Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರಕಟನೆ


1 : ದೇವರು ಯೇಸುಕ್ರಿಸ್ತರಿಗಿತ್ತ ಪ್ರಕಟನೆ ಇದು. ಅತಿ ಶೀಘ್ರದಲ್ಲಿಯೇ ಸಂಭವಿಸಲಿರುವ ಘಟನೆಗಳನ್ನು ತಮ್ಮ ದಾಸರಿಗೆ ತಿಳಿಯಪಡಿಸುವುದಕ್ಕಾಗಿ ಕ್ರಿಸ್ತಯೇಸುವಿಗೆ ಈ ಪ್ರಕಟನೆಯನ್ನು ದೇವರು ದಯಪಾಲಿಸಿದರು. ಕ್ರಿಸ್ತಯೇಸು ತಮ್ಮ ದೂತನನ್ನು ಕಳುಹಿಸಿ ತಮ್ಮ ದಾಸನಾದ ಯೊವಾನ್ನನಿಗೆ ಇವುಗಳನ್ನು ಪ್ರಕಟಿಸಿದರು.
2 : ಯೊವಾನ್ನನು ದೇವರ ಸಂದೇಶಕ್ಕೂ ಕ್ರಿಸ್ತೇಸು ತಿಳಿಸಿದ ಸತ್ಯಕ್ಕೂ ಸಾಕ್ಷಾತ್ ಸಾಕ್ಷಿಯಾಗಿದ್ದಾನೆ.
3 : ಈ ಪ್ರವಾದನಾ ಸಂದೇಶವನ್ನು ಓದುವವನು ಧನ್ಯನು; ಓದಿದ್ದನ್ನು ಕೇಳಿಸಿಕೊಳ್ಳುವವರೂ ಧನ್ಯರು ಮತ್ತು ಈ ಪ್ರವಾದನೆಯಲ್ಲಿ ಲಿಖಿತವಾಗಿರುವುದನ್ನು ಕೈಗೊಂಡು ನಡೆಯುವವರು ಸಹ ಧನ್ಯರು! ಏಕೆಂದರೆ, ಕಾಲ ಸನ್ನಿಹಿತವಾಯಿತು. ಶ್ರೀಸಭೆಗಳಿಗೆ ಶುಭಾಶಯಗಳು
4 : ಏಷ್ಯಾಸೀಮೆಯಲ್ಲಿರುವ ಏಳು ಸಭೆಗಳಿಗೆ ಯೊವಾನ್ನನೆಂಬ ನಾನು ಬರೆಯುವುದೇನೆಂದರೆ: ವರ್ತಮಾನಕಾಲದಲ್ಲಿ ‘ಇರುವಾತನೂ,’ ಭೂತಕಾಲದಲ್ಲಿ ‘ಇದ್ದಾತನೂ,’ ಭವಿಷ್ಯತ್‍ಕಾಲದಲ್ಲಿ ‘ಬರುವಾತನೂ’ ಆದ ದೇವರಿಂದ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! ಇದಲ್ಲದೆ, ದೇವರ ಸಿಂಹಾಸನದ ಸಾನ್ನಿಧ್ಯದಲ್ಲಿ ಇರುವ ಸಪ್ತ ಆತ್ಮಗಳಿಂದಲೂ ಮತ್ತು
5 : ನಂಬಲರ್ಹವಾದ ಸಾಕ್ಷಿಯೂ ಮೃತ್ಯುವಿನಿಂದ ಪುನರುತ್ಥಾನ ಹೊಂದಿದವರಲ್ಲಿ ಪ್ರಪ್ರಥಮರೂ ಭೂರಾಜರ ಒಡೆಯರೂ ಆದ ಯೇಸುಕ್ರಿಸ್ತರಿಂದಲೂ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದಿಂದ ನಮ್ಮ ಪಾಪಗಳನ್ನು ತೊಳೆದವರೂ
6 : ತಮ್ಮ ಪಿತನಾದ ದೇವರ ಸೇವೆಗೆ ನಮ್ಮನ್ನು ದೈವೀರಾಜ್ಯದ ಯಾಜಕರನ್ನಾಗಿ ಮಾಡಿದವರೂ ಆದ ಯೇಸುಕ್ರಿಸ್ತರಿಗೆ ಮಹಿಮೆ ಮತ್ತು ಅಧಿಪತ್ಯ ಯುಗಯುಗಾಂತರಕ್ಕೂ ಸಲ್ಲಲಿ! ಆಮೆನ್.
7 : ಇಗೋ ನೋಡು, ಮೇಘಾರೂಢನಾಗಿ ಬರುತಿಹನು ಪ್ರತಿಯೊಂದು ಕಣ್ಣೂ ಕಾಣುವುದು ಆತನನು, ಆತನನ್ನು ಇರಿದವರೂ ವೀಕ್ಷಿಸುವರು, ಗೋಳಾಡುವರಾತನನ್ನು ಕಂಡು ಲೋಕದ ಜನರೆಲ್ಲರು. ಹೌದು, ಅದರಂತೆಯೇ ಆಗುವುದು, ಆಮೆನ್.
8 : “ ‘ಅ’ಕಾರವೂ ‘ಳ’ ಕಾರವೂ ನಾನೇ. ವರ್ತಮಾನಕಾಲದಲ್ಲಿ, ‘ಇರುವಾತನೂ,’ ಭೂತಕಾಲದಲ್ಲಿ ‘ಇದ್ದಾತನೂ’ ಭವಿಷ್ಯತ್ಕಾಲದಲ್ಲಿ ‘ಬರುವಾತನೂ’ ಸರ್ವಶಕ್ತನೂ ನಾನೇ” ಎಂದು ಪ್ರಭು ದೇವರು ನುಡಿಯುತ್ತಾರೆ. ಕ್ರಿಸ್ತಯೇಸುವಿನ ದರ್ಶನ
9 : ನಾನು ಯೊವಾನ್ನ, ನಿಮ್ಮ ಸಹೋದರ; ಕ್ರಿಸ್ತೇಸುವಿನಲ್ಲಿ ದೇವರ ಸಾಮ್ರಾಜ್ಯಕ್ಕೆ ಸೇರಿರುವವರಿಗೆ ಬಂದೊದಗುವ ಕಷ್ಟಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದರಲ್ಲಿ ನಿಮ್ಮ ಪಾಲುಗಾರ. ದೇವರ ವಾಕ್ಯವನ್ನು ಸಾರಿದುದರಿಂದಲೂ ಕ್ರಿಸ್ತೇಸುವಿಗೆ ಸಾಕ್ಷಿ ನೀಡಿದುದರಿಂದಲೂ ನಾನು ಪತ್ಮೋಸ್ ದ್ವೀಪವಾಸವನ್ನು ಅನುಭವಿಸಬೇಕಾಯಿತು.
10 : ಪ್ರಭುವಿನ ದಿನದಂದು ನಾನು ದೇವರಾತ್ಮ ವಶನಾದೆ. ಆಗ ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತೂರಿಯ ನಾದದಂತಿತ್ತು.
11 : ಅದು ಹೀಗೆಂದು ನುಡಿಯಿತು: “ನೀನು ಕಾಣುತ್ತಿರುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಪಟ್ಟಣಗಳಲ್ಲಿರುವ ಏಳು ಸಭೆಗಳಿಗೆ ಕಳುಹಿಸು.”
12 : ನನ್ನ ಸಂಗಡ ಮಾತನಾಡುತ್ತಿರುವ ಈ ಶಬ್ದ ಯಾರದೆಂದು ನೋಡಲು ನಾನು ಹಿಂದಕ್ಕೆ ತಿರುಗಿದೆ. ಹಾಗೆ ತಿರುಗಿದಾಗ, ಏಳು ಚಿನ್ನದ ದೀಪಸ್ತಂಭಗಳನ್ನು ಕಂಡೆ.
13 : ಆ ದೀಪಸ್ತಂಭಗಳ ನಡುವೆ ‘ನರಪುತ್ರ’ನಂಥ ಒಬ್ಬ ವ್ಯಕ್ತಿಯಿದ್ದರು. ಅವರು ನಿಲುವಂಗಿಯನ್ನು ತೊಟ್ಟಿದ್ದರು. ಅದು ಅವರ ಪಾದಗಳನ್ನು ಮುಟ್ಟುವಷ್ಟು ನೀಳವಾಗಿತ್ತು. ಅಲ್ಲದೆ, ಚಿನ್ನದ ಎದೆಪಟ್ಟಿಯನ್ನು ಕಟ್ಟಿಕೊಂಡಿದ್ದರು.
14 : ಅವರ ತಲೆಗೂದಲು ಹಿಮದಂತೆಯೂ ಬಿಳಿಯ ಉಣ್ಣೆಯಂತೆಯೂ ಬಿಳುಪಾಗಿತ್ತು. ಕಣ್ಣುಗಳು ಪ್ರಜ್ವಲಿಸುವ ಬೆಂಕಿಯ ಕೆಂಡದಂತಿದ್ದವು.
15 : ಅವರ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆ ಥಳಥಳಿಸುತ್ತಾ ಇದ್ದವು. ಧ್ವನಿ, ಜಲಪಾತದಂತೆ ಭೋರ್ಗರೆಯುತ್ತಿತ್ತು.
16 : ಅವರ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು. ಬಾಯೊಳಗಿಂದ ಹರಿತವಾದ ಇಬ್ಬಾಯಿಯ ಖಡ್ಗವು ಹೊರಬಂದಿತ್ತು. ಅವರ ಮುಖ ನಡುಮಧ್ಯಾಹ್ನದ ಸೂರ್ಯನಂತೆ ಪ್ರಕಾಶಿಸುತ್ತಿತ್ತು.
17 : ನಾನು ಅವರನ್ನು ಕಂಡಾಗ, ಸತ್ತವನಂತಾದೆ. ಅವರ ಪಾದಗಳ ಮುಂದೆ ಬಿದ್ದೆ. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, “ಭಯಪಡಬೇಡ, ನಾನೇ ಮೊದಲನೆಯವನೂ ಕಡೆಯವನೂ
18 : ಸದಾ ಜೀವಿಸುವವನೂ ಆಗಿ ಇದ್ದೇನೆ. ಮರಣಹೊಂದಿದೆ ನಿಜ. ಆದರೆ ಇಗೋ ನೋಡು, ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಮೃತ್ಯುಲೋಕದ ಬೀಗದ ಕೈಗಳು ನನ್ನಲ್ಲಿವೆ.
19 : ಆದುದರಿಂದ ನೀನು ಕಂಡ ಘಟನೆಗಳನ್ನು ಅಂದರೆ, ಈಗ ನಡೆಯುತ್ತಿರುವ ಘಟನೆಗಳನ್ನೂ ಮುಂದೆ ಸಂಭವಿಸಲಿರುವ ಘಟನೆಗಳನ್ನೂ ಕುರಿತು ಬರೆ.
20 : ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ರಹಸ್ಯವಿಷ್ಟೆ: ಆ ಏಳು ನಕ್ಷತ್ರಗಳು ಏಳು ಸಭೆಗಳ ದೂತರನ್ನು ಸೂಚಿಸುತ್ತವೆ. ಆ ಏಳು ಚಿನ್ನದ ದೀಪಸ್ತಂಭಗಳು ಏಳು ಸಭೆಗಳನ್ನು ಸೂಚಿಸುತ್ತವೆ,” ಎಂದರು.

· © 2017 kannadacatholicbible.org Privacy Policy