1 : ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ? ನಿಮ್ಮ ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ?
2 : ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ.
3 : ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.
4 : ವಿಶ್ವಾಸದಲ್ಲಿ ವ್ಯಭಿಚಾರಿಗಳಂತೆ ಬಾಳುವವರೇ, ಲೋಕದೊಡನೆ ಗೆಳೆತನವೆಂದರೆ ದೇವರೊಡನೆ ಹಗೆತನವೆಂಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ.
5 : “ದೇವರು ನಮ್ಮಲ್ಲಿ ಇರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ” ಎಂಬ ಪವಿತ್ರಗ್ರಂಥದ ವಾಕ್ಯವು ಹುರುಳಿಲ್ಲದ್ದೆಂದು ಭಾವಿಸುವಿರಾ?
6 : ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎಂತಲೇ, “ದೇವರು ಗರ್ವಿಷ್ಠರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ,” ಎಂದು ಲಿಖಿತವಾಗಿದೆ.
7 : ಆದ್ದರಿಂದ ದೇವರಿಗೆ ಶರಣರಾಗಿ ಬಾಳಿ. ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿಂದ ಪಲಾಯನಗೈಯುವನು.
8 : ದೇವರ ಸವಿೂಪಕ್ಕೆ ಬನ್ನಿ, ಆಗ ಅವರು ನಿಮ್ಮ ಸವಿೂಪಕ್ಕೆ ಬರುವರು. ಪಾಪಾತ್ಮರೇ, ನಿಮ್ಮ ಕೈ ಶುದ್ಧವಾಗಿರಲಿ. ಎರಡು ಮನಸ್ಸಿನವರೇ, ನಿಮ್ಮ ಹೃದಯ ನಿರ್ಮಲವಾಗಿರಲಿ.
9 : ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ, ಕಣ್ಣೀರಿಟ್ಟು ಗೋಳಾಡಿರಿ. ನಗುವುದನ್ನು ಬಿಟ್ಟು ದುಃಖಿಸಿರಿ; ಸಂತೋಷವನ್ನು ಬಿಟ್ಟು ಶೋಕಿಸಿರಿ.
10 : ಪ್ರಭುವಿನ ಮುಂದೆ ನಮ್ರರಾಗಿರಿ. ಆಗ ಅವರು ನಿಮ್ಮನ್ನು ಉದ್ಧರಿಸುವರು.
11 : ಸಹೋದರರೇ, ಒಬ್ಬರನ್ನೊಬ್ಬರು ನಿಂದಿಸಬೇಡಿ. ಯಾರಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ಖಂಡಿಸಿದರೆ, ಅಂಥವನು ಧರ್ಮಶಾಸ್ತ್ರವನ್ನೇ ನಿಂದಿಸಿ ಖಂಡಿಸುತ್ತಾನೆ. ನೀನು ಧರ್ಮಶಾಸ್ತ್ರವನ್ನು ಖಂಡಿಸಿದರೆ, ನ್ಯಾಯಾಧಿಪತಿ ಎನಿಸಿಕೊಳ್ಳುವೆಯೇ ಹೊರತು ನೀನು ಅದನ್ನು ಅನುಸರಿಸಿ ನಡೆಯುವವನಾಗುವುದಿಲ್ಲ.
12 : ನ್ಯಾಯವಿಧಿಗಳನ್ನು ಕೊಟ್ಟವರೂ ನ್ಯಾಯಾಧಿಪತಿಯೂ ಒಬ್ಬರೇ; ಅವರೇ ಉದ್ಧಾರ ಮಾಡುವುದಕ್ಕೂ ವಿನಾಶಗೊಳಿಸುವುದಕ್ಕೂ ಶಕ್ತರು. ಹೀಗಿರುವಲ್ಲಿ, ನಿನ್ನ ನೆರೆಯವನಿಗೆ ತೀರ್ಪುಕೊಡಲು ನೀನು ಯಾರು?
ಕೊಚ್ಚಿಕೊಳ್ಳುವವನಿಗೆ ಎಚ್ಚರಿಕೆ !
13 : “ಇಂಥಿಂಥ ದಿನ ಇಂಥಿಂಥ ಪಟ್ಟಣಕ್ಕೆ ಹೋಗೋಣ. ಅಲ್ಲಿ ಒಂದು ವರ್ಷ ಇದ್ದು ವ್ಯಾಪಾರ ಮಾಡೋಣ; ಅತಿಯಾಗಿ ಲಾಭ ಸಂಪಾದಿಸೋಣ,” ಎಂದೆಲ್ಲಾ ಆಲೋಚಿಸುವವರೇ, ಈಗ ಕೇಳಿ: ನೀವು ಇಷ್ಟೆಲ್ಲಾ ಆಲೋಚಿಸಿದರೂ ನಾಳೆ ಏನಾಗುವುದೋ ನಿಮಗೇ ತಿಳಿಯದು.
14 : ನಿಮ್ಮ ಜೀವಮಾನ ಎಷ್ಟು ಮಾತ್ರದ್ದು? ಈಗ ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹೊಗೆಯಂತೆ ಅದು.
15 : ಆದ್ದರಿಂದ ನೀವು ಅಂಥ ಮಾತನ್ನು ಬಿಟ್ಟು, “ಪ್ರಭುವಿನ ಚಿತ್ತವಿದ್ದರೆ ನಾವು ಬದುಕಿರುತ್ತೇವೆ, ಇಂಥಿಂಥದ್ದನ್ನು ಮಾಡುತ್ತೇವೆ,” ಎಂದು ನೀವು ಹೇಳುವುದೇ ಸರಿ.
16 : ಆದರೆ ನೀವು ಅಹಂಭಾವದಿಂದ ಕೊಚ್ಚಿಕೊಳ್ಳುತ್ತೀರಿ. ಹಾಗೆ ಕೊಚ್ಚಿಕೊಳ್ಳುವುದು ಸರಿಯಲ್ಲ.
17 : ಒಬ್ಬನು ಒಳ್ಳೆಯದನ್ನು ಮಾಡಬೇಕೆಂದು ತಿಳಿದಿದ್ದೂ ಅದನ್ನು ಮಾಡದಿದ್ದರೆ ಅದು ಅವನಿಗೆ ಪಾಪವಾಗಿರುತ್ತದೆ.