಸಕಲ ದೇಶ, ಭಾಷೆ, ಕುಲಗೋತ್ರಗಳಿಂದ ಕೊಂಡುಕೊಂಡಿರುವೆ ಮಾನವರನು ನಿನ್ನ ರಕ್ತದಿಂದ.
10 : ಏರ್ಪಡಿಸಿದೆ ನೀ ಅವರನು ನಮ್ಮ ದೇವರಿಗೋಸ್ಕರ ರಾಜವಂಶವಾಗಿ, ಯಾಜಕವರ್ಗವಾಗಿ. ಆಳುವರವರು ಸಮಸ್ತ ಭುವಿಯ ಮೇಲೆ.”
11 : ಅನಂತರ ಅವರ ಸಿಂಹಾಸನದ, ನಾಲ್ಕು ಜೀವಿಗಳ ಹಾಗೂ ಸಭಾಪ್ರಮುಖರ ಸುತ್ತಲೂ ನಿಂತಿದ್ದ ಬಹುಮಂದಿ ದೇವದೂತರ ಸ್ವರವನ್ನು ಕೇಳಿಸಿಕೊಂಡೆ. ಅವರ ಸಂಖ್ಯೆ ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
12 : ಅವರೆಲ್ಲರೂ ಉಚ್ಛಕಂಠದಿಂದ: “ವಧಿತ ಕುರಿಮರಿಯಾದಾತನು ಶಕ್ತಿಯನು, ಸಿರಿತನವನು ಗೌರವವನು, ಘನಮಾನವನು ಸ್ತುತಿಯನು, ಸುಜ್ಞಾನವನು ಹೊಂದಲು ಯೋಗ್ಯನು,” ಎಂದು ಹಾಡಿದರು.
13 : ಇದಲ್ಲದೆ, ಸ್ವರ್ಗ, ಭೂಮಿ, ಪಾತಾಳಗಳಲ್ಲೂ ಸಮುದ್ರದಲ್ಲೂ ಇರುವ ಸಮಸ್ತ ಸೃಷ್ಟಿಗಳು ಹೀಗೆ ಹಾಡುವುದನ್ನು ಕೇಳಿಸಿಕೊಂಡೆ: “ಸಿಂಹಾಸನದಲ್ಲಿ ಕುಳಿತವನಿಗೆ, ಯಜ್ಞಕುರಿಮರಿಯಾದಾತನಿಗೆ ಸಲ್ಲಲಿ ಯುಗಯುಗಾಂತರಕ್ಕೆ ಘನಮಾನ, ಗೌರವ, ಪರಾಕ್ರಮ, ಮತ್ತು ಮಹಿಮೆ.”
14 : ಇದಕ್ಕುತ್ತರವಾಗಿ ಆ ನಾಲ್ಕು ಜೀವಿಗಳು, ‘ಆಮೆನ್’ ಎಂದು ಹೇಳಿದವು. ಸಭಾಪ್ರಮುಖರು ಸಾಷ್ಟಾಂಗವೆರಗಿ ನಮಸ್ಕಾರಮಾಡಿ ಆರಾಧಿಸಿದರು.

· © 2017 kannadacatholicbible.org Privacy Policy