Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಯೊವಾ


1 : ಪ್ರಿಯರೇ, “ನಾವು ಪವಿತ್ರಾತ್ಮ ಪ್ರೇರಿತರು” ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ.
2 : ದೇವರ ಆತ್ಮದಿಂದ ಬಂದ ಪ್ರೇರಣೆಯನ್ನು ನೀವು ಹೀಗೆ ಗುರುತಿಸಬಹುದು: ಮನುಷ್ಯ ಆಗಿ ಬಂದ ಕ್ರಿಸ್ತಯೇಸುವನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದುದು.
3 : ಯೇಸುವನ್ನು ಒಪ್ಪಿಕೊಳ್ಳದ ಆತ್ಮ ದೇವರಿಂದ ಪ್ರೇರಿತವಾದುದಲ್ಲ. ಅದು ಕ್ರಿಸ್ತ ವಿರೋಧಿಯ ಆತ್ಮ. ಅದು ಬರುವುದೆಂದು ನೀವು ಕೇಳಿದ್ದೀರಿ; ಈಗಾಗಲೇ ಅದು ಲೋಕದಲ್ಲಿ ತಲೆದೋರಿದೆ.
4 : ಪ್ರಿಯ ಮಕ್ಕಳೇ, ನೀವಂತೂ ದೇವರಿಗೆ ಸೇರಿದವರು. ಲೋಕದಲ್ಲಿರುವ ದುರಾತ್ಮಕ್ಕಿಂತಲೂ ನಿಮ್ಮಲ್ಲಿರುವ ಆತ್ಮವು ಶ್ರೇಷ್ಠವಾದುದು. ಆದ್ದರಿಂದಲೇ ಆ ಕಪಟ ಪ್ರವಾದಿಗಳನ್ನು ಜಯಿಸಿದ್ದೀರಿ.
5 : ಅವರು ಲೋಕಕ್ಕೆ ಸೇರಿದವರು. ಆದ್ದರಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ. ಎಂದೇ, ಲೋಕವು ಅವರಿಗೆ ಕಿವಿಗೊಡುತ್ತದೆ.
6 : ನಾವಾದರೋ ದೇವರಿಗೆ ಸೇರಿದವರು. ದೇವರನ್ನು ಅರಿತವನು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಸೇರದವನು ನಮಗೆ ಕಿವಿಗೊಡುವುದಿಲ್ಲ. ಇದರಿಂದಲೇ ಸತ್ಯವನ್ನು ಸಾರುವ ಆತ್ಮ ಯಾವುದು ಮತ್ತು ಅಸತ್ಯವನ್ನು ಸಾರುವ ಆತ್ಮ ಯಾವುದು ಎಂಬುದು ನಮಗೆ ತಿಳಿಯುತ್ತದೆ. ದೇವರು ಪ್ರೀತಿಸ್ವರೂಪಿ
7 : ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು.
8 : ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ.
9 : ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು.
10 : ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.
11 : ಪ್ರಿಯರೇ, ದೇವರೇ ನಮ್ಮನ್ನು ಇಷ್ಟಾಗಿ ಪ್ರೀತಿಸಿರುವಲ್ಲಿ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಲೇಬೇಕು.
12 : ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೂ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಸಿರುತ್ತಾರೆ. ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.
13 : ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದಲೇ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲೆಸಿರುವುದನ್ನು ತಿಳಿದುಕೊಳ್ಳುತ್ತೇವೆ.
14 : ಪಿತನು ತಮ್ಮ ಪುತ್ರನನ್ನು ಲೋಕೋದ್ಧಾರಕನನ್ನಾಗಿ ಕಳುಹಿಸಿಕೊಟ್ಟದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದರ ವಿಷಯವಾಗಿ ಸಾಕ್ಷಿ ಹೇಳುತ್ತೇವೆ.
15 : ಯೇಸುವೇ ದೇವರ ಪುತ್ರನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಸಿದ್ದಾರೆ; ಅವನೂ ದೇವರಲ್ಲಿ ನೆಲೆಸಿದ್ದಾನೆ.
16 : ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ. ಅದರಲ್ಲಿ ನಮಗೆ ವಿಶ್ವಾಸವಿದೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ.
17 : ಇದರಿಂದಾಗಿ, ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬಂದಿರುತ್ತದೆ; ನ್ಯಾಯತೀರ್ಪಿನ ದಿನದಂದು ನಾವು ಭರವಸೆಯಿಂದಿರುತ್ತೇವೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ.
18 : ಪ್ರೀತಿ ಇರುವಲ್ಲಿ ಭೀತಿ ಇರುವುದಿಲ್ಲ. ಪೂರ್ಣ ಪ್ರೀತಿ ಭೀತಿಯನ್ನು ಹೊರದೂಡುತ್ತದೆ. ಭೀತಿ ಇರುವಲ್ಲಿ ಯಾತನೆ ಇರುತ್ತದೆ. ಭೀತಿಯಿಂದಿರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ.
19 : ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಪ್ರೀತಿಸುತ್ತೇವೆ.
20 : ತಾನು ದೇವರನ್ನು ಪ್ರೀತಿಸುತ್ತೇನೆಂದು ಒಬ್ಬನು ಹೇಳುತ್ತಾ ತನ್ನ ಸಹೋದರನನ್ನು ದ್ವೇಷಿಸಿದರೆ, ಅವನು ಸುಳ್ಳುಗಾರನಾಗುತ್ತಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಿಯಾನು?
21 : ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ಕ್ರಿಸ್ತಯೇಸು ನಮಗೆ ಮಾಡಿರುವ ಆಜ್ಞೆ.

· © 2017 kannadacatholicbible.org Privacy Policy