Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರಕಟನೆ


1 : ನಾನು ಸಮುದ್ರದ ತೀರದಲ್ಲಿ ನಿಂತಿದ್ದೆ. ಆಗ ನನಗೆ ಈ ದೃಶ್ಯ ಕಾಣಿಸಿತು: ಒಂದು ಮೃಗ ಸಮುದ್ರದಿಂದ ಮೇಲೆ ಏರಿ ಬಂದಿತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಪ್ರತಿಯೊಂದು ಕೊಂಬಿನ ಮೇಲೂ ಒಂದೊಂದು ಮುಕುಟವಿತ್ತು. ತಲೆಗಳ ಮೇಲೆ ದೇವದೂಷಣೆ ಮಾಡುವ ಹೆಸರುಗಳು ಇದ್ದವು.
2 : ನಾನು ಕಂಡ ಆ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತಿದ್ದವು. ಬಾಯಿಯು, ಸಿಂಹದ ಬಾಯಂತೆ ಇತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಅಪಾರ ಅಧಿಕಾರವನ್ನೂ ಕೊಟ್ಟಿತು.
3 : ಅದರ ತಲೆಗಳಲ್ಲಿ ಒಂದು ತಲೆ ಗಾಯಗೊಂಡು ಅದು ಸಾಯುವ ಸ್ಥಿತಿಯಲ್ಲಿತ್ತು. ಆದರೆ ಮಾರಕವಾದ ಆ ಗಾಯವು ಗುಣವಾಯಿತು. ಇದನ್ನು ಕಂಡ ಭೂಲೋಕದವರೆಲ್ಲರೂ ವಿಸ್ಮಯಗೊಂಡು ಆ ಮೃಗವನ್ನು ಹಿಂಬಾಲಿಸಿದರು.
4 : ಜನರು ಆ ಮೃಗವನ್ನು ಮಾತ್ರವಲ್ಲ, ಅದಕ್ಕೆ ಅಧಿಕಾರವನ್ನು ಕೊಟ್ಟ ಘಟಸರ್ಪವನ್ನೂ ಆರಾಧಿಸಿದರು. ಮೃಗವನ್ನು ಕುರಿತು “ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?” ಎಂದು ಹೇಳುತ್ತಿದ್ದರು.
5 : ಜಂಬದ ಹೇಳಿಕೆಗಳನ್ನೂ ದೇವದೂಷಣೆಯ ಮಾತುಗಳನ್ನೂ ಆಡುವುದಕ್ಕೆ ಆ ಮೃಗಕ್ಕೆ ಒಂದು ಬಾಯನ್ನು ಕೊಡಲಾಗಿತ್ತು. ನಲವತ್ತ ಎರಡು ತಿಂಗಳುಗಳವರೆಗೆ ತನ್ನ ಕಾರ್ಯ ಸಾಧಿಸಿಕೊಳ್ಳುವ ಅಧಿಕಾರವನ್ನೂ ಅದಕ್ಕೆ ನೀಡಲಾಗಿತ್ತು.
6 : ಅದು ಬಾಯಿ ತೆರೆದು ದೇವರನ್ನು ದೂಷಿಸಿತು; ಅವರ ನಾಮವನ್ನು ಶಪಿಸಿತು. ಅವರ ಆಲಯವನ್ನು, ಅಂದರೆ ಸ್ವರ್ಗನಿವಾಸಿಗಳೆಲ್ಲರನ್ನೂ ತೆಗಳಿತು.
7 : ಇದಲ್ಲದೆ, ದೇವಜನರ ವಿರುದ್ಧ ಯುದ್ಧಮಾಡಿ, ಜಯಗಳಿಸುವಂತೆ ಅದಕ್ಕೆ ಅವಕಾಶವನ್ನು ಕೊಡಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಮೇಲೆ ಅದಕ್ಕೆ ಅಧಿಕಾರವನ್ನು ನೀಡಲಾಯಿತು.
8 : ಭೂನಿವಾಸಿಗಳೆಲ್ಲರೂ ಅಂದರೆ, ಜಗತ್ತು ಸೃಷ್ಟಿ ಆಗುವ ಮೊದಲೇ ಯಾರಯಾರ ಹೆಸರುಗಳು ವಧೆಯಾದ ಯಜ್ಞದ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ, ಅಂಥವರೆಲ್ಲರೂ ಆ ಮೃಗವನ್ನು ಆರಾಧಿಸುವರು.
9 : ಕಿವಿಯುಳ್ಳವನು ಕೇಳಲಿ.
10 : ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು; ಖಡ್ಗದಿಂದ ಹತಿಸುವವನು ಖಡ್ಗದಿಂದಲೇ ಹತನಾಗಬೇಕು. ಆದ್ದರಿಂದ ದೇವಜನರು ಸಹನೆಯಿಂದಲೂ ವಿಶ್ವಾಸದಿಂದಲೂ ನಡೆದುಕೊಳ್ಳಬೇಕು.
11 : ಬಳಿಕ ನಾನು ಮತ್ತೊಂದು ಮೃಗವನ್ನು ಕಂಡೆ. ಅದು ಭೂಮಿಯಿಂದ ಮೇಲೇರಿ ಬಂದಿತು. ಅದಕ್ಕೆ ಟಗರಿಗಿರುವಂಥ ಎರಡು ಕೊಂಬುಗಳು ಇದ್ದವು. ಆದರೆ ಅದು ಘಟಸರ್ಪದಂತೆಯೇ ಮಾತನಾಡುತ್ತಿತ್ತು.
12 : ಈ ಮೃಗವು, ಮೊದಲನೆಯ ಮೃಗಕ್ಕಿದ್ದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲೇ ಚಲಾಯಿಸಿತು. ಮಾರಕವಾದ ಗಾಯದಿಂದ ಗುಣಹೊಂದಿದ ಆ ಮೊದಲನೆಯ ಮೃಗವನ್ನು ಭೂಲೋಕವು ಮತ್ತು ಅದರ ನಿವಾಸಿಗಳು ಆರಾಧಿಸುವಂತೆ ಮಾಡಿತು.
13 : ಎರಡನೆಯ ಮೃಗವು ದೊಡ್ಡ ದೊಡ್ಡ ಪವಾಡಗಳನ್ನೆಸಗಿತು. ಜನರ ಮುಂದೆಯೇ ಬೆಂಕಿ ಆಕಾಶದಿಂದ ಹೊರಟು ಭೂಮಿಗೆ ಬೀಳುವಂತೆ ಮಾಡಿತು.
14 : ಮೊದಲನೆಯ ಮೃಗದ ಎದುರಿನಲ್ಲಿ ಪವಾಡಗಳನ್ನೆಸಗುವ ಅನುಮತಿ ಇದ್ದುದರಿಂದ ಅದು ಭೂನಿವಾಸಿಗಳನ್ನು ಮರುಳುಗೊಳಿಸಿತು. ಖಡ್ಗದಿಂದ ಗಾಯಗೊಂಡಿದ್ದರೂ ಸಾಯದೆ ಬದುಕಿದ್ದ ಮೃಗದ ಗೌರವಾರ್ಥ ಒಂದು ವಿಗ್ರಹವನ್ನು ನಿರ್ಮಿಸಬೇಕೆಂದು ಭೂನಿವಾಸಿಗಳಿಗೆ ಅದು ವಿಧಿಸಿತು.
15 : ಆ ಮೃಗದ ವಿಗ್ರಹಕ್ಕೆ ಜೀವಶ್ವಾಸವನ್ನೂದಿ ಮಾತಾಡುವಂತೆಯೂ ಆ ವಿಗ್ರಹವನ್ನು ಆರಾಧಿಸದವರನ್ನು ಕೊಲ್ಲುವಂತೆಯೂ ಎರಡನೆಯ ಮೃಗಕ್ಕೆ ಅನುಮತಿಯನ್ನು ಕೊಡಲಾಯಿತು.
16 : ಹಿರಿಯ ಕಿರಿಯ, ಬಡವ ಬಲ್ಲಿದ, ದಾಸ ದಣಿಗಳು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತಿನ ಹಚ್ಚೆ ಚುಚ್ಚಿಸಿಕೊಳ್ಳಬೇಕೆಂದು ಆ ಎರಡನೆಯ ಮೃಗ ಆಜ್ಞಾಪಿಸಿತು.
17 : ಆ ಗುರುತಿನ ಹಚ್ಚೆಯನ್ನು ಯಾರು ಚುಚ್ಚಿಸಿಕೊಳ್ಳಲಿಲ್ಲವೋ ಅವರು ಕೊಲ್ಳುವುದಕ್ಕಾಗಲಿ, ಮಾರುವುದಕ್ಕಾಗಲಿ ಸಾಧ್ಯ ಇರಲಿಲ್ಲ. ಆ ಗುರುತಿನ ಮುದ್ರೆ ಏನೆಂದರೆ ಮೃಗದ ಹೆಸರು ಇಲ್ಲವೆ, ಆ ಹೆಸರನ್ನು ಸೂಚಿಸುವ ಸಂಖ್ಯೆ.
18 : ಇದನ್ನು ಅರ್ಥಮಾಡಿಕೊಳ್ಳಲು ಜ್ಞಾನ ಬೇಕು. ಬುದ್ಧಿವಂತನು ಮೃಗದ ಸಂಖ್ಯೆಯನ್ನು ಎಣಿಸಲಿ. ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆ. ಆ ಸಂಖ್ಯೆಯು 666.

· © 2017 kannadacatholicbible.org Privacy Policy