Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೇತ್ರ


1 : ಪ್ರಭುವಿನ ದಿನವು ಬಂದೇ ತೀರುವುದು ಪ್ರಿಯರೇ, ಈಗ ನಾನು ನಿಮಗೆ ಬರೆಯುತ್ತಿರುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲೂ ನಿಮ್ಮ ನಿರ್ಮಲ ಮನಸ್ಸನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದ್ದೇನೆ.
2 : ಪೂರ್ವಕಾಲದಲ್ಲಿ ಪವಿತ್ರ ಪ್ರವಾದಿಗಳು ಹೇಳಿದ ಮಾತುಗಳನ್ನು ಮತ್ತು ಪ್ರೇಷಿತರ ಮೂಲಕ, ಲೋಕೋದ್ಧಾರಕರಾದ ನಮ್ಮ ಪ್ರಭು ಕೊಟ್ಟ ಆಜ್ಞೆಗಳನ್ನು ನಿಮ್ಮ ಜ್ಞಾಪಕಕ್ಕೆ ತರಲು ಬಯಸಿದ್ದೇನೆ.
3 : ಮೊತ್ತಮೊದಲನೆಯದಾಗಿ ನೀವು ಇದನ್ನು ನೆನಪಿನಲ್ಲಿಡಬೇಕು; ಅಂತ್ಯಕಾಲದಲ್ಲಿ ಕುಚೋದ್ಯಗಾರರು ಕಾಣಿಸಿಕೊಳ್ಳುವರು.
4 : ಇವರು ತಮ್ಮ ದುರಾಶೆಗಳಿಗೆ ಬಲಿಯಾಗಿ, “ಆತನು ಮರಳಿ ಬರುವನು ಎಂಬ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ಮೃತರಾದರು; ಅಂದಿನಿಂದ ಸಮಸ್ತವೂ ಲೋಕಾದಿಯಿಂದಲೂ ಇದ್ದ ಹಾಗೆಯೇ ಇದೆಯಲ್ಲಾ,” ಎಂದು ಅಪಹಾಸ್ಯ ಮಾಡುವರು.
5 : ಆದರೆ, ಅವರು ಒಂದು ವಿಷಯವನ್ನು ಉದ್ದೇಶ ಪೂರ್ವಕವಾಗಿ ಮರೆತುಬಿಡುತ್ತಾರೆ. ಅದೇನೆಂದರೆ, ಪ್ರಾರಂಭದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದಿಂದಲೇ ಉಂಟಾದವು. ಜಲದಿಂದ, ಜಲದ ಮೂಲಕ ಭೂಮಿ ಉಂಟಾಯಿತು.
6 : ಜಲಪ್ರಳಯದಿಂದಲೇ ಅಂದಿನ ಜಗತ್ತು ಮುಳುಗಿ ನಾಶವಾಯಿತು.
7 : ಈಗಿರುವ ಭೂಮ್ಯಾಕಾಶಗಳನ್ನು ಅದೇ ವಾಕ್ಯದ ಬಲದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲಾಗಿದೆ. ದುರ್ಜನರು ವಿನಾಶವಾಗಬೇಕಾದ ನ್ಯಾಯತೀರ್ಪಿನ ದಿನದವರೆಗೂ ಇವನ್ನು ಉಳಿಸಲಾಗಿದೆ.
8 : ಪ್ರಿಯರೇ, ಮತ್ತೊಂದು ವಿಷಯವನ್ನು ಮರೆಯದಿರಿ: ಪ್ರಭುವಿನ ದೃಷ್ಟಿಯಲ್ಲಿ ಒಂದು ದಿನ ಸಾವಿರ ವರ್ಷಗಳಂತೆಯೂ ಮತ್ತು ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ.
9 : ಕೆಲವರು ಭಾವಿಸುವಂತೆ ಪ್ರಭು ತಮ್ಮ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ವಿಳಂಬ ಮಾಡುವವರಲ್ಲ; ಆದರೆ ಅವರು ನಿಮ್ಮ ವಿಷಯದಲ್ಲಿ ದೀರ್ಘಶಾಂತಿ, ಸಹನೆಯುಳ್ಳವರು. ಯಾರೊಬ್ಬನೂ ನಾಶವಾಗಬೇಕೆಂಬುದು ಅವರ ಇಚ್ಛೆಯಲ್ಲ; ಎಲ್ಲರೂ ಪಶ್ಚಾತ್ತಾಪಪಟ್ಟು ತಮಗೆ ಅಭಿಮುಖರಾಗಬೇಕೆಂಬುದೇ ಅವರ ಅಪೇಕ್ಷೆ.
10 : ಪ್ರಭುವಿನ ದಿನ ಬಂದೇ ತೀರುವುದು. ಅದು ಕಳ್ಳನಂತೆಯೇ ಬರುವುದು. ಆಗ, ಆಕಾಶ ಮಂಡಲವು ಸಿಡಿಲ ಗರ್ಜನೆಯೊಂದಿಗೆ ಅಳಿದು ಹೋಗುವುದು. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಸುಟ್ಟು ಲಯವಾಗಿ ಹೋಗುವುವು. ಭೂಮಿಯೂ ಅದರಲ್ಲಿರುವ ಸಮಸ್ತವೂ ಉರಿದು ಭಸ್ಮವಾಗುವುವು.
11 : ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ಧರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು.
12 : ದೇವರ ಆ ದಿನವನ್ನು ಎದುರು ನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದು ಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು.
13 : ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು.
14 : ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಿರಿ.
15 : ನಮ್ಮ ಪ್ರಭುವಿನ ದೀರ್ಘಶಾಂತಿ ಹಾಗೂ ಸಹನೆ ನಮ್ಮ ಜೀವೋದ್ಧಾರಕ್ಕಾಗಿಯೇ ಎಂದು ತಿಳಿದುಕೊಳ್ಳಿ. ನಮ್ಮ ಪ್ರಿಯ ಸಹೋದರನಾದ ಪೌಲನೂ ಸಹ ತನಗೆ ದೇವರಿತ್ತ ಜ್ಞಾನದ ಪ್ರಕಾರ ಹೀಗೆಯೇ ನಿಮಗೆ ಬರೆದಿದ್ದಾನೆ.
16 : ಆತನು ತನ್ನ ಪತ್ರಗಳಲ್ಲಿ ಈ ವಿಷಯವನ್ನು ಕುರಿತು ಪ್ರಸ್ತಾಪಿಸುವಾಗಲೆಲ್ಲಾ ಹೀಗೆಯೇ ಬೋಧಿಸಿದ್ದಾನೆ. ಅರ್ಥ ಮಾಡಿಕೊಳ್ಳಲು ಕಠಿಣವಾದ ಕೆಲವು ವಿಷಯಗಳು ಆತನ ಪತ್ರಗಳಲ್ಲಿ ಇವೆ. ಬುದ್ಧಿಹೀನರು ಹಾಗು ಚಂಚಲಚಿತ್ತರು ಪವಿತ್ರಗ್ರಂಥದ ಇತರ ಭಾಗಗಳಿಗೆ ಅಪಾರ್ಥ ಕಟ್ಟುವಂತೆ ಇವುಗಳಿಗೂ ಕಟ್ಟುತ್ತಾರೆ. ಹೀಗೆ, ತಮ್ಮ ವಿನಾಶವನ್ನು ತಾವೇ ತಂದುಕೊಳ್ಳುತ್ತಾರೆ.
17 : ಆದಕಾರಣ ಪ್ರಿಯರೇ, ಈ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರ ವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ.
18 : ನಮ್ಮ ಪ್ರಭು ಮತ್ತು ಉದ್ಧಾರಕರಾದ ಯೇಸುಕ್ರಿಸ್ತರ ಅನುಗ್ರಹದಲ್ಲೂ ಅವರನ್ನು ಕುರಿತ ಜ್ಞಾನದಲ್ಲೂ ನೀವು ಅಭಿವೃದ್ಧಿಹೊಂದಿರಿ. ಅವರಿಗೆ ಈಗಲೂ ಯುಗ ಯುಗಾಂತರಕ್ಕೂ ಮಹಿಮೆಯುಂಟಾಗಲಿ ! ಆಮೆನ್.

· © 2017 kannadacatholicbible.org Privacy Policy