1 : ಯೇಸುವೇ ‘ಕ್ರಿಸ್ತ’ ಎಂದು ವಿಶ್ವಾಸಿಸುವ ಪ್ರತಿಯೊಬ್ಬನೂ ದೇವರ ಮಗು. ತಂದೆಯನ್ನು ಪ್ರೀತಿಸುವವನು ಆತನ ಮಗುವನ್ನೂ ಪ್ರೀತಿಸುತ್ತಾನೆ.
2 : ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಪಾಲಿಸುವುದರಿಂದ ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದು ನಿಶ್ಚಯ ಆಗುತ್ತದೆ.
3 : ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ.
4 : ದೇವರಿಂದ ಜನಿಸಿದ ಪ್ರತಿ ಒಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ.
5 : ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ?
6 : ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಜಲದಿಂದ ಮಾತ್ರವಲ್ಲ, ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು.
7 : ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ.
8 : ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ.
9 : ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅದಕ್ಕಿಂತಲೂ ಶ್ರೇಷ್ಠವಾದುದು. ದೇವರ ಈ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ.
10 : ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ.
11 : ದೇವರು ನಮಗೆ ನಿತ್ಯ ಜೀವವನ್ನು ಅನುಗ್ರಹಿಸಿದ್ದಾರೆ. ಆ ಜೀವ ಅವರ ಪುತ್ರನಲ್ಲಿದೆ ಎಂಬುದೇ ಈ ಸಾಕ್ಷ್ಯ.
12 : ಯಾರಲ್ಲಿ ದೇವರ ಪುತ್ರ ಇದ್ದಾನೋ ಅವನಲ್ಲಿ ಆ ಜೀವವಿರುತ್ತದೆ. ಯಾರಲ್ಲಿ ದೇವರ ಪುತ್ರನಿಲ್ಲವೋ ಅವನಲ್ಲಿ ಆ ಜೀವ ಇರುವುದಿಲ್ಲ.
13 : ದೇವರ ಪುತ್ರನ ನಾಮದಲ್ಲಿ ವಿಶ್ವಾಸ ಇಟ್ಟಿರುವ ನೀವು ನಿತ್ಯಜೀವವನ್ನು ಪಡೆದವರು ಎಂಬುದನ್ನು ತಿಳಿಸಲೆಂದೇ ನಾನು ನಿಮಗೆ ಇದನ್ನೆಲ್ಲಾ ಬರೆದಿದ್ದೇನೆ.
14 : ದೇವರ ಚಿತ್ತಾನುಸಾರ ಏನನ್ನು ಬೇಡಿಕೊಂಡರೂ ಅವರು ನಮ್ಮ ವಿಜ್ಞಾಪನೆಗೆ ಕಿವಿಗೊಡುತ್ತಾರೆಂಬ ಭರವಸೆ ನಮಗಿದೆ.
15 : ನಾವು ಏನನ್ನು ಬೇಡಿಕೊಂಡರೂ ನಮ್ಮ ವಿಜ್ಞಾಪನೆಗೆ ದೇವರು ಕಿವಿಗೊಡುತ್ತಾರೆ ಎಂಬುದು ನಮಗೆ ತಿಳಿದಿದ್ದರೆ ನಾವು ಬೇಡಿದುದೆಲ್ಲವೂ ನಮಗೆ ಲಭಿಸಿದಂತೆಯೇ ಎಂಬುದೂ ನಮಗೆ ತಿಳಿದಿದೆ.
16 : ಮಾರಕವಲ್ಲದ ಪಾಪವೊಂದನ್ನು ಸಹೋದರನು ಮಾಡುವುದನ್ನು ಯಾರಾದರೂ ಕಂಡರೆ, ಆ ಸಹೋದರನಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಆ ಸಹೋದರನಿಗೆ ಸಜ್ಜೀವವನ್ನು ಅನುಗ್ರಹಿಸುವರು. ಮಾರಕವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಮಾರಕವಾದ ಪಾಪವೂ ಉಂಟು. ಅದರ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ.
17 : ಅಕ್ರಮವಾದುದೆಲ್ಲವೂ ಪಾಪವೇ. ಆದರೆ ಮಾರಕವಲ್ಲದಂಥ ಪಾಪವೂ ಇದೆ.
18 : ನಮಗೆ ತಿಳಿದಿರುವಂತೆ ದೇವರಿಂದ ಜನಿಸಿದವನು ಪಾಪಜೀವಿಯಾಗಿರುವುದಿಲ್ಲ. ಏಕೆಂದರೆ, ದೇವರ ಪುತ್ರನ ರಕ್ಷಣೆ ಅವನಿಗಿದೆ. ಕೇಡಿಗನ ಹಿಡಿತಕ್ಕೆ ಅವನು ಸಿಗನು.
19 : ಇಡೀ ಲೋಕವು ಕೇಡಿಗನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ.
20 : ದೇವರ ಪುತ್ರ ಆಗಮಿಸಿ, ಸತ್ಯ ಸ್ವರೂಪರಾದ ದೇವರನ್ನು ನಾವು ತಿಳಿದುಕೊಳ್ಳುವಂತೆ ನಮಗೆ ಅರಿವನ್ನು ನೀಡಿದ್ದಾರೆ. ಇದನ್ನು ನಾವು ಬಲ್ಲೆವು. ದೇವರ ಪುತ್ರರಾದ ಯೇಸುಕ್ರಿಸ್ತರಲ್ಲಿ ನೆಲೆಸಿರುವ ನಾವು ಸತ್ಯಸ್ವರೂಪಿಯಲ್ಲೇ ನೆಲೆಸಿದ್ದೇವೆ. ನಿಜವಾದ ದೇವರೂ ನಿತ್ಯಜೀವವೂ ಇವರೇ.
21 : ಪ್ರಿಯ ಮಕ್ಕಳೇ, ಮಿಥ್ಯ ದೇವರುಗಳಿಂದ ನೀವು ದೂರವಿರಿ.