1 : ಕ್ರಿಸ್ತಯೇಸು ದೈಹಿಕವಾಗಿ ಹಿಂಸೆ ಬಾಧೆಯನ್ನು ಅನುಭವಿಸಿದ್ದರಿಂದ ನೀವೂ ಅವರಲ್ಲಿದ್ದ ಅದೇ ಭಾವನೆಯಿಂದ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ದೈಹಿಕವಾಗಿ ಹಿಂಸೆಪಡುವವನು ಪಾಪ ಜೀವನದೊಡನೆ ಸಂಬಂಧವನ್ನು ಕಡಿದುಕೊಂಡವನು.
2 : ಉಳಿದಿರುವ ತನ್ನ ಜೀವಮಾನ ಕಾಲವನ್ನು ಲೌಕಿಕ ವ್ಯಾಮೋಹಗಳಲ್ಲಿ ಕಳೆಯದೆ ದೇವರ ಚಿತ್ತಕ್ಕನುಸಾರ ಕಳೆಯುತ್ತಾನೆ.
3 : ಕ್ರೈಸ್ತರಲ್ಲದವರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಮಾಡಿದ್ದು ಸಾಕು. ಆಗ ನೀವು ಅಶ್ಲೀಲತೆ, ಕಾಮ, ಕುಡುಕತನ, ಅಮಲೇರುವಿಕೆ, ದುಂದೌತಣ ಮತ್ತು ಯೋಗ್ಯವಲ್ಲದ ವಿಗ್ರಹಾರಾಧನೆ - ಈ ಮುಂತಾದವುಗಳಿಗೆ ಒಳಗಾಗಿದ್ದಿರಿ.
4 : ಈಗಲಾದರೋ ನೀವು ಮುಂಚಿನಂತೆ ಲಂಪಟ ಜೀವನದಲ್ಲಿ ಅವರೊಡನೆ ಬೆರೆಯದಿರುವುದನ್ನು ಕಂಡು ಸಖೇದಾಶ್ಚರ್ಯದಿಂದ ನಿಮ್ಮನ್ನು ದೂಷಿಸುತ್ತಾರೆ.
5 : ಜೀವಂತರಿಗೂ ಮೃತರಿಗೂ ನ್ಯಾಯತೀರಿಸಲು ಸಿದ್ಧವಾಗಿರುವ ದೇವರಿಗೆ ಅವರು ಲೆಕ್ಕ ಕೊಡಬೇಕಾಗುವುದು.
6 : ಮೃತರಿಗೂ ಶುಭಸಂದೇಶವನ್ನು ಬೋಧಿಸಲಾಯಿತು. ಏಕೆಂದರೆ, ದೇಹದ ಮಟ್ಟಿಗೆ ಸಕಲ ಮಾನವರಂತೆ ಮರಣವೆಂಬ ತೀರ್ಪನ್ನು ಹೊಂದಿದ್ದರೂ ದೇವರ ಆತ್ಮದ ಮಟ್ಟಿಗೆ ದೇವರಂತೆಯೇ ಜೀವಿಸಲೆಂದು ಆ ಸಂದೇಶವನ್ನು ಬೋಧಿಸಲಾಯಿತು.
7 : ಎಲ್ಲದರ ಅಂತ್ಯಕಾಲವೂ ಹತ್ತಿರವಾಯಿತು. ಈ ಕಾರಣ ನೀವು ಜಿತೇಂದ್ರಿಯರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಮಾಡುತ್ತಿರಿ.
8 : ಎಲ್ಲಕ್ಕೂ ಮಿಗಿಲಾಗಿ ಒಬ್ಬರನ್ನೊಬ್ಬರು ಯಥಾರ್ಥವಾಗಿ ಪ್ರೀತಿಸಿರಿ. ಏಕೆಂದರೆ, ಪ್ರೀತಿ ಅಸಂಖ್ಯಾತ ಪಾಪಗಳನ್ನು ಅಳಿಸಿಹಾಕುತ್ತದೆ.
9 : ಗೊಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿ.
10 : ದೇವರ ವಿವಿಧ ವರಗಳ ವಿಷಯದಲ್ಲಿ ಉತ್ತಮ ನಿರ್ವಾಹಕನಂತೆ ಪ್ರತಿಯೊಬ್ಬನೂ ದೇವರು ತನಗೆ ಕೊಟ್ಟಿರುವ ವಿಶೇಷ ವರದಾನಗಳನ್ನು ಇತರರ ಒಳಿತಿಗಾಗಿ ಬಳಸಲಿ.
11 : ಬೋಧಿಸುವ ವರವನ್ನು ಪಡೆದವನು ದೇವರ ವಾಕ್ಯವನ್ನು ಬೋಧಿಸುವವನಂತೆ ಬೋಧನೆಮಾಡಲಿ. ಸೇವೆಮಾಡುವ ವರವನ್ನು ಪಡೆದವನು, ದೇವರಿಂದ ಶಕ್ತಿಯನ್ನು ಪಡೆದವನಂತೆ ಸೇವೆಮಾಡಲಿ. ಇದರಿಂದ ಯೇಸುಕ್ರಿಸ್ತರ ಮುಖಾಂತರ ಎಲ್ಲದರಲ್ಲಿಯೂ ದೇವರಿಗೆ ಸ್ತುತಿಯುಂಟಾಗುವುದು. ಅವರಿಗೆ ಸದಾಕಾಲ ಮಹಿಮೆಯೂ ಸರ್ವಾಧಿಕಾರವೂ ಸಲ್ಲಲಿ. ಆಮೆನ್.
12 : ಪ್ರಿಯರೇ, ಪರಿಶೋಧನೆಗೆಂದು ನಿಮಗೆ ಬಂದೊದಗಿರುವ ಅಗ್ನಿಪರೀಕ್ಷೆಗಾಗಿ ಆಶ್ಚರ್ಯಪಡಬೇಡಿ. ಅನಿರೀಕ್ಷಿತವಾಗಿ ಏನೋ ಸಂಭವಿಸಿಬಿಟ್ಟಿತೆಂದು ವಿಸ್ಮಯಪಡಬೇಡಿ.
13 : ಬದಲಿಗೆ, ಯೇಸುಕ್ರಿಸ್ತರ ಬಾಧೆಗಳಲ್ಲಿ ಪಾಲುಹೊಂದಿರುತ್ತೀರೆಂದು ಸಂತೋಷಪಡಿ; ಅವರ ಮಹಿಮೆಯು ಪ್ರತ್ಯಕ್ಷವಾಗುವಾಗ ಪೂರ್ಣ ಹರ್ಷಾನಂದವನ್ನು ಪಡೆಯುವಿರಿ.
14 : ಕ್ರಿಸ್ತಯೇಸುವಿನ ನಾಮದ ನಿಮಿತ್ತ ನಿಂದೆ ಅವಮಾನಗಳಿಗೆ ಗುರಿಯಾದರೆ ನೀವು ಧನ್ಯರು! ಮಹಿಮಾನ್ವಿತ ದೇವರ ಆತ್ಮವು ನಿಮ್ಮಲ್ಲಿ ನೆಲಸಿರುವುದು.
15 : ನಿಮ್ಮಲ್ಲಿ ಯಾರೂ ಕೊಲೆಗಾರ, ಕಳ್ಳ, ಕೆಡುಕ, ಕುಚೋದ್ಯಗಾರ ಎಂಬ ಕಾರಣದಿಂದ ಹಿಂಸೆಬಾಧೆಗಳಿಗೆ ಗುರಿಯಾಗಬಾರದು.
16 : ಅದಕ್ಕೆ ಪ್ರತಿಯಾಗಿ, ಒಬ್ಬನು ಕ್ರೈಸ್ತ ವಿಶ್ವಾಸಿ ಎಂಬ ಕಾರಣದಿಂದ ಹಿಂಸೆಯನ್ನು ಅನುಭವಿಸಿದರೆ ಅಂಥವನು ನಾಚಿಕೆಪಡಬೇಕಾಗಿಲ್ಲ; ಕ್ರೈಸ್ತವಿಶ್ವಾಸಿ ಎಂಬ ಆ ಹೆಸರನ್ನು ಪಡೆದುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲಿ.
17 : ನ್ಯಾಯತೀರ್ಪಿನ ಕಾಲವು ಬಂದಿದೆ. ಮೊತ್ತಮೊದಲು ದೇವರ ಸ್ವಂತ ಜನರೇ ಆ ತೀರ್ಪಿಗೆ ಗುರಿಯಾಗುವರು. ದೇವಜನರಾದ ನಾವೇ ಅದಕ್ಕೆ ಮೊದಲು ಒಳಗಾಗುವುದಾದರೆ ದೇವರ ಶುಭಸಂದೇಶದಲ್ಲಿ ವಿಶ್ವಾಸವಿಡದವರ ಗತಿಯಾದರೂ ಏನು?
18 : “ಸಜ್ಜನರೇ ಸದ್ಗತಿಯನ್ನು ಹೊಂದುವುದು ಕಷ್ಟವಾಗುವುದಾದರೆ ಇನ್ನು ಭಕ್ತಿಹೀನರೂ ಪಾಪಿಗಳೂ ಆದವರ ಪಾಡೇನು?” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ.
19 : ಆದ್ದರಿಂದ, ದೇವರ ಚಿತ್ತಾನುಸಾರ ಹಿಂಸೆ ಬಾಧೆಯನ್ನು ಅನುಭವಿಸುವವರು ತಮ್ಮ ಸತ್ಕ್ರಿಯೆಗಳಲ್ಲಿ ನಿರತರಾಗಿರಲಿ. ಸೃಷ್ಟಿಕರ್ತನಿಗೆ ಶರಣಾಗಲಿ. ಆತ ಅವರನ್ನೆಂದಿಗೂ ಕೈಬಿಡನು.