1 : ಕ್ರಿಸ್ತಯೇಸುವಿನ ಮರಣ-ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ:
2 : ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ, ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ.
3 : ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮಂದೆಗೆ ಆದರ್ಶ ಮಾದರಿಗಳಾಗಿರಿ.
4 : ಆಗಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.
5 : ಅಂತೆಯೇ ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನ ಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ.
“ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ.
ನಮ್ರರಿಗಾದರೋ ಅವರು ದಯೆತೋರು
ತ್ತಾರೆ,”
ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.
6 : ದೇವರ ಪರಾಕ್ರಮಕ್ಕೆ ತಗ್ಗಿ ನಮ್ರರಾಗಿ ನಡೆದುಕೊಳ್ಳಿ. ಆಗ ಅವರು ನಿಮ್ಮನ್ನು ಸಕಾಲದಲ್ಲಿ ಮೇಲಕ್ಕೆತ್ತುವರು;
7 : ನಿಮ್ಮ ಚಿಂತೆಯನ್ನೆಲ್ಲಾ ಅವರಿಗೇ ಬಿಟ್ಟುಬಿಡಿ. ನಿಮ್ಮ ಮೇಲೆ ಅವರಿಗೆ ಲಕ್ಷ್ಯವಿದೆ.
8 : ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು.
9 : ವಿಶ್ವಾಸದಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ನಿಮ್ಮ ಸಹವಿಶ್ವಾಸಿಗಳು ಜಗತ್ತಿನಲ್ಲೆಲ್ಲಾ ಇಂಥ ಹಿಂಸೆಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ.
10 : ಯೇಸುಕ್ರಿಸ್ತರಲ್ಲಿ ನಿಮ್ಮನ್ನು ತಮ್ಮ ಶಾಶ್ವತ ಮಹಿಮೆಗೆ ಕರೆದ ಕೃಪಾನಿಧಿಯಾದ ದೇವರು ನೀವು ಸ್ವಲ್ಪಕಾಲ ಹಿಂಸೆಬಾಧೆಯನ್ನು ಅನುಭವಿಸಿದ ನಂತರ ನಿಮ್ಮನ್ನು ಪೂರ್ವಸ್ಥಿತಿಗೆ ತರುವರು; ನಿಮ್ಮನ್ನು ಸ್ಥಿರಗೊಳಿಸಿ ಬಲಪಡಿಸುವರು.
11 : ಅವರ ಆಳ್ವಿಕೆ ಯುಗಯುಗಾಂತರಕ್ಕೂ ಇರಲಿ. ಆಮೆನ್.
12 : ನನ್ನ ಈ ಪುಟ್ಟ ಪತ್ರವನ್ನು ನಂಬಿಕಸ್ಥ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸೃಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ.
13 : ನಿಮ್ಮ ಹಾಗೆ ದೇವರಿಂದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವಂದನೆಗಳನ್ನು ತಿಳಿಸುತ್ತದೆ. ಅಂತೆಯೇ, ನನ್ನ ಮಗನಂತಿರುವ ಮಾರ್ಕನು ನಿಮ್ಮನ್ನು ವಂದಿಸಿದ್ದಾನೆ.
14 : ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿ ಸಮಾಧಾನ ಲಭಿಸಲಿ !