1 : ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ.
2 : ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿಹತ್ತಿದೆ.
3 : ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕು ಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಖರಿಸಿಟ್ಟುಕೊಂಡಿದ್ದೀರಿ.
4 : ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.
5 : ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ.
6 : ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.
7 : ಆದ್ದರಿಂದ ಸಹೋದರರೇ, ಪ್ರಭು ಪುನರಾಗಮಿಸುವವರೆಗೆ ತಾಳ್ಮೆಯಿಂದ ಇರಿ. ರೈತನನ್ನು ಗಮನಿಸಿರಿ: ತನ್ನ ಹೊಲದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸುವ ಅವನು ಮುಂಗಾರು ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾದಿರುತ್ತಾನೆ.
8 : ಹಾಗೆಯೇ, ನೀವೂ ಸಹ ತಾಳ್ಮೆಯಿಂದಿರಿ, ದೃಢಚಿತ್ತರಾಗಿರಿ. ಪ್ರಭುವಿನ ಪುನರಾಗಮನ ಸನ್ನಿಹಿತವಾಗಿದೆ.
9 : ಸಹೋದರರೇ, ದಂಡನಾತೀರ್ಪಿಗೆ ಗುರಿ ಆಗದಂತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಾಧೀಶನು ಬಾಗಿಲ ಬಳಿಯಲ್ಲೇ ನಿಂತಿದ್ದಾನೆ.
10 : ಸಹೋದರರೇ, ಸಂಕಷ್ಟಗಳನ್ನು ತಾಳ್ಮೆಯಿಂದ ಸಹಿಸಿದ್ದಕ್ಕೆ ನಿದರ್ಶನ ಬೇಕೇ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ.
11 : ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ಯೋಬನ ತಾಳ್ಮೆಯನ್ನು ಕುರಿತು ನೀವು ಕೇಳಿದ್ದೀರಿ. ಅಂತ್ಯದಲ್ಲಿ ಆತನಿಗೆ ಸರ್ವೇಶ್ವರ ದಯಪಾಲಿಸಿದ್ದನ್ನು ಬಲ್ಲಿರಿ. ದೇವರ ದಯೆ ಅನಂತ, ಅವರ ಅನುಕಂಪ ಅಪಾರ.
12 : ಮುಖ್ಯವಾಗಿ ಸಹೋದರರೇ, ಆಣೆಯಿಡಬೇಡಿ. ಪರಲೋಕದ ಮೇಲಾಗಲಿ, ಭೂಲೋಕದ ಮೇಲಾಗಲಿ, ಇನ್ನಾವುದರ ಮೇಲಾಗಲಿ ನೀವು ಆಣೆಯಿಡಬಾರದು. ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎನ್ನಿ. ಆಗ ನೀವು ದಂಡನಾತೀರ್ಪಿಗೆ ಗುರಿಯಾಗುವುದಿಲ್ಲ.
13 : ನಿಮ್ಮಲ್ಲಿ ಯಾರಾದರೂ ಸಂಕಟದಲ್ಲಿದ್ದರೆ ಅಂಥವನು ದೇವರಲ್ಲಿ ಪ್ರಾರ್ಥಿಸಲಿ. ಸಂತೋಷದಲ್ಲಿದ್ದರೆ ದೇವರಿಗೆ ಸ್ತುತಿಗಾನ ಹಾಡಲಿ.
14 : ನಿಮ್ಮಲ್ಲಿ ಯಾರಾದರೂ ಅಸ್ವಸ್ಥರಾಗಿದ್ದರೆ, ಅವನು ಸಭಾಪಾಲಕರನ್ನು ಕರೆಸಲಿ. ಅವರು ಅವನಿಗಾಗಿ ದೇವರನ್ನು ಪ್ರಾರ್ಥಿಸಿ ಪ್ರಭುವಿನ ಹೆಸರಿನಲ್ಲಿ ಅವನನ್ನು ಅಭ್ಯಂಗಿಸಲಿ.
15 : ಆಗ ವಿಶ್ವಾಸಭರಿತ ಪ್ರಾರ್ಥನೆ ರೋಗಿಯನ್ನು ಗುಣಪಡಿಸುತ್ತದೆ. ಹಾಸಿಗೆ ಹಿಡಿದ ರೋಗಿಯನ್ನು ಪ್ರಭು ಎಬ್ಬಿಸುತ್ತಾರೆ; ಅವನು ಪಾಪಮಾಡಿದವನಾಗಿದ್ದರೆ ಕ್ಷಮೆಯನ್ನು ಪಡೆಯುತ್ತಾನೆ.
16 : ಆದ್ದರಿಂದ ಒಬ್ಬರಿಗೊಬ್ಬರು ಪಾಪಗಳನ್ನು ಒಪ್ಪಿಕೊಳ್ಳಿರಿ. ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ಆಗ ನೀವು ಸ್ವಸ್ಥರಾಗುತ್ತೀರಿ.
17 : ಎಲೀಯನು ನಮ್ಮಂಥ ಸಾಧಾರಣ ಮನುಷ್ಯ. ಆದರೂ ಅವನು ಮಳೆಬಾರದಿರಲೆಂದು ಭಕ್ತಿಯಿಂದ ಪ್ರಾರ್ಥಿಸಿದ್ದರಿಂದ ಮೂರು ವರ್ಷ ಆರು ತಿಂಗಳವರೆಗೂ ಮಳೆ ಬೀಳಲಿಲ್ಲ.
18 : ಅನಂತರ, ಅವನು ಮತ್ತೆ ಮಳೆಗಾಗಿ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿಯಿತು. ಭೂಮಿ ಫಲಿಸಿತು.
19 : ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯದ ಮಾರ್ಗವನ್ನು ಬಿಟ್ಟು ತಪ್ಪಿಹೋದಾಗ ಇನ್ನೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ,
20 : ಇದನ್ನು ನೆನಪಿಗೆ ತಂದುಕೊಳ್ಳಿರಿ: ಪಾಪಿಯನ್ನು ದುರ್ಮಾರ್ಗದಿಂದ ಮರಳಿ ಸನ್ಮಾರ್ಗಕ್ಕೆ ತಂದವನು ತನ್ನ ಆತ್ಮವನ್ನು ನಿತ್ಯ ಮರಣದಿಂದ ತಪ್ಪಿಸಿ ತನ್ನ ಲೆಕ್ಕವಿಲ್ಲದ ಪಾಪಗಳಿಗೆ ಕ್ಷಮೆಯನ್ನು ಪಡೆಯುತ್ತಾನೆ.