Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೇತ್ರ


1 : ಕಳ್ಳಬೋಧಕರು ಇಸ್ರಯೇಲ್ ಜನರಲ್ಲೇ ಕಪಟ ಪ್ರವಾದಿಗಳು ಕಾಣಿಸಿಕೊಂಡರು. ಅಂತೆಯೇ, ನಿಮ್ಮಲ್ಲೂ ಸುಳ್ಳುಬೋಧಕರು ಕಾಣಿಸಿಕೊಳ್ಳುವರು. ಹಾನಿಕರವಾದ ದುರ್ಬೋಧನೆಗಳನ್ನು ಗೋಪ್ಯವಾಗಿ ಪ್ರಸರಿಸುವರು. ಒತ್ತೆಯಿಟ್ಟು ತಮ್ಮನ್ನು ರಕ್ಷಿಸಿದ ಒಡೆಯನನ್ನೇ ಅರಿಯೆವೆಂದು ನಿರಾಕರಿಸುವರು. ಹೀಗೆ ತಮ್ಮ ವಿನಾಶವನ್ನು ತಾವೇ ಬೇಗನೆ ಬರಮಾಡಿಕೊಳ್ಳುವರು.
2 : ಇಷ್ಟಾದರೂ ಅವರ ಅನೈತಿಕ ಮಾರ್ಗವನ್ನೇ ಅನೇಕರು ಅನುಸರಿಸುವರು. ಅವರ ದೆಸೆಯಿಂದ ಇತರರು ಸತ್ಯಮಾರ್ಗವನ್ನು ಅವಹೇಳನ ಮಾಡುವರು.
3 : ಅವರು ದ್ರವ್ಯಾಶೆಪೀಡಿತರಾಗಿ ಕಟ್ಟುಕತೆಗಳನ್ನು ಹೇಳುತ್ತಾ ನಿಮ್ಮಿಂದ ಲಾಭಗಳಿಸುವರು. ದೀರ್ಘಕಾಲದಿಂದ ಅವರಿಗಾಗಿ ಸಿದ್ಧವಾಗಿರುವ ದಂಡನೆಯ ತೀರ್ಪು ಸವಿೂಪಿಸುತ್ತಿದೆ. ಅವರನ್ನು ನಾಶಗೊಳಿಸುವವರೇನೂ ನಿದ್ರಿಸುತ್ತಿಲ್ಲ.
4 : ಪಾಪಮಾಡಿದ ದೇವದೂತರನ್ನೂ ದೇವರು ದಂಡಿಸದೆ ಬಿಡಲಿಲ್ಲ. ಅವರನ್ನು ನರಕಕ್ಕೆ ದಬ್ಬಿದರು. ಅಂತಿಮ ತೀರ್ಪಿನ ದಿನವನ್ನು ಎದುರು ನೋಡುತ್ತಾ ಕಾದಿರುವಂತೆ, ಕಾರಿರುಳ ಕೂಪದಲ್ಲಿ ಕೂಡಿಹಾಕಿದರು.
5 : ಪುರಾತನ ಕಾಲದ ಜನರನ್ನೂ ಸಹ ದೇವರು ದಂಡಿಸದೆ ಬಿಡಲಿಲ್ಲ. ನೀತಿ ಮಾರ್ಗವನ್ನು ಸಾರಿದ ನೋವನನ್ನು ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಕಾಪಾಡಿ, ದುರ್ಜನರಿಂದ ಕೂಡಿದ್ದ ಜಗತ್ತಿನ ಮೇಲೆ ಜಲಪ್ರಳಯವನ್ನು ಬರಮಾಡಿದರು.
6 : ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಕೂಡ ದೇವರು ಬಿಡಲಿಲ್ಲ. ದುರ್ಜನರಿಗೆ ಬರಲಿರುವ ದುರ್ಗತಿ ಏನೆಂದು ಸೂಚಿಸುವುದಕ್ಕಾಗಿ ಆ ಪಟ್ಟಣಗಳನ್ನು ಸುಟ್ಟು ಭಸ್ಮಮಾಡಿದರು.
7 : ಆದರೆ, ಆ ದುರ್ಜನರ ಅನೈತಿಕ ನಡುವಳಿಕೆಯನ್ನು ಕಂಡು ಅತಿಯಾಗಿ ಮನನೊಂದಿದ್ದ ಲೋತ ಎಂಬ ಸತ್ಪುರುಷನನ್ನು ಸಂರಕ್ಷಿಸಿದರು.
8 : ಆತನು ಆ ದುರ್ಜನರ ನಡುವೆ ಬಾಳುತ್ತಾ ಅವರ ದುಷ್ಕøತ್ಯಗಳನ್ನು ಕಂಡು ಕೇಳುತ್ತಿದ್ದಾಗ, ಅವನ ನಿರ್ಮಲ ಹೃದಯ ದಿನೇದಿನೇ ಅತೀವ ವೇದನೆಯನ್ನು ಅನುಭವಿಸುತ್ತಿತ್ತು.
9 : ಹೀಗೆ, ಸಜ್ಜನರನ್ನು ಸಂಕಟ ಶೋಧನೆಗಳಿಂದ ಸಂರಕ್ಷಿಸಲು, ದುರ್ಜನರನ್ನು ಅಂತಿಮ ನ್ಯಾಯತೀರ್ಪಿನ ದಿನದವರೆಗೂ ಶಿಕ್ಷಾವಸ್ಥೆಯಲ್ಲಿರಿಸಲು ಪ್ರಭುವಿಗೆ ತಿಳಿದಿದೆ.
10 : ಮುಖ್ಯವಾಗಿ ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಬಲಿಯಾಗಿರುವವರನ್ನು ಮತ್ತು ದೇವರ ಅಧಿಕಾರವನ್ನು ತೃಣೀಕರಿಸುವವರನ್ನು ಅವರು ಶಿಕ್ಷಿಸದೆ ಬಿಡುವುದಿಲ್ಲ.
11 : ಈ ಕಳ್ಳಬೋಧಕರು ಉದ್ಧಟರು, ಸ್ವೇಚ್ಛಾಪರರು, ಸ್ವರ್ಗ ನಿವಾಸಿಗಳನ್ನು ದೂಷಿಸುವವರು. ದೇವದೂತರು ಶಕ್ತಿಯಲ್ಲಿ ಮತ್ತು ಪರಾಕ್ರಮದಲ್ಲಿ ಶ್ರೇಷ್ಠರಾಗಿದ್ದರೂ ಸಹ ಈ ಸ್ವರ್ಗನಿವಾಸಿಗಳನ್ನು ಪ್ರಭುವಿನ ಮುಂದೆ ದೂಷಿಸುವುದೂ ಇಲ್ಲ, ಖಂಡಿಸುವುದೂ ಇಲ್ಲ.
12 : ಸಹಜ ಪ್ರವೃತ್ತಿಯಿಂದ ಬೇಟೆಗಾಗಿಯೂ ಕೊಲೆಗಾಗಿಯೂ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತೆ ಬಾಳುವ ಈ ದುರ್ಬೋಧಕರಾದರೋ ತಮಗೆ ತಿಳಿಯದವುಗಳನ್ನು ದೂಷಣೆ ಮಾಡುತ್ತಾರೆ. ಆ ಪ್ರಾಣಿಗಳು ನಾಶವಾಗುವಂತೆಯೇ ಇವರೂ ನಾಶವಾಗುತ್ತಾರೆ.
13 : ತಾವು ಮಾಡಿದ ಕೇಡಿಗೆ ಪ್ರತಿಯಾಗಿ ಕೇಡನ್ನೇ ಪಡೆಯುತ್ತಾರೆ. ಇವರು ಹಾಡುಹಗಲಿನಲ್ಲೇ ಏನು ಬೇಕಾದರೂ ಮಾಡಿ, ದೈಹಿಕ ವ್ಯಾಮೋಹಗಳನ್ನು ತಣಿಸುವುದೇ ಸುಖವೆಂದು ಎಣಿಸುತ್ತಾರೆ. ವಂಚಕರಾದ ಇವರು ಪ್ರೇಮಭೋಜನಗಳಲ್ಲಿ ನಿಮ್ಮ ಸಂಗಡ ಸೇರಿ ತಿಂದುಕುಡಿಯುವಾಗ ನಿಮಗೆ ಕಳಂಕವನ್ನೂ ಮಾನನಷ್ಟವನ್ನೂ ತರುತ್ತಾರೆ.
14 : ಇವರದು ಬರೀ ಕಾಮುಕ ಕಣ್ಣು; ಇವರು ಎಂದಿಗೂ ಇಂಗದ ಪಾಪಬಯಕೆಯುಳ್ಳವರು; ದುರ್ಬಲರನ್ನು ವಂಚಿಸಿ ವಶಪಡಿಸಿಕೊಳ್ಳುವುದೇ ಇವರ ಹವ್ಯಾಸ; ಲೋಭದಲ್ಲೇ ಪಳಗಿದ ಮನಸ್ಸುಳ್ಳವರು ಹಾಗೂ ಶಾಪಗ್ರಸ್ತ ಸಂತಾನದವರು ಇವರು !
15 : ಇವರು ಹಾದಿ ತಪ್ಪಿದವರು, ಸನ್ಮಾರ್ಗವನ್ನು ತ್ಯಜಿಸಿದವರು; ಬೆಯೋರನ ಮಗ ಬಿಳಾಮನ ದಾರಿಯನ್ನು ಹಿಡಿದವರು.
16 : ಬಿಳಾಮನು ಅನೀತಿಯಿಂದ ಹಣಗಳಿಸಿದ ಲಾಭಕೋರ; ತನ್ನ ಅಕ್ರಮಕ್ಕೆ ತಕ್ಕ ದಂಡನೆಯನ್ನು ಅನುಭವಿಸಿದವನು. ಮೂಕ ಹೇಸರಗತ್ತೆಯೊಂದು ಮಾನವನಂತೆ ಮಾತಾಡಿ ಈ ಪ್ರವಾದಿಯ ಮೂರ್ಖತನಕ್ಕೆ ತಡೆಹಾಕಿತು.
17 : ಈ ಕಳ್ಳಬೋಧಕರು ನೀರಿಲ್ಲದ ಬಾವಿಗಳು, ಬಿರುಗಾಳಿಯಿಂದ ಚದರಿಹೋಗುವ ಮಂಜು ಮೋಡಗಳು. ಕಾರ್ಗತ್ತಲಿನ ಕಂದಕವೇ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ.
18 : ದುರ್ಮಾರ್ಗಿಗಳ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರನ್ನು ಇವರು ಜಂಬದ ಸೊಕ್ಕು ಮಾತುಗಳಿಂದ, ಮೂರ್ಖ ಹೇಳಿಕೆಗಳಿಂದ, ಭೋಗ-ವಿಲಾಸಗಳ ಬಲೆಯಿಂದ ವಶಪಡಿಸಿಕೊಳ್ಳುತ್ತಾರೆ.
19 : ತಾವೇ ದುರಭ್ಯಾಸಗಳಿಗೆ ಗುಲಾಮರಾಗಿದ್ದರೂ ತಾವು ವಶಪಡಿಸಿಕೊಂಡವರಿಗೆ ಸ್ವಾತಂತ್ರ್ಯವನ್ನು ತರುವ ಮಾತುಕೊಡುತ್ತಾರೆ. ಒಬ್ಬನು ಯಾವುದಕ್ಕೆ ಸೋಲುತ್ತಾನೋ ಅದಕ್ಕೆ ಅವನು ಗುಲಾಮನಾಗುತ್ತಾನೆ.
20 : ನಮ್ಮ ಪ್ರಭು ಹಾಗೂ ಉದ್ಧಾರಕರಾದ ಯೇಸುಕ್ರಿಸ್ತರನ್ನು ಕುರಿತ ಜ್ಞಾನದ ಮೂಲಕ ಕೆಲವರು ಲೋಕದ ಕಲ್ಮಶದಿಂದ ಪಾರಾಗಿ ನಿರ್ಮಲರಾಗುತ್ತಾರೆ. ಇಂಥವರು ಮರಳಿ ಅದರಲ್ಲೇ ಸಿಲುಕಿಕೊಂಡು ಅದಕ್ಕೆ ಗುಲಾಮರಾದರೆ ಅವರ ಅಂತಿಮ ಗತಿ ಮೊದಲ ಗತಿಗಿಂತಲೂ ಅಧೋಗತಿಯಾಗಿರುತ್ತದೆ.
21 : ಅವರು ನೀತಿಯ ಮಾರ್ಗವನ್ನು ಅರಿತುಕೊಂಡು ತಾವು ಸ್ವೀಕರಿಸಿದ ಪವಿತ್ರ ಆಜ್ಞೆಯನ್ನು ತಿರಸ್ಕರಿಸುವುದಕ್ಕಿಂತ ಅದನ್ನು ಅರಿಯದವರಾಗಿದ್ದರೆ ಒಳ್ಳೆಯದಾಗುತ್ತಿತ್ತು.
22 : “ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹೋಯಿತು,” ಮತ್ತು “ಮೈ ತೊಳೆದ ಹಂದಿ ಕೊಳಚೆಯಲ್ಲಿ ಹೊರಳಲು ಹೋಯಿತು,” ಎಂಬ ಈ ಗಾದೆಗಳು ಇವರಿಗೆ ಸರಿಯಾಗಿ ಅನ್ವಯಿಸುತ್ತವೆ.

· © 2017 kannadacatholicbible.org Privacy Policy