Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಯೊವಾ


1 : ಪ್ರಿಯ ಮಕ್ಕಳೇ, ನೀವು ಪಾಪ ಮಾಡಬಾರದೆಂದೇ ನಾನಿದನ್ನು ನಿಮಗೆ ಬರೆಯುತ್ತಿದ್ದೇನೆ. ಒಂದು ವೇಳೆ ಯಾರಾದರೂ ಪಾಪಮಾಡಿದ್ದೇ ಆದರೆ ನಮ್ಮ ಪರವಾಗಿ ಪಿತನ ಬಳಿಯಲ್ಲಿ ಬಿನ್ನಯಿಸಲು ಒಬ್ಬರಿದ್ದಾರೆ. ಅವರೇ ಸತ್ಯಸ್ವರೂಪರಾದ ಯೇಸುಕ್ರಿಸ್ತರು.
2 : ಅವರೇ ನಮ್ಮ ಪಾಪಗಳನ್ನು ನಿವಾರಿಸುವ ಪರಿಹಾರ ಬಲಿಯಾಗಿದ್ದಾರೆ. ನಮ್ಮ ಪಾಪಗಳನ್ನು ಮಾತ್ರವಲ್ಲ, ಇಡೀ ಜಗತ್ತಿನ ಪಾಪಗಳನ್ನು ಅವರು ಪರಿಹರಿಸುತ್ತಾರೆ.
3 : ನಾವು ದೇವರ ಆಜ್ಞೆಗಳನ್ನು ಕೈಗೊಂಡು ನಡೆದರೆ ಅದರಿಂದಲೇ ಅವರ ಅರಿವು ನಮಗಿದೆ ಎಂದು ಖಚಿತವಾಗುತ್ತದೆ.
4 : ದೇವರನ್ನು ಬಲ್ಲೆನೆಂದು ಹೇಳಿಕೊಳ್ಳುತ್ತಾ ಅವರ ಆಜ್ಞೆಗಳನ್ನು ಕೈಗೊಳ್ಳದೆ ಇರುವವನು ಸುಳ್ಳುಗಾರ ಮತ್ತು ಸತ್ಯವೆಂಬುದೇ ಅವನಲ್ಲಿ ಇರುವುದಿಲ್ಲ.
5 : ಆದರೆ ದೇವರ ವಾಕ್ಯವನ್ನು ಕೈಗೊಂಡು ನಡೆಯುವವನಲ್ಲಿ ಪ್ರೀತಿ ನಿಜಕ್ಕೂ ಸಿದ್ಧಿಗೆ ಬಂದಿರುತ್ತದೆ.
6 : ತಾನು ದೇವರಲ್ಲಿ ನೆಲೆಸಿದ್ದೇನೆಂದು ಹೇಳುವವನು ಕ್ರಿಸ್ತಯೇಸು ಜೀವಿಸಿದಂತೆಯೇ ಜೀವಿಸಬೇಕು. ಇದರಿಂದಲೇ ನಾವು ದೇವರಲ್ಲಿ ನೆಲೆಗೊಂಡಿದ್ದೇವೆಂದು ತಿಳಿದುಕೊಳ್ಳುತ್ತೇವೆ.
7 : ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಹೊಸ ಆಜ್ಞೆಯೇನೂ ಅಲ್ಲ, ಮೊದಲಿನಿಂದಲೂ ನೀವು ಪಡೆದಿರುವ ಹಳೆಯ ಆಜ್ಞೆಯೇ. ಈ ಆಜ್ಞೆಯೇ ನೀವು ಈಗಾಗಲೇ ಕೇಳಿರುವ ಸಂದೇಶ.
8 : ಆದರೂ ನಾನೀಗ ನಿಮಗೆ ಬರೆಯುತ್ತಿರುವುದು ಒಂದು ವಿಧದಲ್ಲಿ ಹೊಸ ಆಜ್ಞೆಯೇ ಸರಿ. ಅದರ ನೈಜಗುಣವು ಕ್ರಿಸ್ತಯೇಸುವಿನಲ್ಲಿ ಬೆಳಗಿದಂತೆ, ನಿಮ್ಮ ಜೀವನದಲ್ಲೂ ಬೆಳಗುತ್ತದೆ. ಏಕೆಂದರೆ, ಕತ್ತಲು ಕಳೆದುಹೋಗುತ್ತಿದೆ; ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 : “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಇನ್ನೂ ಕತ್ತಲಲ್ಲೇ ಇದ್ದಾನೆ.
10 : ತನ್ನ ಸಹೋದರನನ್ನು ಪ್ರೀತಿಸುವವನಾದರೋ ಬೆಳಕಿನಲ್ಲಿ ನೆಲೆಗೊಂಡಿರುತ್ತಾನೆ. ಎಡವಿ ಪಾಪದಲ್ಲಿ ಬೀಳಿಸುವಂಥದ್ದೇನೂ ಅವನಲ್ಲಿ ಇರದು.
11 : ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲಲ್ಲಿ ಇದ್ದಾನೆ; ಕತ್ತಲಲ್ಲೇ ನಡೆಯುತ್ತಾನೆ. ಕತ್ತಲು ಅವನನ್ನು ಕುರುಡಾಗಿಸಿರುವುದರಿಂದ ಎತ್ತ ಹೋಗುತ್ತಿದ್ದಾನೆಂದು ಅವನಿಗೇ ತಿಳಿಯದು.
12 : ಬರೆಯುತಿಹೆನು ಪ್ರಿಯಮಕ್ಕಳಿರಾ, ಇದನ್ನು ಏಕೆನೆ, ಕ್ರಿಸ್ತ ನಾಮದ ನಿಮಿತ್ತ ಕ್ಷಮಿಸಲಾಯಿತು ನಿಮ್ಮ ಪಾಪಗಳನ್ನು.
13 : ಬರೆಯುತ್ತಿಹೆನು ತಂದೆಗಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಆದಿಯಿಂದಿರುವಾತನನ್ನು. ಬರೆಯುತಿಹೆನು ಯುವಜನರಿರಾ, ಇದನ್ನು ಏಕೆನೆ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು.
14 : ಬರೆದಿಹೆನು ಮಕ್ಕಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಪರಮ ಪಿತನನ್ನು. ಬರೆದಿಹೆನು ಶಕ್ತಿಯುತ ಯುವಜನರಿರಾ, ಇದನ್ನು ಏಕೆನೆ, ನೆಲೆಗೊಳಿಸಿರುವಿರಿ ನಿಮ್ಮಲ್ಲಿ ದೈವವಾಕ್ಯವನ್ನು. ಮಾತ್ರವಲ್ಲ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು.
15 : ಲೋಕಕ್ಕೂ ಲೌಕಿಕವಾದವುಗಳಿಗೂ ನೀವು ಒಲಿಯಬಾರದು. ಈ ಲೋಕವನ್ನು ಒಲಿದರೆ ಪಿತನಲ್ಲಿ ನಿಮಗೆ ಒಲವಿಲ್ಲವೆಂದಾಯಿತು.
16 : ಲೋಕಸಂಬಂಧವಾದ ದೈಹಿಕ ದುರಿಚ್ಛೆ, ಕಣ್ಣಿನ ಕಾಮುಕತೆ, ಐಶ್ವರ್ಯದ ಅಹಂಭಾವ - ಇಂಥವು ಪಿತನಿಂದ ಬಂದುವಲ್ಲ, ಲೋಕದಿಂದಲೇ ಬಂದುವು.
17 : ಲೋಕವೂ ಅದರ ವ್ಯಾಮೋಹವೂ ಗತಿಸಿ ಹೋಗುವುದು. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಚಿರಂಜೀವಿಯಾಗಿ ಬಾಳುವನು. ಸತ್ಯದಿಂದ ಸುಳ್ಳು ಜನಿಸದು
18 : ನನ್ನ ಪ್ರಿಯ ಮಕ್ಕಳೇ, ಅಂತಿಮ ಕಾಲ ಸಮೀಪಿಸಿತು. ಕ್ರಿಸ್ತವಿರೋಧಿ ಬರುವನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತ ವಿರೋಧಿಗಳು ತಲೆದೋರಿದ್ದಾರೆ. ಇದರಿಂದ ಅಂತಿಮಕಾಲ ಸನ್ನಿಹಿತವಾಯಿತೆಂದು ನಮಗೆ ತಿಳಿದುಬರುತ್ತದೆ.
19 : ಈ ಕ್ರಿಸ್ತವಿರೋಧಿಗಳು ನಮ್ಮವರಾಗಿರಲಿಲ್ಲ. ಆದಕಾರಣ, ಅವರು ನಮ್ಮನ್ನು ತೊರೆದರು. ಅವರು ನಮ್ಮವರೇ ಆಗಿದ್ದರೆ, ನಮ್ಮೊಂದಿಗೇ ಇರುತ್ತಿದ್ದರು. ಆದರೆ ಅವರು ನಮ್ಮನ್ನು ತೊರೆದು ಹೋದರು. ಇದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.
20 : ನೀವಾದರೋ ಪರಿಶುದ್ಧವಾದವರಿಂದ ಅಭಿಷಿಕ್ತರಾಗಿದ್ದೀರಿ. ಸತ್ಯವನ್ನು ಅರಿತವರಾಗಿದ್ದೀರಿ.
21 : ನೀವು ಸತ್ಯವನ್ನು ಅರಿಯದವರೆಂದು ಭಾವಿಸಿ ನಾನು ಬರೆಯುತ್ತಿಲ್ಲ, ನೀವು ಸತ್ಯವನ್ನು ಅರಿತವರು; ಸತ್ಯದಿಂದ ಸುಳ್ಳು ಜನಿಸದೆಂಬುದನ್ನು ತಿಳಿದವರು. ಆದುದರಿಂದ ನಾನು ನಿಮಗೆ ಬರೆದಿದ್ದೇನೆ.
22 : ಅಸತ್ಯವಾದಿ ಎಂದರೆ ಯಾರು? ಯೇಸುವೇ ಕ್ರಿಸ್ತ ಎಂಬುದನ್ನು ಯಾರು ಅಲ್ಲಗಳೆಯುತ್ತಾನೋ ಅವನೇ ಅಸತ್ಯವಾದಿ; ಅವನೇ ಕ್ರಿಸ್ತವಿರೋಧಿ. ಅವನು ಪಿತನನ್ನು ಮತ್ತು ಪುತ್ರನನ್ನು ತಿರಸ್ಕರಿಸುತ್ತಾನೆ.
23 : ಪುತ್ರನನ್ನು ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ. ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ.
24 : ಮೊದಲಿನಿಂದಲೂ ನೀವು ಯಾವ ಸಂದೇಶವನ್ನು ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಸಲಿ. ಮೊದಲಿನಿಂದಲೂ ನೀವು ಕೇಳಿದ ಸಂದೇಶ ನಿಮ್ಮಲ್ಲಿ ನೆಲೆಸಿದರೆ ಪುತ್ರನಲ್ಲಿಯೂ ಪಿತನಲ್ಲಿಯೂ ನೀವು ನೆಲೆಸುತ್ತೀರಿ.
25 : ಕ್ರಿಸ್ತಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವ ಇದೇ
26 : ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ.
27 : ನೀವು ಕ್ರಿಸ್ತಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ. ಆ ಅಭಿಷೇಕವು ನಿಮ್ಮಲ್ಲಿ ನೆಲೆಸಿದೆ. ಆದ್ದರಿಂದ ಯಾರೂ ನಿಮಗೆ ಬೋಧಿಸುವ ಅವಶ್ಯಕತೆಯಿಲ್ಲ. ಆ ಅಭಿಷೇಕವೇ ನಿಮಗೆ ಎಲ್ಲವನ್ನೂ ಬೋಧಿಸುತ್ತಾ ಬರುತ್ತದೆ. ಈ ಬೋಧನೆ ಸತ್ಯವಾದುದು, ಮಿಥ್ಯವಾದುದಲ್ಲ. ಅದರ ಪ್ರಕಾರವೇ ಕ್ರಿಸ್ತಯೇಸುವಿನಲ್ಲಿ ನೆಲೆಸಿರಿ.
28 : ಹೌದು ಪ್ರಿಯ ಮಕ್ಕಳೇ, ಕ್ರಿಸ್ತಯೇಸು ಪ್ರತ್ಯಕ್ಷರಾಗುವಾಗ, ಅವರ ಪುನರಾಗಮನದ ಪ್ರಯುಕ್ತ ಅವರ ಮುಂದೆ ನಾವು ನಾಚಿಕೆ ಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಂಡಿರೋಣ.
29 : ಕ್ರಿಸ್ತಯೇಸು ಸತ್ಯಸ್ವರೂಪಿ ಎಂಬುದನ್ನು ನೀವು ಬಲ್ಲಿರಿ. ಎಂದೇ, ಸತ್ಯಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನೂ ಅವರಿಂದ ಜನಿಸಿದವನು ಎಂಬುದು ನಿಮಗೆ ವೇದ್ಯವಾಗಿರಬೇಕು.

· © 2017 kannadacatholicbible.org Privacy Policy