1 : ಅಂತೆಯೇ ಸ್ತ್ರೀಯರೇ, ನೀವು ನಿಮ್ಮ ಪತಿಯರಿಗೆ ವಿಧೇಯರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯವನ್ನು ನಂಬದೆ ಇರಬಹುದು. ಆದರೂ ಯಾವ ಮಾತುಕತೆಯಿಲ್ಲದೆ ನಿಮ್ಮ ಸನ್ನಡತೆಯಿಂದಲೇ ಅವರನ್ನು ಜಯಿಸಬಹುದು.
2 : ಅವರು ಗಮನಿಸುವುದು ತಮ್ಮ ಪತ್ನಿಯರ ಭಯಭಕ್ತಿಯನ್ನು, ಸುಗುಣಶೀಲತೆಯನ್ನು.
3 : ಕೇಶವಿನ್ಯಾಸ, ಚಿನ್ನಾಭರಣದ ತೊಡುಗೆ, ನಯನವುರಾದ ಉಡುಗೆ - ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು.
4 : ಬದಲಿಗೆ, ಶಾಶ್ವತವಾದ, ಶಾಂತ ಹಾಗೂ ಸೌಮ್ಯಗುಣಗಳಿಂದ ಕೂಡಿದ ಅಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದೇ ದೇವರ ದೃಷ್ಟಿಯಲ್ಲಿ ಅತೀ ಅಮೂಲ್ಯವಾದುದು.
5 : ಪ್ರಾಚೀನ ಕಾಲದ ದೈವಭಕ್ತೆಯರಾದ ಸ್ತ್ರೀಯರು ಹೀಗೆಯೇ ಸಿಂಗರಿಸಿಕೊಂಡು ತಮ್ಮ ತಮ್ಮ ಪತಿಯರಿಗೆ ವಿಧೇಯರಾಗಿದ್ದರು.
6 : ಉದಾಹರಣೆಗೆ: ಸಾರಳು ತನ್ನ ಪತಿ ಅಬ್ರಹಾಮನಿಗೆ ವಿಧೇಯಳಾಗಿದ್ದು ಆತನನ್ನು, “ಯಜಮಾನ” ಎಂದು ಕರೆಯುತ್ತಿದ್ದಳು. ಯಾವ ಭಯಭೀತಿಯಿಲ್ಲದೆ ಸತ್ಕಾರ್ಯಗಳನ್ನು ಮಾಡುವವರಾಗಿದ್ದರೆ, ನೀವೂ ಸಾರಳ ಕುಮಾರ್ತಿಯರೇ ಹೌದು.
7 : ಅದೇ ಪ್ರಕಾರ ಪುರುಷರೇ, ಸರಿಯಾದ ತಿಳುವಳಿಕೆಯಿಂದ ನಿಮ್ಮ ನಿಮ್ಮ ಪತ್ನಿಯರೊಡನೆ ಸಹಜೀವನ ನಡೆಸಿರಿ. ಅವರು ಅಬಲೆಯರು ಮಾತ್ರವಲ್ಲ, ಸಜ್ಜೀವ ಕೊಡುಗೆಗೆ ನಿಮ್ಮೊಂದಿಗೆ ಸಮಬಾಧ್ಯರು ಎಂದು ತಿಳಿದು ಅವರನ್ನು ಗೌರವಿಸಿರಿ. ಆಗ ನಿಮ್ಮ ಪ್ರಾರ್ಥನೆಗೆ ಅಡಚಣೆ ಉಂಟಾಗದು.
8 : ಕಡೆಯದಾಗಿ, ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರಿ; ಪರಸ್ಪರ ಸಹಾನುಭೂತಿ ಇರಲಿ. ಒಡಹುಟ್ಟಿದವರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ದಯೆತೋರುವವರೂ ದೀನಭಾವವುಳ್ಳವರೂ ಆಗಿರಿ.
9 : ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ; ಶಾಪಕ್ಕೆ ಪ್ರತಿಶಾಪ ಹಾಕದೆ ಆಶೀರ್ವಾದ ಮಾಡಿರಿ. ಹೀಗೆ ಮಾಡಿದರೆ ದೇವರ ಆಶೀರ್ವಾದವನ್ನು ಬಾಧ್ಯವಾಗಿ ಪಡೆಯುವಿರಿ.
10 : “ಆನಂದಕರ ಜೀವನದ ಬಯಕೆ
ಯಾರಿಗಿದೆಯೋ
ಸುದಿನಗಳನು ಕಾಣುವ ಆಶೆ ಯಾರಿಗಿದೆಯೋ
ಅಂಥವನು ಬಿಗಿಹಿಡಿಯಲಿ ನಾಲಿಗೆಯನು
ಕೆಟ್ಟದನು ನುಡಿಯದಂತೆ
ತಡೆಹಿಡಿಯಲಿ ತುಟಿಯನು
ಕಪಟವನಾಡದಂತೆ.
11 : ಕೆಡಕನ್ನು ಬಿಟ್ಟು ಒಳಿತನ್ನು ಕೈಗೊಳ್ಳಲಿ
ಶಾಂತಿಯನರಸಿ ಅದರ ಸ್ಥಾಪನೆಗೆ ಶ್ರಮಿಸಲಿ.
12 : ನೀತಿವಂತರನು ಕಾಯುವನು ಸರ್ವೇಶ್ವರನು
ಅವರ ವಿಜ್ಞಾಪನೆಗೆ ಕಿವಿಗೊಡುವನು.
ಕೆಡುಕರಿಗಾದರೋ ಆತನು ವಿಮುಖನು,”
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
13 : ನೀವು ಒಳ್ಳೆಯದನ್ನು ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಬಗೆಯುವವರು ಯಾರು?
14 : ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ಅನುಭವಿಸಬೇಕಾಗಿ ಬಂದರೂ ನೀವು ಭಾಗ್ಯವಂತರು. ಮಾನವರ ಬೆದರಿಕೆಗೆ ಹೆದರಬೇಡಿ, ಕಳವಳ ಪಡಬೇಡಿ.
15 : ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರಕೊಡಲು ಸರ್ವದಾ ಸಿದ್ಧರಾಗಿರಿ.
16 : ಹಾಗೆ ಉತ್ತರ ಕೊಡುವಾಗ ಮರ್ಯಾದೆಯಿಂದಲೂ ಶಾಂತಿ ಸಮಾಧಾನದಿಂದಲೂ ಮಾತನಾಡಿ. ನಿಮ್ಮ ಮನಸ್ಸಾಕ್ಷಿ ಶುದ್ಧವಾಗಿರಲಿ. ಆಗ ಉತ್ತಮವಾದ ನಿಮ್ಮ ಕ್ರಿಸ್ತೀಯ ವರ್ತನೆಯನ್ನು ಕಂಡು ದೂಷಿಸಿದವರು, ನಿಮ್ಮನ್ನು ನಿಂದಿಸಿದ್ದಕ್ಕಾಗಿ ತಾವೇ ನಾಚಿಕೆಪಡುವರು.
17 : ಕೆಟ್ಟದ್ದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಾದರೆ, ಒಳ್ಳೆಯದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದೇ ಲೇಸು.
18 : ಅಂತೆಯೇ ಕ್ರಿಸ್ತಯೇಸು ನೀತಿವಂತರಾಗಿದ್ದರೂ ಅನೀತಿವಂತರಿಗಾಗಿ ಪ್ರಾಣತ್ಯಾಗ ಮಾಡಿದರು. ಪಾಪನಿವಾರಣಾರ್ಥವಾಗಿ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವಂತರಾದರು.
19 : ಆಧ್ಯಾತ್ಮಿಕವಾಗಿಯೇ ತೆರಳಿ ಸೆರೆಯಲ್ಲಿದ್ದ ಆತ್ಮಗಳಿಗೆ ಶುಭಸಂದೇಶವನ್ನು ಬೋಧಿಸಿದರು.
20 : ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಳ್ಮೆಯಿಂದಿದ್ದ ದೇವರಿಗೆ ಅವಿಧೇಯರಾಗಿದ್ದ ಆತ್ಮಗಳೇ ಅವು. ನಾವೆಯೊಳಗಿದ್ದು ಕೆಲವರು, ಅಂದರೆ ಎಂಟು ಜನರು, ಜಲದಿಂದ ರಕ್ಷಣೆ ಹೊಂದಿದರು.
21 : ಇದು ದೀಕ್ಷಾಸ್ನಾನವನ್ನು ಸೂಚಿಸುವ ಒಂದು ಸಂಕೇತ. ಈ ದೀಕ್ಷಾಸ್ನಾನ ಯೇಸುಕ್ರಿಸ್ತರ ಪುನರುತ್ಥಾನದ ಮೂಲಕ ನಿಮಗೆ ಜೀವೋದ್ಧಾರವನ್ನು ನೀಡುತ್ತದೆ. ಇದು ಕೇವಲ ದೇಹದ ಮಾಲಿನ್ಯವನ್ನು ಹೋಗಲಾಡಿಸುವಂಥಾದ್ದಲ್ಲ; ಶುದ್ಧಮನಸ್ಸಿನಿಂದ ದೇವರಿಗೆ ಮಾಡುವ ಪ್ರಮಾಣ ವಚನವಾಗಿದೆ.
22 : ಯೇಸುಕ್ರಿಸ್ತರು ಸ್ವರ್ಗಕ್ಕೆ ಏರಿ, ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿದ್ದಾರೆ; ದೂತಗಣಗಳ ಮೇಲೂ ಸ್ವರ್ಗೀಯ ಶಕ್ತರ ಹಾಗೂ ಅಧಿಕಾರಿಗಳ ಮೇಲೂ ಆಳ್ವಿಕೆ ನಡೆಸುತ್ತಿದ್ದಾರೆ.