1 : ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಪ್ರಾಂತ್ಯಗಳಲ್ಲಿ ಚದುರಿಹೋಗಿ ನಿರಾಶ್ರಿತರಂತೆ ಜೀವಿಸುತ್ತಿರುವ ದೇವಜನರಿಗೆ - ಯೇಸುಕ್ರಿಸ್ತರ ಪ್ರೇಷಿತನಾದ ಪೇತ್ರನು ಬರೆಯುವ ಪತ್ರ:
2 : ನೀವು ಯೇಸುಕ್ರಿಸ್ತರಿಗೆ ಶರಣರಾಗಿ ಅವರ ರಕ್ತದಿಂದ ಶುದ್ಧೀಕರಣಹೊಂದಲು ತಂದೆಯಾದ ದೇವರ ಸಂಕಲ್ಪಾನುಸಾರ ಆಯ್ಕೆಯಾದವರು; ಅವರ ಆತ್ಮದ ಮುಖಾಂತರ ಪವಿತ್ರೀಕರಿಸಲಾದವರು. ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಸಮೃದ್ಧಿಯಾಗಿ ಲಭಿಸಲಿ !
3 : ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ! ಯೇಸುಕ್ರಿಸ್ತರನ್ನು ಮರಣದಿಂದ ಪುನರುತ್ಥಾನಗೊಳಿಸುವುದರ ಮೂಲಕ ದೇವರು ತಮ್ಮ ಅಪಾರ ಕರುಣೆಯಿಂದ ನಮಗೆ ಹೊಸ ಜನ್ಮವನ್ನು ಮತ್ತು ಜೀವಂತ ನಿರೀಕ್ಷೆಯನ್ನು ನೀಡಿದ್ದಾರೆ.
4 : ಹೀಗೆ ಅವರು, ತಮ್ಮ ಸ್ವಂತ ಜನರಿಗಾಗಿ ಸ್ವರ್ಗದಲ್ಲಿ ಕಾದಿರಿಸಿರುವ ಅಳಿಯದ, ಅಕ್ಷಯವಾದ, ಅನಂತವಾದ ಸಿರಿಸಂಪತ್ತಿಗೆ ನಿಮ್ಮನ್ನು ಬಾಧ್ಯರನ್ನಾಗಿ ಮಾಡಿದ್ದಾರೆ.
5 : ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗಲಿರುವ ಜೀವೋದ್ಧಾರವು ವಿಶ್ವಾಸಿಗಳಾದ ನಿಮಗೆ ಲಭಿಸುವಂತೆ ದೇವರು ತಮ್ಮ ಶಕ್ತಿಯಿಂದ ನಿಮ್ಮನ್ನು ಕಾಪಾಡುತ್ತಾರೆ.
6 : ಸದ್ಯಕ್ಕೆ ನೀವು ಕೊಂಚಕಾಲ ಹಲವಿಧವಾದ ಪರಿಶೋಧನೆಗಳ ನಿಮಿತ್ತ ದುಃಖವನ್ನು ಅನುಭವಿಸಬೇಕಾಗಿದ್ದರೂ ಪ್ರತ್ಯಕ್ಷವಾಗಲಿರುವ ಆ ಸಿರಿಸಂಪತ್ತನ್ನು ಜ್ಞಾಪಿಸಿಕೊಂಡು ಹರ್ಷಚಿತ್ತರಾಗಿರಿ.
7 : ಪರಿಶೋಧನೆಗಳು ಬಂದೊದಗುವುದು ನಿಮ್ಮ ವಿಶ್ವಾಸವನ್ನು ಪುಟವಿಡುವುದಕ್ಕಾಗಿಯೇ. ನಶಿಸಿ ಹೋಗುವ ಬಂಗಾರವೂ ಕೂಡ ಬೆಂಕಿಯಿಂದ ಪರಿಶೋಧಿತವಾಗುತ್ತದೆ. ಬಂಗಾರಕ್ಕಿಂತಲೂ ಬಹು ಅಮೂಲ್ಯವಾದ ನಿಮ್ಮ ವಿಶ್ವಾಸವು ಶೋಧಿತವಾಗಬೇಕು. ಆಗ ಮಾತ್ರ ಯೇಸುಕ್ರಿಸ್ತರು ಪ್ರತ್ಯಕ್ಷವಾಗುವ ದಿನದಂದು ನಿಮಗೆ ಪ್ರಶಂಸೆ, ಪ್ರತಿಷ್ಠೆ ಹಾಗೂ ಪ್ರತಿಭೆ ದೊರಕುತ್ತವೆ.
8 : ಕ್ರಿಸ್ತಯೇಸುವನ್ನು ನೀವು ನೋಡದಿದ್ದರೂ ಅವರನ್ನು ಪ್ರೀತಿಸುತ್ತೀರಿ. ನೀವೀಗ ಕಣ್ಣಾರೆ ಕಾಣದಿದ್ದರೂ ಅವರನ್ನು ವಿಶ್ವಾಸಿಸುತ್ತೀರಿ.
9 : ಇದರ ಅಂತಿಮ ಫಲವಾಗಿ ಜೀವೋದ್ಧಾರವನ್ನು ಪಡೆಯುತ್ತೀರಿ. ಈ ಕಾರಣದಿಂದ ಅವರ್ಣನೀಯವಾದ ಮಹದಾನಂದದಿಂದ ನಲಿಯುತ್ತೀರಿ.
10 : ಈ ಜೀವೋದ್ಧಾರವನ್ನು ಕುರಿತೇ ಪ್ರವಾದಿಗಳು ಸೂಕ್ಷ್ಮವಾಗಿ ವಿಚಾರಿಸಿ ಸಂಶೋಧನೆ ನಡೆಸಿದರು. ದೇವರು ನಿಮಗೆ ಕೊಡಲಿದ್ದ ಈ ವರವನ್ನು ಕುರಿತೇ ಅವರು ಪ್ರವಾದಿಸಿದರು.
11 : ಕ್ರಿಸ್ತಯೇಸು ಅನುಭವಿಸಬೇಕಾಗಿದ್ದ ಮರಣವನ್ನು, ಯಾತನೆಯನ್ನು ಮತ್ತು ಅನಂತರದ ಪುನರುತ್ಥಾನದ ಮಹಿಮೆಯನ್ನು ಈ ಪ್ರವಾದಿಗಳು ಪ್ರವಾದಿಸುವಾಗ, ತಮ್ಮಲ್ಲಿದ್ದ ಕ್ರಿಸ್ತಾತ್ಮವು ಇದಕ್ಕೆ ಯಾವ ಸಮಯ ಸಂದರ್ಭವನ್ನು ಸೂಚಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದರು.
12 : ಈ ಸೇವಾಕಾರ್ಯವನ್ನು ಅವರು ಸ್ವಾರ್ಥಸಾಧನೆಗಾಗಿ ಅಲ್ಲ, ನಿಮಗೋಸ್ಕರವಾಗಿಯೇ ಮಾಡುತ್ತಿರುವುದಾಗಿ ಅವರಿಗೆ ತಿಳಿಸಲಾಗಿತ್ತು. ಅವರು ಪ್ರವಾದಿಸಿದ ಘಟನೆಗಳು ಈಗ ಸಂಭವಿಸಿವೆ ಎಂಬುದನ್ನು ಸ್ವರ್ಗದಿಂದ ಕಳುಹಿಸಲಾದ ಪವಿತ್ರಾತ್ಮರ ಶಕ್ತಿಯಿಂದ, ಶುಭಸಂದೇಶವನ್ನು ಸಾರಿದವರ ಮುಖಾಂತರ ನಿಮಗೆ ಪ್ರಕಟಿಸಲಾಗಿದೆ. ದೇವದೂತರು ಸಹ ವೀಕ್ಷಿಸಲು ಅಪೇಕ್ಷಿಸುವಂಥ ಸಂಗತಿಗಳಿವು.
13 : ಆದ್ದರಿಂದ ನೀವು ಸ್ವಸ್ಥಚಿತ್ತರಾಗಿರಿ. ನಿಮ್ಮ ಮನಸ್ಸು ಕಾರ್ಯೋನ್ಮುಖವಾಗಿರಲಿ. ಯೇಸುಕ್ರಿಸ್ತರು ಪ್ರತ್ಯಕ್ಷರಾಗುವಾಗ ನಿಮಗೆ ಲಭಿಸಲಿರುವ ಸೌಭಾಗ್ಯದಲ್ಲಿ ಪೂರ್ಣ ನಿರೀಕ್ಷೆ ಉಳ್ಳವರಾಗಿರಿ.
14 : ವಿಧೇಯರಾದ ಮಕ್ಕಳಂತೆ ನಡೆದುಕೊಳ್ಳಿ. ನೀವು ಅಜ್ಞಾನಿಗಳಾಗಿದ್ದಾಗ ದುರಿಚ್ಛೆಗಳಿಗೆ ಈಡಾಗಿದ್ದಿರಿ; ಈಗ ಅವುಗಳಿಗೆ ಎಡೆಕೊಡಬೇಡಿ.
15 : ಅದಕ್ಕೆ ಬದಲು ನಿಮ್ಮನ್ನು ಕರೆದ ದೇವರು ಪವಿತ್ರರಾಗಿರುವಂತೆ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿರಿ.
16 : ಏಕೆಂದರೆ, “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಿ,” ಎಂದು ಲಿಖಿತವಾಗಿದೆ.
17 : ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನು “ತಂದೆಯೇ” ಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ.
18 : ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿ ಹೋಗುವ ಬೆಳ್ಳಿಬಂಗಾರವಲ್ಲ.
19 : ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ.
20 : ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು.
21 : ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ.
22 : ಸತ್ಯಕ್ಕೆ ಶರಣಾಗಿ ಆತ್ಮಶುದ್ಧಿ ಹೊಂದಿರುವ ನೀವು ಸಹೋದರರನ್ನು ನಿಷ್ಕಪಟದಿಂದ ಪ್ರೀತಿಸಬಲ್ಲಿರಿ. ಎಂದೇ, ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ.
23 : ನೀವು ಸಜೀವವಾದ ಅನಂತ ದೈವವಾಕ್ಯದ ಮೂಲಕ ಹೊಸಜನ್ಮವನ್ನು ಪಡೆದಿದ್ದೀರಿ; ಈ ಜನ್ಮವನ್ನು ನೀವು ಪಡೆದಿರುವುದು ಮತ್ರ್ಯ ಮಾನವನಿಂದಲ್ಲ, ಅಮರ ದೇವರಿಂದ.
24 : ಪವಿತ್ರಗ್ರಂಥದಲ್ಲಿ ಬರೆದಿರುವಂತೆ:
ನರಮಾನವರೆಲ್ಲರೂ ಗರಿಹುಲ್ಲಿನಂತೆ
ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತೆ.
ಹುಲ್ಲೊಣಗಿ ಹೂ ಬಾಡಿಬೀಳುವುದು
ಪ್ರಭುವಿನ ವಾಕ್ಯವಾದರೋ
ಶಾಶ್ವತವಾಗಿ ನಿಲ್ಲುವುದು.
25 : ಈ ವಾಕ್ಯವೇ ನಿಮಗೆ ಸಾರಲಾದ ಶುಭಸಂದೇಶ.