2 : ಎಚ್ಚೆತ್ತು ನಿನ್ನಲ್ಲಿ ಉಳಿದಿರುವುಗಳನ್ನು ಉತ್ತೇಜನಗೊಳಿಸು; ಅವು ಸಾವಿನ ದವಡೆಯಲ್ಲಿವೆ. ನನ್ನ ದೇವರ ದೃಷ್ಟಿಯಲ್ಲಿ ನಿನ್ನ ಕೃತ್ಯಗಳು ಯಾವುವೂ ಸಮಗ್ರವಾಗಿರುವುದು ನನಗೆ ಕಂಡುಬಂದಿಲ್ಲ.
3 : “ಸಾರ್ದಿಸ್‍ನಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ದೇವರ ಸಪ್ತ ಆತ್ಮಗಳನ್ನೂ ಸಪ್ತ ನಕ್ಷತ್ರಗಳನ್ನೂ ಹೊಂದಿರುವಾತನು ನೀಡುವ ಸಂದೇಶವಿದು: ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ಹೆಸರಿಗೆ ಮಾತ್ರ ನೀನು ಜೀವಂತನಾಗಿರುವೆ. ಆದರೆ ವಾಸ್ತವವಾಗಿ ನೀನು ಸತ್ತಂತೆಯೇ ಸರಿ.
3 : ನಿನಗೆ ಕೊಡಲಾದ ಬೋಧನೆಯನ್ನೂ ಅದನ್ನು ನೀನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೋ. ಅದರಂತೆ ನಡೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಎಚ್ಚೆತ್ತುಕೊಳ್ಳದಿದ್ದರೆ ನಾನು ಕಳ್ಳನು ಬರುವಂತೆ ಬರುತ್ತೇನೆ. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧಾಳಿ ಮಾಡುತ್ತೇನೆಂದೇ ನಿನಗೆ ತಿಳಿಯದು.
4 : ಆದರೂ ತಮ್ಮ ಉಡುಪನ್ನು ಮಲಿನ ಮಾಡಿಕೊಳ್ಳದ ಕೆಲವರು ಸಾರ್ದಿಸಿನಲ್ಲಿ ಇದ್ದಾರೆ. ಅಂಥವರು ಯೋಗ್ಯರಾಗಿರುವುದರಿಂದ ಶ್ವೇತಾಂಬರರಾಗಿ ನನ್ನೊಡನೆ ನಡೆದಾಡುವರು.
5 : ಜಯಹೊಂದುವವನು ಹೀಗೆ ಶ್ವೇತಾಂಬರನಾಗುವನು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಹಾಕುವುದಿಲ್ಲ. ನನ್ನ ಪಿತನ ಸಾನ್ನಿಧ್ಯದಲ್ಲಿಯೂ ಅವರ ದೂತರ ಮುಂದೆಯೂ ಅವನು ನನ್ನವನೆಂದು ನಾನು ಒಪ್ಪಿಕೊಳ್ಳುತ್ತೇನೆ.
6 : “ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”
ಫಿಲದೆಲ್ಫಿಯ ಸಭೆಗೆ ಸಂದೇಶ
7 : “ಫಿಲದೆಲ್ಫಿಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ಸತ್ಯವಂತನೂ ಪರಿಶುದ್ಧನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಮನೆತನದ ಬೀಗದ ಕೈ ನನ್ನಲ್ಲಿ ಇದೆ. ನಾನು ಬಾಗಿಲನ್ನು ತೆರೆದರೆ ಬೇರೆ ಯಾರೂ ಅದನ್ನು ಮುಚ್ಚಲಾಗದು. ನಾನು ಬಾಗಿಲನ್ನು ಮುಚ್ಚಿದರೆ ಬೇರೆ ಯಾರೂ ಅದನ್ನು ತೆರೆಯಲಾಗದು. ಈಗ ನಾನು ನಿನಗೆ ಹೇಳುವುದೇನೆಂದರೆ:
8 : ನಾನು ನಿನ್ನ ಕೃತ್ಯಗಳನ್ನು ಬಲ್ಲೆ. ನಿನ್ನ ಎದುರಿನಲ್ಲಿ ಬಾಗಿಲೊಂದನ್ನು ತೆರೆದಿಟ್ಟಿದ್ದೇನೆ. ಅದನ್ನು ಮುಚ್ಚಲು ಯಾರಿಂದಲೂ ಸಾಧ್ಯವಾಗದು. ನಿನ್ನ ಶಕ್ತಿ ಅಲ್ಪವೆಂದು ನನಗೆ ಗೊತ್ತು. ಆದರೂ ನೀನು ನನ್ನನ್ನು ನಿರಾಕರಿಸದೆ ನನ್ನ ಉಪದೇಶವನ್ನು ಅನುಸರಿಸಿ ನಡೆದಿರುವೆ.
9 : ತಾವು ಯೆಹೂದ್ಯರೆಂದು ಕೊಚ್ಚಿಕೊಳ್ಳುವ ‘ಸೈತಾನನ ಕೂಟಕ್ಕೆ’ ಸೇರಿದ ಕೆಲವರಿದ್ದಾರೆ. ಆದರೆ ಅವರು ವಾಸ್ತವವಾಗಿ ಯೆಹೂದ್ಯರಲ್ಲ; ಸುಳ್ಳುಗಾರರು. ಇಗೋ ನೋಡು, ಅವರು ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ಶರಣಾಗುವಂತೆ ಮಾಡುತ್ತೇನೆ. ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುತ್ತೇನೆ.
10 : ಸೈರಣೆಯಿಂದಿರಬೇಕೆಂಬ ನನ್ನ ಉಪದೇಶವನ್ನು ನೀನು ಪಾಲಿಸಿದ್ದರಿಂದ ಭೂಲೋಕದ ನಿವಾಸಿಗಳೆಲ್ಲರನ್ನು ಪರಿಶೋಧಿಸಲೆಂದು ಇಡೀ ಜಗತ್ತಿನ ಮೇಲೆ ಬರಲಿರುವ ಕಡುಶೋಧನೆಯ ಕಾಲದಲ್ಲಿ ನಾನು ನಿನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೇನೆ.
11 : ನಾನು ಬೇಗನೆ ಬರುತ್ತೇನೆ. ನಿನ್ನ ಜಯಮಾಲೆಯನ್ನು ಯಾರೂ ಕಸಿದುಕೊಳ್ಳದಂತೆ ನೀನು ಅವಲಂಬಿಸಿರುವುದನ್ನೇ ಆಶ್ರಯಿಸಿಕೊಂಡಿರು.
12 : ಜಯ ಹೊಂದಿದವನನ್ನು ನನ್ನ ದೇವರ ಆಲಯದ ಸ್ತಂಭವಾಗಿ ನಿಲ್ಲಿಸುತ್ತೇನೆ. ಅವನು ಅಲ್ಲಿಯೇ ನಿರಂತರವಾಗಿ ಇರುತ್ತಾನೆ. ಅವನ ಮೇಲೆ ನನ್ನ ದೇವರ ನಾಮವನ್ನೂ ನನ್ನ ದೇವರ ನಗರವಾದ ನೂತನ ಜೆರುಸಲೇಮಿನ ನಾಮವನ್ನೂ ನನ್ನ ಹೊಸ ನಾಮವನ್ನೂ ಬರೆಯುತ್ತೇನೆ. ಈ ನೂತನ ಜೆರುಸಲೇಮ್ ನನ್ನ ದೇವರ ಸಾನ್ನಿಧ್ಯದಿಂದಲೂ ಸ್ವರ್ಗದಿಂದಲೂ ಇಳಿದು ಬರುತ್ತದೆ.
13 : “ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”
ಲವೊದಿಕೀಯ ಸಭೆಗೆ ಸಂದೇಶ
14 : “ಲವೊದೊಕೀಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ವಿಶ್ವಾಸಪಾತ್ರನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಮೂಲಾಧಾರನೂ ಆದ ‘ಆಮೆನ್’ ಎಂಬಾತನು ನೀಡುವ ಸಂದೇಶವಿದು:
15 : ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ನೀನು ತಣ್ಣಗೂ ಇಲ್ಲ, ಬಿಸಿಯಾಗೂ ಇಲ್ಲ. ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು.
16 : ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಕ್ಕುತ್ತೇನೆ.
17 : ನೀನು ನಿನ್ನ ವಿಷಯವಾಗಿ, ‘ನಾನು ಐಶ್ವರ್ಯವಂತನು, ಸಿರಿಸಂಪತ್ತುಳ್ಳವನು, ಯಾವ ಕೊರತೆಯೂ ಇಲ್ಲದವನು’ ಎಂದು ಹೇಳಿಕೊಳ್ಳುತ್ತಿರುವೆ. ಆದರೆ ನೀನು ನಿರ್ಭಾಗ್ಯನು, ದುರವಸ್ಥೆಯಲ್ಲಿರುವವನು, ದರಿದ್ರನು, ಕುರುಡನು ಮತ್ತು ಬಟ್ಟೆಬರೆಯಿಲ್ಲದೆ ಬೆತ್ತಲೆಯಾಗಿರುವವನು ಎಂಬುದು ನಿನಗೆ ತಿಳಿಯದು.
18 : ಈಗ ನನ್ನ ಬುದ್ಧಿ ಮಾತುಗಳನ್ನು ಕೇಳು. ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಲ್ಲಿ ಪುಟವಿಟ್ಟ ಚಿನ್ನವನ್ನು ನನ್ನಿಂದ ಕೊಂಡುಕೋ. ಲಜ್ಜಾಸ್ಪದವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಶ್ವೇತವಸ್ತ್ರಗಳನ್ನು ನನ್ನಿಂದ ಕ್ರಯಕ್ಕೆ ಕೊಂಡುಕೊಂಡು ಅವುಗಳನ್ನು ಧರಿಸಿಕೋ. ನಿನಗೆ ಕಣ್ಣು ಕಾಣಿಸುವಂತೆ ಲೇಪನವನ್ನು ನನ್ನಿಂದ ಬೆಲೆಗೆ ತೆಗೆದುಕೊಂಡು ನಿನ್ನ ಕಣ್ಣುಗಳಿಗೆ ಹಚ್ಚಿಕೋ.
19 : ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು.
20 : ಇಗೋ, ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶೀಸುತ್ತೇನೆ. ಅವನ ಸಂಗಡ ಊಟ ಮಾಡುತ್ತೇನೆ ಮತ್ತು ಅವನೂ ನನ್ನ ಸಂಗಡ ಊಟ ಮಾಡುತ್ತಾನೆ.
21 : ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯಹೊಂದಿದವನಿಗೆ ನನ್ನೊಡನೆ ನನ್ನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.
22 : “ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ!”