1 : ನಾನು ಮತ್ತೊಂದು ದೃಶ್ಯವನ್ನು ಕಂಡೆ. ಒಬ್ಬ ಬಲಿಷ್ಠ ದೇವದೂತನು ಸ್ವರ್ಗದಿಂದ ಇಳಿದು ಬಂದನು. ಅವನು ಮೇಘಾಂಬರನಾಗಿದ್ದನು. ಅವನ ತಲೆಯ ಮೇಲೆ ಮುಗಿಲುಬಿಲ್ಲೊಂದು ಇತ್ತು. ಮುಖವು ಸೂರ್ಯನಂತೆ ಇತ್ತು. ಕಾಲುಗಳು ಅಗ್ನಿಸ್ತಂಭಗಳಂತಿದ್ದವು.
2 : ಅವನ ಕೈಯಲ್ಲಿ ತೆರೆದಿದ್ದ ಚಿಕ್ಕ ಸುರುಳಿ ಒಂದಿತ್ತು. ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು ನಿಂತಿದ್ದನು.
3 : ಅವನು ಗಟ್ಟಿಯಾದ ಸ್ವರದಿಂದ ಕೂಗಿದನು. ಅದು ಸಿಂಹದ ಗರ್ಜನೆಯಂತಿತ್ತು. ಅವನು ಕೂಗಿದಾಗ ಏಳು ಗುಡುಗುಗಳು ಒಂದೊಂದಾಗಿ ಮಾರ್ದನಿಸಿದವು.
4 : ಏಳು ಗುಡುಗುಗಳು ನುಡಿದುದನ್ನು ಕೂಡಲೇ ನಾನು ಬರೆಯಬೇಕೆಂದಿದ್ದೆ. ಆಗ ಸ್ವರ್ಗದಿಂದ ಬಂದ ಒಂದು ಧ್ವನಿ, “ಆ ಏಳು ಗುಡುಗುಗಳು ನುಡಿದುದನ್ನು ರಹಸ್ಯವಾಗಿ ಇಡು. ಅವುಗಳನ್ನು ಬರೆಯಬೇಡ,” ಎಂದು ನನಗೆ ಆಜ್ಞಾಪಿಸಿತು.
5 : ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲುಗಳನ್ನಿಟ್ಟು ನಿಂತಿದ್ದ ದೇವದೂತನು ತನ್ನ ಬಲಗೈಯನ್ನು ಸ್ವರ್ಗದ ಕಡೆಗೆ ಎತ್ತಿದನು.
6 : ಅನಂತರ ಸ್ವರ್ಗ, ಭೂಮಿ, ಸಮುದ್ರ ಇವುಗಳನ್ನೂ ಇವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ಹಾಗೂ ಯುಗಯುಗಾಂತರಕ್ಕೂ ಜೀವಿಸುವ ದೇವರ ಹೆಸರಿನಲ್ಲಿ ಶಪಥಮಾಡಿ ಹೀಗೆ ಹೇಳಿದನು: “ಇನ್ನು ನಿಧಾನಿಸುವಂತಿಲ್ಲ;
7 : ಏಳನೆಯ ದೇವದೂತನು ತುತೂರಿಯನ್ನು ಊದುವನು. ಆಗ ದೇವರು ಇದುವರೆಗೆ ನಿಗೂಢವಾಗಿಟ್ಟಿದ್ದ ತಮ್ಮ ಯೋಜನೆಯನ್ನು ತಮ್ಮ ದಾಸರಾದ ಪ್ರವಾದಿಗಳಿಗೆ ಮುಂತಿಳಿಸಿದ್ದ ಪ್ರಕಾರ ಈಡೇರಿಸುವರು.”
8 : ಸ್ವರ್ಗದಿಂದ ನನಗೆ ಕೇಳಿಸಿದ್ದ ಧ್ವನಿ ಮತ್ತೊಮ್ಮೆ ನನ್ನೊಡನೆ ಮಾತನಾಡಿ, “ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲಿಟ್ಟು ನಿಂತಿರುವ ದೇವದೂತನ ಬಳಿಗೆ ಹೋಗು. ಆತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ತಿಳಿಸಿತು.
9 : ನಾನು ಆ ದೇವದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು,” ಎಂದು ಕೇಳಿದೆ. ಅವನು, “ತೆಗೆದುಕೋ, ಇದನ್ನು ತಿನ್ನು. ಇದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿಯೂ ನಿನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿಯೂ ಇರುತ್ತದೆ,” ಎಂದನು.
10 : ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು.
11 : ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು.