1 : ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ.
2 : ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ.
3 : ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆ.
4 : ಪಾಪಮಾಡುವ ಪ್ರತಿಯೊಬ್ಬನೂ ದೇವರ ಆಜ್ಞೆಯನ್ನು ವಿೂರುತ್ತಾನೆ. ದೇವರ ಆಜ್ಞೆಯನ್ನು ಉಲ್ಲಂಘಿಸುವುದೇ ಪಾಪ.
5 : ಪಾಪರಹಿತರಾದ ಕ್ರಿಸ್ತಯೇಸು ಪಾಪಪರಿಹಾರ ಮಾಡಲೆಂದೇ ಕಾಣಿಸಿಕೊಂಡರೆಂದು ನೀವು ಬಲ್ಲಿರಿ.
6 : ಅವರಲ್ಲಿ ನೆಲೆಸಿರುವ ಪ್ರತಿಯೊಬ್ಬನೂ ಪಾಪಮಾಡನು. ಪಾಪ ಮಾಡುವವನು ಅವರನ್ನು ಕಂಡವನೂ ಅಲ್ಲ, ಅರಿತವನೂ ಅಲ್ಲ.
7 : ಪ್ರಿಯ ಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವುದಕ್ಕೆ ಯಾರಿಗೂ ಅವಕಾಶ ಕೊಡಬೇಡಿ. ಕ್ರಿಸ್ತಯೇಸು ಸತ್ಯಸ್ವರೂಪಿಯಾಗಿರುವಂತೆಯೇ ಸತ್ಯಕ್ಕನುಸಾರ ನಡೆಯುವ ಪ್ರತಿ ಒಬ್ಬನೂ ಸತ್ಯವಂತನೇ.
8 : ಪಾಪಮಾಡುವವನು ಸೈತಾನನ ಸಂತಾನದವನು. ಸೈತಾನನು ಆದಿಯಿಂದಲೂ ಪಾಪಮಾಡಿದವನೇ. ಅವನ ದುಷ್ಕøತ್ಯಗಳನ್ನು ವಿನಾಶಗೊಳಿಸಲೆಂದೇ ದೇವರ ಪುತ್ರ ಕಾಣಿಸಿಕೊಂಡದ್ದು.
9 : ದೇವರಿಂದ ಜನಿಸಿದ ಯಾವನೂ ಪಾಪಮಾಡನು. ದೇವರ ಜೀವದ ಕುಡಿ ಅವನಲ್ಲಿರುವುದು. ಅವನು ಪಾಪದಲ್ಲಿ ಜೀವಿಸನು. ಏಕೆಂದರೆ, ಅವನು ದೇವರಿಂದ ಜನಿಸಿದವನು.
10 : ಸನ್ಮಾರ್ಗದಲ್ಲಿ ನಡೆಯದವನೂ ಸಹೋದರನನ್ನು ಪ್ರೀತಿಸದವನೂ ದೇವರಿಂದ ಜನಿಸಿದವನಲ್ಲ. ಹೀಗೆ ದೇವರ ಮಕ್ಕಳು ಯಾರು ಮತ್ತು ಸೈತಾನನ ಮಕ್ಕಳು ಯಾರು ಎಂಬುದನ್ನು ತಿಳಿಯಬಹುದು.
11 : ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ಮೊತ್ತಮೊದಲಿನಿಂದಲೂ ನೀವು ಕೇಳಿದ ಸಂದೇಶ.
12 : ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ? ತನ್ನ ಕೃತ್ಯಗಳು ದುಷ್ಟವಾಗಿದ್ದು ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ?
13 : ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿ.
14 : ನಾವು ನಮ್ಮ ಸಹೋದರರನ್ನು ಪ್ರೀತಿಸುವುದರಿಂದ ಸಾವಿನಿಂದ ಜೀವಕ್ಕೆ ಸಾಗಿದ್ದೇವೆಂದು ತಿಳಿದಿದ್ದೇವೆ. ಪ್ರೀತಿಸದೆ ಇರುವವನು ಸಾವಿನಲ್ಲೇ ನೆಲೆಸಿರುತ್ತಾನೆ.
15 : ತನ್ನ ಸಹೋದರರನ್ನು ದ್ವೇಷಿಸುವವನು ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯ ಜೀವ ಇರದೆಂದು ನೀವು ಬಲ್ಲಿರಿ.
16 : ಕ್ರಿಸ್ತಯೇಸು ನಮಗೋಸ್ಕರ ತಮ್ಮ ಪ್ರಾಣವನ್ನೇ ತೆತ್ತರು. ಇದರಿಂದ ಪ್ರೀತಿ ಎಂತಹುದೆಂದು ನಾವು ಅರಿತುಕೊಂಡೆವು. ನಾವೂ ಕೂಡ ಸಹೋದರರಿಗಾಗಿ ಪ್ರಾಣಾರ್ಪಣೆ ಮಾಡಲು ಬದ್ಧರಾಗಿದ್ದೇವೆ.
17 : ಲೋಕದ ಸುಖಸಂಪತ್ತುಳ್ಳ ಒಬ್ಬನು, ಕುಂದು ಕೊರತೆಯಲ್ಲಿ ಸಿಲುಕಿರುವ ತನ್ನ ಸಹೋದರನನ್ನು ಕಂಡಾಗಲೂ ಮನಕರಗದಿದ್ದರೆ ಅವನಲ್ಲಿ ದೇವರ ಪ್ರೀತಿ ಹೇಗೆ ತಾನೇ ನೆಲೆಸೀತು?
18 : ಪ್ರಿಯಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು.
19 : ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ.
20 : ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸಿದ್ದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿಂತಲೂ ದೊಡ್ಡವರೆಂಬುದು ನಮಗೆ ತಿಳಿದೇ ಇರುತ್ತದೆ.
21 : ಪ್ರಿಯರೇ, ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ.
22 : ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ.
23 : ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ಞೆ. ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ.