1 : ಪಿತನಾದ ದೇವರ ಪ್ರೀತಿಯಲ್ಲೂ ಯೇಸುಕ್ರಿಸ್ತರ ಆಶ್ರಯದಲ್ಲೂ ಬಾಳುತ್ತಿರುವ ಭಕ್ತರಿಗೆ - ಯೇಸುಕ್ರಿಸ್ತರ ದಾಸನೂ ಯಕೋಬನ ಸಹೋದರನೂ ಆದ ಯೂದನು ಬರೆಯುವ ಪತ್ರ.
2 : ದೇವರಿಂದ ಕರೆಹೊಂದಿರುವ ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಸಮೃದ್ಧಿಯಾಗಿ ಲಭಿಸಲಿ !
3 : ದುರ್ಬೋಧಕರು
ಪ್ರಿಯ ಸಹೋದರರೇ, ನಮ್ಮೆಲ್ಲರಿಗೂ ಲಭಿಸಿರುವ ಜೀವೋದ್ಧಾರವನ್ನು ಕುರಿತು ಬರೆಯಲು ಅತ್ಯಾಸಕ್ತನಾಗಿದ್ದೆನು. ಆದರೆ, ದೇವಜನರಿಗೆ ಒಮ್ಮೆಗೇ ಶಾಶ್ವತವಾಗಿ ಕೊಡಲಾಗಿರುವ ವಿಶ್ವಾಸವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೋರಾಡಬೇಕೆಂದು ನಿಮ್ಮನ್ನು ಪ್ರೋತ್ಸಾಹಿಸಿ ಬರೆಯುವುದು ಅವಶ್ಯವೆಂದು ತೋರಿತು.
5 : ಇದನ್ನೆಲ್ಲಾ ನೀವು ಈಗಾಗಲೇ ಚೆನ್ನಾಗಿ ಅರಿತವರಾಗಿದ್ದೀರಿ. ಆದರೂ ಕೆಲವು ವಿಷಯಗಳನ್ನು ನಿಮ್ಮ ನೆನಪಿಗೆ ತರಲು ಬಯಸುತ್ತೇನೆ: ದೇವರು ತಮ್ಮ ಪ್ರಜೆಗಳನ್ನು ಈಜಿಪ್ಟ್ ದೇಶದಿಂದ ಬಿಡುಗಡೆಮಾಡಿದರು; ವಿಶ್ವಾಸವಿಡದವರನ್ನು ಅನಂತರ ಅವರೇ ನಾಶಮಾಡಿದರು.
6 : ಅಂತೆಯೇ, ತಮ್ಮ ಆದ್ಯ ಅಂತಸ್ತನ್ನು ಉಳಿಸಿಕೊಳ್ಳದೆ, ತಮ್ಮ ಯೋಗ್ಯ ನಿವಾಸವನ್ನು ಕಳೆದುಕೊಂಡ ದೇವದೂತರನ್ನು ಶಾಶ್ವತ ಸಂಕಲೆಗಳಿಂದ ಬಂಧಿಸಲಾಯಿತು; ಮಹಾದಿನದಲ್ಲಿ ಸಂಭವಿಸುವ ದಂಡನೆಯ ತೀರ್ಪಿಗಾಗಿ ಇವರನ್ನು ಕಾರ್ಗತ್ತಲೆಯಲ್ಲಿ ಕೂಡಿಡಲಾಯಿತು.
7 : ಸೊದೋಮ್, ಗೊಮೋರ ಮತ್ತು ಅವುಗಳ ಸುತ್ತಮುತ್ತಲಿನ ಪಟ್ಟಣಿಗರು ಆ ದೂತರಂತೆಯೇ ನಡೆದುಕೊಂಡರು. ಅಲ್ಲದೆ, ಅವರು ಅನೈತಿಕತೆಯಲ್ಲೂ ಪ್ರಕೃತಿ ವಿರುದ್ಧವಾದ ಲೈಂಗಿಕ ಕೃತ್ಯಗಳಲ್ಲೂ ಮಗ್ನರಾಗಿದ್ದರು. ಈ ಕಾರಣದಿಂದ ಅವರು ನಿತ್ಯಾಗ್ನಿಯ ಶಿಕ್ಷೆಗೆ ಗುರಿಯಾಗಿ ಇತರರಿಗೆ ಎಚ್ಚರಿಕೆಯನ್ನು ನೀಡುವ ನಿದರ್ಶನವಾಗಿದ್ದಾರೆ.
8 : ಈ ದುರ್ಬೋಧಕರು ಕೂಡ ಹಾಗೆಯೇ ವರ್ತಿಸುತ್ತಾರೆ. ಕನಸು ಕಾಣುವವರಂತೆ ತಮ್ಮ ಶರೀರವನ್ನು ಪಾಪಕಳಂಕದಿಂದ ಮಲಿನವಾಗಿಸಿಕೊಳ್ಳುತ್ತಾರೆ. ಪ್ರಭುವಿನ ಅಧಿಕಾರವನ್ನು ಅಸಡ್ಡೆ ಮಾಡುತ್ತಾರೆ. ಸ್ವರ್ಗನಿವಾಸಿಗಳನ್ನು ದೂಷಿಸುತ್ತಾರೆ.
9 : ಪ್ರಧಾನ ದೇವದೂತ ಮಿಕಾಯೇಲನೂ ಇಂಥ ದೂಷಣೆಯನ್ನು ಆಡಲಿಲ್ಲ. ಮೋಶೆಯ ಪಾರ್ಥಿವ ಶರೀರದ ವಿಷಯದಲ್ಲಿ ಸೈತಾನನೊಡನೆ ವಾಗ್ವಾದ ಮಾಡಿದಾಗಲೂ ಅಂಥ ದೂಷಣೆಯನ್ನು ಆಡಲು ಧೈರ್ಯಗೊಳ್ಳದೆ, “ಸರ್ವೇಶ್ವರ ನಿನ್ನನ್ನು ಖಂಡಿಸಲಿ,” ಎಂದಷ್ಟೇ ಹೇಳಿದನು.
10 : ಆದರೆ, ಈ ಜನರು ತಮಗೆ ಅರ್ಥವಾಗದ ಎಲ್ಲವನ್ನೂ ದೂಷಿಸುತ್ತಾರೆ. ವಿಚಾರಶೂನ್ಯ ಪ್ರಾಣಿಗಳಂತೆ ಸಹಜ ಪ್ರವೃತ್ತಿಯಿಂದ ಏನನ್ನು ತಿಳಿದುಕೊಳ್ಳುತ್ತಾರೋ ಅದರಿಂದಲೇ ನಾಶವಾಗುತ್ತಾರೆ.
11 : ಇವರ ದುರ್ಗತಿ ಭಯಂಕರವಾದುದು ! ಇವರು ಕಾಯಿನನ ಮಾರ್ಗವನ್ನು ಹಿಡಿದಿದ್ದಾರೆ; ಲಾಭಕೋರರಾಗಿ ಬಿಳಾಮನ ಭ್ರಾಂತಿಯಲ್ಲಿ ಬೀಳಹೋಗುತ್ತಾರೆ; ಕೋರಹನಂತೆ ದಂಗೆ ಎದ್ದು ವಿನಾಶವಾಗುತ್ತಿದ್ದಾರೆ.
12 : ತಮ್ಮ ಮಿತಿವಿೂರಿದ ಮದ್ಯಪಾನಾಸಕ್ತಿಯಿಂದ ನಿಮ್ಮ ಪ್ರೇಮಭೋಜನ ಕೂಟಗಳಲ್ಲಿ ಇವರು ಕಳಂಕಪ್ರಾಯರಾಗಿದ್ದಾರೆ. ತಮ್ಮ ಕುರಿಗಳನ್ನು ತೊರೆದು ಹೊಟ್ಟೆಹೊರೆದುಕೊಳ್ಳುವ ಕುರುಬರಂತಿದ್ದಾರೆ. ಇವರು ಬಿರುಗಾಳಿಗೆ ಚದುರಿಹೋಗುವ ನೀರಿಲ್ಲದ ಮೋಡಗಳು; ಎಲೆಗಳು ಉದುರಿ, ಫಲಬಿಡದೆ, ಬಾಡಿಹೋಗಿ, ಬೇರುಸಹಿತ ಕಿತ್ತುಬೀಳುವ ಶರತ್ಕಾಲದ ಮರಗಳು;
13 : ತಮ್ಮ ನಾಚಿಕೆಗೇಡಿತನದ ನೊರೆಯನ್ನು ಕಾರುವ ಸಾಗರದ ಹುಚ್ಚು ತೆರೆಗಳು; ದಿಕ್ಕುಗೆಟ್ಟ ತಾರೆಗಳಿವರು. ಇವರಿಗಾಗಿ ಕಾದಿದೆ ನಿರಂತರ ಕಾರ್ಗತ್ತಲಿನ ಕಂದಕ.
14 : ಇವರ ವಿಷಯವಾಗಿ ಆದಾಮನ ಏಳನೆಯ ತಲೆಮಾರಿನ ಹನೋಕನು, “ಇಗೋ, ಸರ್ವೇಶ್ವರ ತಮ್ಮ ಅಸಂಖ್ಯಾತ ಪರಿಶುದ್ಧ ದೂತರ ಸಮೇತ ಆಗಮಿಸುವರು. ಎಲ್ಲರಿಗೂ ನ್ಯಾಯತೀರ್ಪು ಕೊಡುವರು.
15 : ಭಕ್ತಿಹೀನರು ತಮಗೆ ವಿರುದ್ಧ ಮಾಡಿದ ಎಲ್ಲಾ ದುಷ್ಕøತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರುದ್ಧವಾಗಿ ಆಡಿದ ಎಲ್ಲಾ ದೂಷಣೆಗಳನ್ನು ಖಂಡಿಸಲು ಬರುವರು,” ಎಂದು ಪ್ರವಾದಿಸಿದ್ದಾನೆ.
16 : ಈ ದುರ್ಬೋಧಕರು ಗೊಣಗುಟ್ಟುವವರು, ಅತೃಪ್ತರು, ದುರಾಶೆಗಳಿಗೆ ಬಲಿಯಾದವರು, ಬಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರು.
17 : ಎಚ್ಚರಿಕೆಯ ಮಾತುಗಳು
ಪ್ರಿಯರೇ, ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಪ್ರೇಷಿತರು, ನಿಮಗೆ ಮುಂಚಿತವಾಗಿ ತಿಳಿಸಿದ ಮಾತುಗಳನ್ನು ನೆನಪುಮಾಡಿಕೊಳ್ಳಿ.
18 : “ತಮ್ಮ ದುರಿಚ್ಛೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅವರು ಎಚ್ಚರಿಸಿದ್ದಾರೆ.
19 : ಇವರು ನಿಮ್ಮಲ್ಲಿ ಭಿನ್ನಭೇದವನ್ನು ಉಂಟುಮಾಡುವವರು; ಪ್ರಾಪಂಚಿಕ ವಿಷಯಾಸಕ್ತರು; ಪವಿತ್ರಾತ್ಮರಹಿತರಾಗಿ ಬಾಳುವವರು.
20 : ಪ್ರಿಯರೇ, ನೀವಾದರೋ ಅತಿ ಪರಿಶುದ್ಧ ವಿಶ್ವಾಸದ ಆಧಾರದ ಮೇಲೆ ನಿರ್ಮಿಸಲಾದ ಮಂದಿರದಂತೆ ಪ್ರವರ್ಧಿಸಿರಿ; ಪವಿತ್ರಾತ್ಮ ಅವರಿಂದ ಪ್ರೇರಿತರಾಗಿ ಪ್ರಾರ್ಥಿಸಿರಿ.
21 : ನಿತ್ಯಜೀವವನ್ನು ದಯಪಾಲಿಸುವ ಕರುಣಾಮಯ ಪ್ರಭು ಯೇಸುಕ್ರಿಸ್ತರನ್ನು ಎದುರುನೋಡುತ್ತಾ ದೇವರ ಪೀತಿಯಲ್ಲಿ ನೆಲೆಗೊಂಡಿರಿ.
22 : ಸಂಶಯಪಡುವವರಿಗೆ ಸಹೃದಯದಿಂದ ನೆರವಾಗಿರಿ.
23 : ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ. ಕೆಲವರಿಗೆ ದಯೆತೋರಿಸುವಾಗ ಭಯವಿರಲಿ. ಪಾಪದ ನಡತೆಯಿಂದ ಹೊಲಸಾದ ಅವರ ಬಟ್ಟೆಬರೆಗಳನ್ನೂ ಮುಟ್ಟದಿರಿ.
24 : ಸಮಾಪ್ತಿ
ಪಾಪದಲ್ಲಿ ಎಡವಿ ಬೀಳದಂತೆ ನಿಮ್ಮನ್ನು
ಕಾಪಾಡುವ
ತಮ್ಮ ಮಹಿಮಾಸನ್ನಿಧಿಯಲ್ಲಿ
ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ
ಹರ್ಷಭರಿತರನ್ನಾಗಿಯೂ ನಿಲ್ಲಿಸಲು
ಶಕ್ತರಾಗಿರುವ
25 : ನಮ್ಮ ಉದ್ಧಾರಕರಾದ ಏಕೈಕ ದೇವರಿಗೆ
ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ
ಮಹಿಮೆ, ಮಹತ್ವ, ಅಧಿಪತ್ಯ, ಅಧಿಕಾರ
ಆದಿಯಲ್ಲಿ ಇದ್ದ ಹಾಗೆ ಈಗಲೂ
ಯಾವಾಗಲೂ ಸಲ್ಲಲಿ ! ಆಮೆನ್.