1 : ಇದಾದ ನಂತರ ಅಳತೆಗೋಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆ ಮಾಡು. ಆಲಯದಲ್ಲಿ ಆರಾಧಿಸುತ್ತಿರುವವರನ್ನು ಲೆಕ್ಕ ಮಾಡು.
2 : ಆಲಯದ ಹೊರ ಅಂಗಳವನ್ನು ಅಳತೆಮಾಡಬೇಡ; ಅದನ್ನು ಬಿಟ್ಟುಬಿಡು. ಅದನ್ನು ಜನರಿಗೆ ಬಿಟ್ಟುಕೊಡಲಾಗಿದೆ. ಅವರು ಪವಿತ್ರ ನಗರವನ್ನು ನಲವತ್ತೆರಡು ತಿಂಗಳವರೆಗೆ ತುಳಿದಾಡುವರು.
3 : ನಾನು ನನ್ನ ಇಬ್ಬರು ಸಾಕ್ಷಿಗಳನ್ನು ಕಳುಹಿಸುವೆನು. ಅವರು ಗೋಣಿತಟ್ಟನ್ನು ಉಟ್ಟುಕೊಂಡು ಒಂದು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದಿಸುವರು.”
4 : ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ.
5 : ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ.
6 : ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮಥ್ರ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟ ಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ.
7 : ಇವರ ಸಾಕ್ಷ್ಯ ನೀಡಿಕೆ ಮುಗಿದನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿ ಬರುತ್ತದೆ; ಅದು ಇವರೊಡನೆ ಯುದ್ಧಮಾಡಿ, ಜಯಗಳಿಸಿ, ಇವರನ್ನು ಕೊಂದುಹಾಕುತ್ತದೆ.
8 : ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿ ಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಟ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು.
9 : ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿ ಮಾಡಲು ಬಿಡಲೊಲ್ಲರು.
10 : ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು.
11 : ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದು ನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು.
12 : ಅನಂತರ ಆ ಪ್ರವಾದಿಗಳಿಗೆ, “ಮೇಲೇರಿ ಬನ್ನಿ,” ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು.
13 : ಅದೇ ಗಳಿಗೆಯಲ್ಲಿ ಒಂದು ಭೀಕರ ಭೂಕಂಪವಾಯಿತು. ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಏಳು ಸಾವಿರ ಜನರು ಆ ಭೂಕಂಪದಲ್ಲಿ ಹತರಾದರು. ಉಳಿದವರು ಭಯಭೀತರಾಗಿ ಸ್ವರ್ಗದಲ್ಲಿರುವ ದೇವರ ಮಹಿಮೆಯನ್ನು ಸ್ತುತಿಸಿದರು.
14 : ಹೀಗೆ ಎರಡನೆಯ ವಿಪತ್ತು ಮುಗಿಯಿತು. ಇಗೋ ಮೂರನೆಯ ವಿಪತ್ತು ಕೂಡಲೇ ಬಂದೆರಗುವುದು.
ವಿಶ್ವದ ಆಡಳಿತ ಸರ್ವೇಶನದು
15 : ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸ್ವರ್ಗದಲ್ಲಿ ಮಹಾಶಬ್ದಗಳು ಉಂಟಾಗಿ ಹೀಗೆ ಮೊಳಗಿದವು:
“ವಿಶ್ವವನ್ನಾಳುವ ಅಧಿಕಾರವು
ನಮ್ಮ ಸರ್ವೇಶನದು ಹಾಗು
ಅವರಿಂದ ಅಭಿಷಿಕ್ತನಾದ
ಲೋಕೋದ್ಧಾರಕನದು.
ಇನ್ನಾತನು ಆಳುವನು ಎಂದೆಂದಿಗೂ”.
16 : ತರುವಾಯ ದೇವರ ಸಾನ್ನಿಧ್ಯದಲ್ಲಿ ತಮ್ಮ ತಮ್ಮ ಪೀಠಗಳಲ್ಲಿ ಕುಳಿತಿದ್ದ ಇಪ್ಪತ್ನಾಲ್ಕು ಸಭಾಪ್ರಮುಖರು ದೇವರಿಗೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ,
17 : “ಪ್ರಭುವೇ, ದೇವನೇ, ಸರ್ವಶಕ್ತನೇ,
ಇರುವಾತನೂ ಇದ್ದಾತನೂ ನೀನೇ
ಘನಾಧಿಕಾರವನ್ನು ತೋರಿ ನೀ ಆಳುತ್ತಿರುವೆ
ಧನ್ಯವಾದಗಳನ್ನು ನಿನಗೆ ಸಲ್ಲಿಸುವೆ.
18 : ಕೆರಳಿದವು ವಿಶ್ವ ರಾಷ್ಟ್ರಗಳು
ಎರಗಿತು ನಿನ್ನ ಪ್ರಕೋಪವು
ಸವಿೂಪಿಸಿತು ಮೃತರ ನ್ಯಾಯತೀರ್ಪಿನ ದಿನವು
ಬಂದಿದೆ ಸಮಯ ಸನ್ಮಾನಿಸಲು
ನಿನ್ನ ದಾಸರನು, ಪ್ರವಾದಿಗಳನು, ದೇವ
ಪ್ರಜೆಗಳನು
ನಿನ್ನಲ್ಲಿ ಭಯಭಕುತಿಯುಳ್ಳ ಹಿರಿಯ
ಕಿರಿಯರನು.
ಇದಿಗೋ ಬಂದಿದೆ ಗಳಿಗೆಯು
ಲೋಕನಾಶಕರನ್ನು ವಿನಾಶಗೊಳಿಸಲು”,
ಎಂದು ಹಾಡಿದರು.
19 : ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು.