1 : ಸಹೋದರರೇ, ಎಲ್ಲರೂ ಬೋಧಕರಾಗಲು ಆತುರಪಡಬೇಡಿ. ಬೋಧಕರಾದ ನಾವು ಇತರರಿಗಿಂತಲೂ ತೀವ್ರವಾದ ನ್ಯಾಯವಿಚಾರಣೆಗೆ ಗುರಿಯಾಗುತ್ತೇವೆ.
2 : ನಾವೆಲ್ಲರೂ ಎಷ್ಟೋ ವಿಷಯಗಳಲ್ಲಿ ತಪ್ಪು ಮಾಡುವುದುಂಟು. ತನ್ನ ಮಾತಿನಲ್ಲಿ ತಪ್ಪುಮಾಡದೆ ಪೂರ್ತಿಯಾಗಿ ತನ್ನನ್ನೇ ಸ್ವಾಧೀನದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ ಸಿದ್ಧಪುರುಷನೇ ಹೌದು.
3 : ಕುದುರೆಗಳನ್ನು ಗಮನಿಸಿರಿ. ಅವುಗಳ ಬಾಯಿಗೆ ಹಾಕುವ ಚಿಕ್ಕ ಕಡಿವಾಣದಿಂದ ನಮಗೆ ಇಷ್ಟ ಬಂದ ಕಡೆಗೆ ಅವುಗಳನ್ನು ನಡೆಸುತ್ತೇವೆ.
4 : ಅಂತೆಯೇ, ಹಡಗು ಎಷ್ಟೇ ದೊಡ್ಡದಿರಲಿ, ಎಂತಹ ಬಿರುಗಾಳಿಯ ಬಡಿತಕ್ಕೇ ಸಿಕ್ಕಿರಲಿ, ಕೇವಲ ಒಂದು ಚಿಕ್ಕ ಚುಕ್ಕಾಣಿಯಿಂದ ನಾವಿಕನು ತನಗೆ ಇಷ್ಟ ಬಂದ ಕಡೆಗೆ ಅದನ್ನು ತಿರುಗಿಸುತ್ತಾನೆ.
5 : ನಾಲಿಗೆಯೂ ಹಾಗೆಯೇ. ಇದು ಶರೀರದ ಸಣ್ಣ ಅಂಗವಾಗಿದ್ದರೂ ಬಡಾಯಿ ಕೊಚ್ಚುವುದು ಬಹಳ.
ಒಂದು ಸಣ್ಣ ಕಿಡಿಯು ದೊಡ್ಡ ಕಾಡನ್ನೇ ಸುಡಬಲ್ಲದು.
6 : ನಾಲಿಗೆಯು ಆ ಬೆಂಕಿಯ ಕಿಡಿಯಂತೆ. ಅದು ಅಧರ್ಮಲೋಕದ ಪ್ರತೀಕ. ಅಂಗಾಂಗಗಳ ನಡುವೆ ಇದ್ದು ಇಡೀ ಶರೀರವನ್ನು ಮಲಿನಗೊಳಿಸುತ್ತದೆ. ನರಕಾಗ್ನಿಯಿಂದ ಹೊತ್ತಿಕೊಂಡು ಅದು ಬಾಳಿನ ಚಕ್ರಕ್ಕೇ ಬೆಂಕಿಯನ್ನು ಹಚ್ಚುತ್ತದೆ.
7 : ಸಕಲ ಜಾತಿಯ ಪ್ರಾಣಿಪಕ್ಷಿಗಳನ್ನೂ ಹರಿದಾಡುವ ಜಂತುಗಳನ್ನೂ ಜಲಜೀವಿಗಳನ್ನೂ ಮಾನವ ಪಳಗಿಸಬಲ್ಲನು; ಪಳಗಿಸಿಯೂ ಇದ್ದಾನೆ.
8 : ಆದರೆ ನಾಲಿಗೆಯನ್ನಾದರೋ ಹತೋಟಿಗೆ ತರಲು ಯಾರಿಗೂ ಸಾಧ್ಯವಿಲ್ಲ. ಅದು ಸತತ ಕೇಡನ್ನುಂಟು ಮಾಡುವ ಕಿಡಿ; ಮೃತ್ಯುಮಾರಕ ವಿಷಕೊಂಡಿ.
9 : ಪ್ರಭುವನ್ನೂ ಪರಮ ಪಿತನನ್ನೂ ಸ್ತುತಿಸುವುದು ಅದೇ ನಾಲಿಗೆಯೇ; ದೇವಸ್ವರೂಪದಲ್ಲಿ ಸೃಷ್ಟಿಸಲಾದ ಮಾನವನನ್ನು ಶಪಿಸುವುದೂ ಅದೇ ನಾಲಿಗೆಯೇ.
10 : ಸ್ತುತಿ ಶಾಪಗಳೆರಡೂ ಒಂದೇ ಬಾಯಿಂದ ಹೊರಡುತ್ತವೆ. ಪ್ರಿಯ ಸಹೋದರರೇ, ಇದು ತರವಲ್ಲ.
11 : ಒಂದೇ ಬುಗ್ಗೆಯಿಂದ ಸಿಹಿನೀರು, ಸೌಳು ನೀರು-ಎರಡೂ ಬರುವುದುಂಟೇ?
12 : ಅಂಜೂರದ ಮರ ಓಲಿವ್ ಹಣ್ಣನ್ನು ಕೊಡುವುದುಂಟೇ? ದ್ರಾಕ್ಷಿಯ ಬಳ್ಳಿಯಲ್ಲಿ ಅಂಜೂರ ಸಿಕ್ಕೀತೇ? ಎಂದಿಗೂ ಇಲ್ಲ. ಅಂತೆಯೇ, ಸೌಳು ನೀರಿನ ಒರತೆಯಿಂದ ಸಿಹಿನೀರು ಬರುವುದಿಲ್ಲ.
ಜ್ಞಾನದ ಗುಣ ನಡತೆಯಲ್ಲಿ
13 : ನಿಮ್ಮಲ್ಲಿ ಯಾರಾದರೂ ಜ್ಞಾನಿಯೂ ವಿವೇಕಿಯೂ ಆದವನು ಇದ್ದಾನೋ? ಅಂಥವನು ಜ್ಞಾನದ ಲಕ್ಷಣವಾಗಿರುವ ವಿನಯಶೀಲತೆಯನ್ನು ತನ್ನ ನಡೆನುಡಿಯಲ್ಲಿ ತೋರ್ಪಡಿಸಲಿ.
14 : ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತುಂಬಿರುವಾಗ ಜ್ಞಾನಿಗಳೆಂದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡಬೇಡಿ.
15 : ಅಂಥ ಜ್ಞಾನ ದೇವರಿಂದ ಬಂದ ಜ್ಞಾನವಲ್ಲ; ಅದು ಪ್ರಾಪಂಚಿಕವಾದುದು. ಪ್ರಾಕೃತವಾದುದು, ಪೈಶಾಚಿಕವಾದುದು.
16 : ಮರ್ಮ ಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾವಿಧವಾದ ಅಕ್ರಮಗಳೂ ದುಶ್ಚಟಗಳೂ ಇರುತ್ತವೆ.
17 : ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯ ಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ.
18 : ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ.
ಲೋಕದೊಡನೆ ಗೆಳೆತನ - ದೇವರೊಡನೆ ಹಗೆತನ