1 : ನಮ್ಮ ದೇವರ ಮತ್ತು ಉದ್ಧಾರಕ ಯೇಸುಕ್ರಿಸ್ತರ ಸತ್ಸಂಬಂಧದ ಮೂಲಕ ನಮ್ಮಂತೆಯೇ ಅಮೂಲ್ಯವಾದ ವಿಶ್ವಾಸವನ್ನು ಹೊಂದಿರುವ ಭಕ್ತಾದಿಗಳಿಗೆ - ಯೇಸುಕ್ರಿಸ್ತರ ದಾಸನೂ ಪ್ರೇಷಿತನೂ ಆದ ಸಿಮೋನ ಪೇತ್ರನು ಬರೆಯುವ ಪತ್ರ :
2 : ದೇವರ ಮತ್ತು ಪ್ರಭು ಯೇಸುಕ್ರಿಸ್ತರ ಬಗ್ಗೆ ನೀವು ಪಡೆಯುತ್ತಿರುವ ಜ್ಞಾನಾರ್ಜನೆಯು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿ ಸಮಾಧಾನವನ್ನೂ ಅಧಿಕಾಧಿಕವಾಗಿ ತರಲಿ !
3 : ದೇವರಿಂದ ಕರೆ ಮತ್ತು ಆಯ್ಕೆ
ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಆ ಯೇಸುವಿನ ದಿವ್ಯಶಕ್ತಿಯಿಂದ ಪಡೆದಿದ್ದೇವೆ.
4 : ಹೀಗೆ ನೀವು ಲೋಕದಲ್ಲಿ ಆಶಾಪಾಶಗಳಿಂದ ಉಂಟಾಗುವ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡು ದೈವಿಕ ಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ.
5 : ಈ ಕಾರಣ, ನೀವು ಪೂರ್ಣಾಸಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ.
6 : ಸುಜ್ಞಾನಕ್ಕೆ ಸಂಯಮವನ್ನು, ಸಂಯಮಕ್ಕೆ ಸ್ಥೈರ್ಯವನ್ನು, ಸ್ಥೈರ್ಯಕ್ಕೆ ಸದ್ಭಕ್ತಿಯನ್ನು ಕೂಡಿಸಿರಿ.
7 : ಈ ನಿಮ್ಮ ಸದ್ಭಕ್ತಿಗೆ ಸೋದರ ಸ್ನೇಹವನ್ನು, ಸೋದರ ಸ್ನೇಹಕ್ಕೆ ಪ್ರೀತಿಯನ್ನು ಬೆರೆಸಿರಿ.
8 : ಈ ಗುಣಗಳು ನಿಮ್ಮಲ್ಲಿ ಬೆಳೆದು ಸಮೃದ್ಧವಾಗಿದ್ದರೆ, ನಮ್ಮ ಪ್ರಭು ಯೇಸಕ್ರಿಸ್ತರನ್ನು ಅರಿತು ಬಾಳುವುದರಲ್ಲಿ ಇವು ನಿಮ್ಮನ್ನು ಚೈತನ್ಯಪೂರ್ಣರನ್ನಾಗಿಯೂ ಫಲಪ್ರದರನ್ನಾಗಿಯೂ ಮಾಡುತ್ತವೆ.
9 : ಈ ಗುಣಗಳಿಲ್ಲದವನು ಸಂಕುಚಿತ ಮನೋಭಾವನೆಯುಳ್ಳವನು ಹಾಗೂ ಅಂಧನು. ಹಿಂದಿನ ಪಾಪಗಳಿಂದ ತಾನು ಶುದ್ಧಗೊಂಡವನು ಎಂಬುದನ್ನು ಮರೆತುಬಿಟ್ಟವನು.
10 : ಸಹೋದರರೇ, ನೀವು ದೇವರಿಂದ ಕರೆ ಹೊಂದಿದವರು; ದೇವರಿಂದ ಆಯ್ಕೆಯಾದವರು. ಈ ವರದಲ್ಲಿ ದೃಢವಾಗಿರಲು ಮತ್ತಷ್ಟು ಪ್ರಯತ್ನಿಸಿರಿ. ಹೀಗೆ ಮಾಡಿದರೆ, ನೀವೆಂದಿಗೂ ವಿಶ್ವಾಸಭ್ರಷ್ಟರಾಗಲಾರಿರಿ.
11 : ನಮ್ಮ ಪ್ರಭು ಹಾಗೂ ಉದ್ಧಾರಕ ಯೇಸುಕ್ರಿಸ್ತರ ಅಮರ ರಾಜ್ಯವನ್ನು ಪ್ರವೇಶಿಸುವ ಭಾಗ್ಯವನ್ನು ದೇವರು ನಿಮಗೆ ಧಾರಾಳವಾಗಿ ಅನುಗ್ರಹಿಸುವರು.
12 : ಈ ವಿಷಯಗಳೆಲ್ಲಾ ನಿಮಗೆ ತಿಳಿದೇ ಇವೆ; ನೀವು ಅಂಗೀಕರಿಸಿದ ಸತ್ಯದಲ್ಲಿ ಸ್ಥಿರವಾಗಿಯೂ ಇದ್ದೀರಿ. ಆದರೂ ಇವುಗಳನ್ನು ಪದೇಪದೇ ನಿಮ್ಮ ಜ್ಞಾಪಕಕ್ಕೆ ತರಲು ಅಪೇಕ್ಷಿಸುತ್ತೇನೆ.
13 : ನಾನು ಈ ದೇಹವೆಂಬ ಗುಡಾರದಲ್ಲಿ ಜೀವಿಸಿರುವ ತನಕ ನಿಮ್ಮನ್ನು ಜ್ಞಾಪಕಪಡಿಸಿ, ಪ್ರೋತ್ಸಾಹಿಸುವುದು ಉಚಿತವೆಂದು ಎಣಿಸಿದ್ದೇನೆ.
14 : ನಾನು ಈ ಗುಡಾರವನ್ನು ತ್ಯಜಿಸುವ ಕಾಲವು ಸವಿೂಪಿಸಿತೆಂದು ಬಲ್ಲೆ. ನಮ್ಮ ಪ್ರಭು ಯೇಸುಕ್ರಿಸ್ತರೇ ನನಗಿದನ್ನು ಸ್ಪಷ್ಟಪಡಿಸಿದ್ದಾರೆ.
15 : ನನ್ನ ಮರಣಾ ನಂತರವೂ ಈ ವಿಷಯಗಳನ್ನು ನೀವು ಯಾವಾಗಲೂ ಜ್ಞಾಪಕಕ್ಕೆ ತಂದುಕೊಳ್ಳಲು ಸಾಧ್ಯವಾಗುವಂತೆ ಈಗಲೇ ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ.
16 : ಕ್ರಿಸ್ತ ಮಹಿಮೆಯನ್ನು ಕಂಡವರ ಸಾಕ್ಷ್ಯ
ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿ ಸಾಮಥ್ರ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ.
17 : ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು.
18 : ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು; ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು.
19 : ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.
20 : ಆದರೆ, ಇದನ್ನು ನೀವು ಮುಖ್ಯವಾಗಿ ಜ್ಞಾಪಕದಲ್ಲಿಡಬೇಕು: ಪವಿತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯೂ ವೈಯಕ್ತಿಕ ವ್ಯಾಖ್ಯಾನದ ವಿಷಯವಲ್ಲ.
21 : ಏಕೆಂದರೆ, ಅದರ ಯಾವ ಪ್ರವಾದನೆಯೂ ಎಂದೂ ಮಾನವ ಸಂಕಲ್ಪದಿಂದ ಬಂದುದಲ್ಲ;
22 : ಆ ಮನುಷ್ಯರು ಪವಿತ್ರಾತ್ಮರಿಂದ ಪ್ರೇರಿತರಾಗಿ ದೇವರಿಂದ ಪಡೆದ ವಾಕ್ಯವನ್ನೇ ಮಾತನಾಡಿದರು