1 : ಎಲ್ಲಾ ಕೆಟ್ಟತನವನ್ನು ಬಿಟ್ಟುಬಿಡಿ. ಸುಳ್ಳಾಡುವುದಾಗಲಿ, ವಂಚಿಸುವುದಾಗಲಿ, ಅಸೂಯೆಪಡುವುದಾಗಲಿ, ಪರದೂಷಣೆ ಮಾಡುವುದಾಗಲಿ ನಿಮ್ಮಲ್ಲಿ ಇರಬಾರದು.
2 : ಹೊಸಜನ್ಮ ಪಡೆದ ಶಿಶುಗಳಂತೆ, ಶುದ್ಧವಾದ ಆಧ್ಯಾತ್ಮಿಕ ಹಾಲಿಗಾಗಿ ಹಂಬಲಿಸಿರಿ; ಅದನ್ನು ಕುಡಿದು ಬೆಳೆಯುತ್ತಾ ಜೀವೋದ್ಧಾರವನ್ನು ಹೊಂದುವಿರಿ.
3 : “ಪ್ರಭು ಎಂಥಾ ದಯಾಳು ಎಂಬುದನ್ನು ನೀವು ಅನುಭವದಿಂದ ಅರಿತುಕೊಂಡಿದ್ದೀರಿ.”
4 : ಪ್ರಭುವಿನ ಬಳಿಗೆ ಬನ್ನಿ; ಸಜೀವ ಶಿಲೆಯಾದ ಅವರನ್ನು ಮಾನವರು ನಿಷ್ಪ್ರಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು.
5 : ನೀವೂ ಸಹ ಸಜೀವ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಆ ದೇವಾಲಯದಲ್ಲೇ ಯೇಸುಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕವರ್ಗದವರು ನೀವಾಗಿರುವಿರಿ.
6 : ಈ ಕಾರಣದಿಂದಲೇ ಪವಿತ್ರ ಗ್ರಂಥ ಇಂತೆನ್ನುತ್ತದೆ:
“ಅಮೂಲ್ಯ ಶಿಲೆಯೊಂದನ್ನು
ನಾನಾರಿಸಿಕೊಂಡೆ.
ಸಿಯೋನಿನಲ್ಲಿ ಅದನ್ನೇ ಮುಖ್ಯ
ಮೂಲೆಗಲ್ಲನ್ನಾಗಿರಿಸಿದೆ.
ಎಂದಿಗೂ ಆಶಾಭಂಗವಾಗದು
ಅದರ ಮೇಲೆ ವಿಶ್ವಾಸವಿಡುವವರಿಗೆ.”
7 : ವಿಶ್ವಾಸವಿಟ್ಟಿರುವ ನಿಮಗಂತೂ
ಈ ಶಿಲೆ ಅತ್ಯಮೂಲ್ಯವಾದುದು.
“ಮನೆಕಟ್ಟುವವರು ಬೇಡವೆಂದು
ಮೂಲೆಗೆಸೆದ ಕಲ್ಲೇ
ಪ್ರಮುಖ ಮೂಲೆಗಲ್ಲಾಯಿತು.”
8 : “ಜನರು ಎಡವಿಬೀಳುವ ಕಲ್ಲಿದು;
ಅವರು ಮುಗ್ಗರಿಸಿ ಬೀಳುವ ಬಂಡೆಯಿದು.”
ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು.
9 : ನೀವು ದೇವರು ಆಯ್ದುಕೊಂಡ ಜನಾಂಗ; ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತ ಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿಯೇ ಆಯ್ಕೆಯಾದವರು. ಕಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು ಅವರೇ.
10 : ಒಮ್ಮೆ ನೀವು ಗಣನೆಗೆ ಬಾರದ ಜನಗಳಾಗಿದ್ದಿರಿ. ಈಗಲಾದರೋ ದೇವ ಪ್ರಜೆಗಳೇ ಆಗಿದ್ದೀರಿ. ಹಿಂದೊಮ್ಮೆ, ದೇವರ ಕರುಣೆ ಏನೆಂಬುದೇ ನಿಮಗೆ ತಿಳಿದಿರಲಿಲ್ಲ. ಈಗ ಅವರ ಕರುಣೆಯನ್ನು ಸವಿದಿದ್ದೀರಿ.
11 : ಪ್ರಿಯರೇ, ಈ ಲೋಕದಲ್ಲಿ ಆಗಂತುಕರಂತೆಯೂ ಅಪರಿಚಿತರಂತೆಯೂ ಬಾಳುವ ನೀವು ಆತ್ಮಕ್ಕೆ ವಿರುದ್ಧ ಹೋರಾಡುವ ದೈಹಿಕ ವ್ಯಾಮೋಹಗಳಿಂದ ದೂರವಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
12 : ಅನ್ಯಧರ್ಮೀಯರ ಮಧ್ಯೆ ನಿಮ್ಮ ನಡತೆ ಆದರ್ಶಪ್ರಾಯವಾಗಿರಲಿ. ಅವರು ನಿಮ್ಮನ್ನು ದುಷ್ಕರ್ಮಿಗಳೆಂದು ದೂಷಿಸಿದರೂ ನಿಮ್ಮ ಸತ್ಕಾರ್ಯಗಳನ್ನು ಮೆಚ್ಚಿಕೊಂಡು ಕ್ರಿಸ್ತಯೇಸುವಿನ ಪುನರಾಗಮನದ ದಿನದಂದು ದೇವರನ್ನು ಕೊಂಡಾಡುವರು.
13 : ಎಲ್ಲ ಮಾನವ ಅಧಿಕಾರಿಗಳಿಗೂ ಪ್ರಭುವಿನ ನಿಮಿತ್ತ ಅಧೀನರಾಗಿರಿ. ಸಕಲ ಅಧಿಕಾರವನ್ನು ಪಡೆದಿರುವ ದೇಶಾಧಿಕಾರಿಗೆ ಅಧೀನರಾಗಿ ನಡೆಯಿರಿ.
14 : ದುಷ್ಟರನ್ನು ಶಿಕ್ಷಿಸುವುದಕ್ಕೂ ಶಿಷ್ಟರನ್ನು ಪ್ರಶಂಸಿಸುವುದಕ್ಕೂ ಆತನಿಂದ ನೇಮಿತವಾಗಿರುವ ರಾಜ್ಯಪಾಲರಿಗೂ ಅಧೀನರಾಗಿ ಬಾಳಿರಿ.
15 : ನಿಮ್ಮ ಒಳ್ಳೆಯ ನಡತೆಯಿಂದ, ಅರಿವಿಲ್ಲದೆ ಮಾತನಾಡುವ ಮೂಢಜನರ ಬಾಯನ್ನು ಮುಚ್ಚಿಸಬೇಕೆಂಬುದೇ ದೇವರ ಇಚ್ಛೆ.
16 : ಸ್ವತಂತ್ರರಂತೆ ಬಾಳಿರಿ; ಆದರೆ ಕೆಟ್ಟತನವನ್ನು ಮರೆಮಾಚಲು ನಿಮ್ಮ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳಬೇಡಿ; ದೇವರಿಗೆ ದಾಸರಾಗಿ ಬಾಳಿರಿ.
17 : ಸರ್ವರನ್ನೂ ಸನ್ಮಾನಿಸಿರಿ, ಸಹೋದರರನ್ನು ಸ್ನೇಹಿಸಿರಿ, ದೇವರಲ್ಲಿ ಭಯಭಕ್ತಿ ಇಡಿ, ದೇಶಾಧಿಕಾರಿಗಳಿಗೆ ಗೌರವ ನೀಡಿ.
18 : ಕೆಲಸಗಾರರೇ, ನಿಮ್ಮ ಮೇಲಿನ ಅಧಿಕಾರಿಗಳಿಗೆ ಅಧೀನರಾಗಿರಿ. ಅವರಿಗೆ ಪೂರ್ಣಮರ್ಯಾದೆಯನ್ನು ತೋರಿಸಿರಿ. ದಯಾವಂತರೂ ಹಿತಚಿಂತಕರೂ ಆಗಿರುವ ಅಧಿಕಾರಿಗಳಿಗೆ ಮಾತ್ರವಲ್ಲ, ಕಠಿಣವಾಗಿ ವರ್ತಿಸುವವರಿಗೂ ವಿಧೇಯರಾಗಿರಿ.
19 : ಯಾವನಾದರೂ ಅನ್ಯಾಯವಾಗಿ ಹಿಂಸೆಬಾಧೆಗಳನ್ನು ಅನುಭವಿಸಬೇಕಾಗಿ ಬಂದಾಗ ಅದನ್ನು ದೇವರ ಹೆಸರಿನಲ್ಲಿ ಸಹಿಸಿಕೊಂಡರೆ ಅವನು ಮೆಚ್ಚುಗೆಯನ್ನು ಗಳಿಸುತ್ತಾನೆ.
20 : ನೀವು ತಪ್ಪುಮಾಡಿ, ಶಿಕ್ಷೆಗೆ ಗುರಿಯಾದಾಗ ತಾಳ್ಮೆಯಿಂದಿದ್ದರೆ ಅದೇನೂ ದೊಡ್ಡ ಕಾರ್ಯವಲ್ಲ. ಆದರೆ ಒಳ್ಳೆಯದನ್ನು ಮಾಡಿಯೂ ಬರುವ ಹಿಂಸೆಬಾಧೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡರೆ, ದೇವರು ನಿಮ್ಮನ್ನು ಮೆಚ್ಚುತ್ತಾರೆ.
21 : ನೀವು ಹೀಗೆ ಜೀವಿಸಬೇಕೆಂದೇ ದೇವರು ನಿಮ್ಮನ್ನು ಕರೆದಿದ್ದಾರೆ. ಕ್ರಿಸ್ತಯೇಸು ಸಹ ನಿಮಗಾಗಿ ಹಿಂಸೆಬಾಧೆಯನ್ನು ಅನುಭವಿಸಿದರು; ತಮ್ಮ ಹೆಜ್ಜೆಯ ಜಾಡನ್ನೇ ನೀವು ಅನುಸರಿಸುವಂತೆ ನಿಮಗೊಂದು ಆದರ್ಶವನ್ನು ಬಿಟ್ಟುಹೋದರು.
22 : ಅವರು ಯಾವ ಪಾಪವನ್ನೂ ಮಾಡಲಿಲ್ಲ. ಅವರ ಬಾಯಿಂದ ಅಬದ್ಧವಾದ ಮಾತೊಂದೂ ಕೇಳಿಬರಲಿಲ್ಲ.
23 : ಅವರು, ಅವಮಾನಪಡಿಸಿದವರನ್ನು ಪ್ರತಿಯಾಗಿ ಅವಮಾನ ಪಡಿಸಲಿಲ್ಲ. ಅವರು ಯಾತನೆಯನ್ನು ಅನುಭವಿಸುವಾಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸತ್ಯಸ್ವರೂಪರೂ ನ್ಯಾಯಾಧಿಪತಿಯೂ ಆದ ದೇವರಿಗೆ ತಮ್ಮನ್ನೇ ಒಪ್ಪಿಸಿಕೊಂಡರು.
24 : ನಾವು ಪಾಪದ ಪಾಲಿಗೆ ಸತ್ತು, ಸತ್ಯಕ್ಕೋಸ್ಕರ ಜೀವಿಸುವಂತೆ ಕ್ರಿಸ್ತಯೇಸು ತಮ್ಮ ದೇಹದಲ್ಲಿ ನಮ್ಮ ಪಾಪಗಳನ್ನು ಹೊತ್ತು ಶಿಲುಬೆಯ ಮರವನ್ನೇರಿದರು. ಅವರ ಗಾಯಗಳಿಂದ ನೀವು ಗುಣಹೊಂದಿದಿರಿ.
25 : ನೀವು ದಾರಿತಪ್ಪಿದ ಕುರಿಗಳಂತೆ ಅಲೆಯುತ್ತಿದ್ದಿರಿ. ಈಗಲಾದರೋ ನಿಮ್ಮ ಆತ್ಮಗಳನ್ನು ಕಾಯುವ ಕುರಿಗಾಹಿಯೂ ಸಂರಕ್ಷಕನೂ ಆದಾತನ ಬಳಿಗೆ ಮರಳಿದ್ದೀರಿ.