1 : ನನ್ನ ಸಹೋದರರೇ, ಮಹಿಮಾನ್ವಿತ ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟಿರುವ ನೀವು ಪಕ್ಷಪಾತ ಮಾಡಲೇಬಾರದು.
2 : ಉದಾಹರಣೆಗೆ: ಇಬ್ಬರು ನಿಮ್ಮ ಪ್ರಾರ್ಥನಾಲಯಕ್ಕೆ ಬಂದರೆಂದು ಇಟ್ಟುಕೊಳ್ಳಿ. ಅವರಲ್ಲಿ ಒಬ್ಬನು ಚಿನ್ನದುಂಗುರವನ್ನು ತೊಟ್ಟು, ಸೊಗಸಾದ ಉಡುಪನ್ನು ಧರಿಸಿದವನು. ಮತ್ತೊಬ್ಬನು ಹರಕು ಬಟ್ಟೆಯನ್ನು ಉಟ್ಟ ಬಡವನು.
3 : ಆಗ, ನೀವು ಸೊಗಸಾದ ಉಡುಪನ್ನು ಧರಿಸಿದವನಿಗೆ ಗೌರವದಿಂದ, “ಬನ್ನಿ ಸ್ವಾವಿೂ ಬನ್ನಿ, ದಯವಿಟ್ಟು ಈ ಪೀಠವನ್ನು ಅಲಂಕರಿಸಿ,” ಎನ್ನುತ್ತೀರಿ. ಬಡವನಿಗೆ “ನೀನು ಅಲ್ಲಿಯೇ ನಿಂತುಕೋ, ಇಲ್ಲವೇ ಕೆಳಗೆ, ನನ್ನ ಕಾಲ ಬಳಿ ಕುಳಿತುಕೋ,” ಎನ್ನುತ್ತೀರಿ. ಹೀಗಿರಲು
4 : ನೀವು ನಿಮ್ಮಲ್ಲೇ ಭೇದಭಾವ ಮಾಡುತ್ತೀರಿ; ಅಲ್ಲದೆ ನೀವು ಮಾಡುವ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 : ನನ್ನ ಪ್ರಿಯ ಸಹೋದರರೇ, ಪ್ರಪಂಚದ ದೃಷ್ಟಿಗೆ ಬಡವರಾಗಿ ಕಾಣುವವರನ್ನು ವಿಶ್ವಾಸದಲ್ಲಿ ಸಿರಿವಂತರನ್ನಾಗಿಸಲು ದೇವರು ಆರಿಸಿಕೊಳ್ಳಲಿಲ್ಲವೇ? ತಮ್ಮನ್ನು ಪ್ರೀತಿಸುವವರು ಸ್ವರ್ಗಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು ದೇವರೇ ವಾಗ್ದಾನ ಮಾಡಿಲ್ಲವೇ?
6 : ಹೀಗಿದ್ದರೂ ನೀವು ಬಡವನನ್ನು ಅವಮಾನಕ್ಕೆ ಈಡುಮಾಡಿದಿರಿ. ನಿಮ್ಮನ್ನು ತುಳಿದು ಹಿಂಸಿಸುವವರು ಮತ್ತು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆಯುವವರು ಸಿರಿವಂತರೇ ಅಲ್ಲವೇ?
7 : ನೀವು ಯಾರಿಗೆ ಶರಣರಾಗಿದ್ದೀರೋ ಅವರ ಶ್ರೇಷ್ಠ ನಾಮವನ್ನು ದೂಷಿಸುವವರೂ ಸಿರಿವಂತರೇ ಅಲ್ಲವೇ?
8 : ‘ನಿನ್ನನ್ನು ನೀನು ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನು ಪ್ರೀತಿಸು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ಕೈಗೊಂಡು ನಡೆಯುತ್ತಿದ್ದರೆ ಅದು ಒಳ್ಳೆಯದು.
9 : ಅದನ್ನು ಬಿಟ್ಟು ಪಕ್ಷಪಾತ ಮಾಡಿದರೆ ನೀವು ಪಾಪ ಮಾಡುತ್ತೀರಿ ಮತ್ತು ಧರ್ಮಶಾಸ್ತ್ರ ನಿಮ್ಮನ್ನು ಅಪರಾಧಿಗಳೆಂದು ನಿರ್ಣಯಿಸುತ್ತದೆ.
10 : ಒಬ್ಬನು ಇಡೀ ಧರ್ಮಶಾಸ್ತ್ರವನ್ನೇ ಕೈಗೊಂಡು ಒಂದೇ ಒಂದು ನಿಯಮವನ್ನು ವಿೂರಿನಡೆದರೂ ಅವನು ಇಡೀ ಧರ್ಮಶಾಸ್ತ್ರವನ್ನೇ ವಿೂರಿ ನಡೆದಂತಾಗುತ್ತದೆ.
11 : ಏಕೆಂದರೆ, ‘ವ್ಯಭಿಚಾರ ಮಾಡಬೇಡ’ ಎಂದು ಹೇಳಿದ ದೇವರೇ, ‘ಕೊಲ್ಲಬೇಡ’ ಎಂದೂ ಹೇಳಿದ್ದಾರೆ. ನೀನು ವ್ಯಭಿಚಾರ ಮಾಡದಿದ್ದರೂ ಕೊಲೆ ಮಾಡುವವನಾದರೆ ಧರ್ಮಶಾಸ್ತ್ರವನ್ನೇ ವಿೂರಿದಂತಾಗುತ್ತದೆ.
12 : ವಿಮೋಚನೆಯನ್ನೀಯುವ ಧರ್ಮಶಾಸ್ತ್ರದ ನ್ಯಾಯತೀರ್ಪಿಗೆ ಗುರಿಯಾಗುವಿರಿ ಎಂದು ತಿಳಿದು ನೀವು ನಡೆಯಲ್ಲೂ ನುಡಿಯಲ್ಲೂ ಯೋಗ್ಯರಾಗಿ ಬಾಳಿ.
13 : ದಯೆತೋರದವನಿಗೆ, ದಯೆದಾಕ್ಷಿಣ್ಯವಿಲ್ಲದ ನ್ಯಾಯತೀರ್ಪು ಕಾದಿರುತ್ತದೆ. ನ್ಯಾಯಕ್ಕೂ ಮಿಗಿಲಾಗಿ ವಿಜೃಂಭಿಸುವುದು ದಯೆಯೇ.
14 : ಸಹೋದರರೇ, ಒಬ್ಬನು ತನಗೆ ವಿಶ್ವಾಸ ಇದೆಯೆಂದು ಕೊಚ್ಚಿಕೊಂಡು ಅದನ್ನು ಕಾರ್ಯತಃ ವ್ಯಕ್ತಪಡಿಸದಿದ್ದರೆ ಅದರಿಂದ ಪ್ರಯೋಜನ ಏನು? ಅಂಥ ವಿಶ್ವಾಸ ಅವನನ್ನು ಉದ್ಧಾರ ಮಾಡಬಲ್ಲುದೇ?
15 : ಒಂದು ವೇಳೆ ಒಬ್ಬ ಸಹೋದರನಾಗಲಿ, ಸಹೋದರಿಯಾಗಲಿ ದಿನನಿತ್ಯ ಊಟಬಟ್ಟೆಗಿಲ್ಲದೆ ಇರುವಾಗ, ನಿಮ್ಮಲ್ಲಿ ಯಾರಾದರು ಅವರಿಗೆ ಅಗತ್ಯವಾದುದನ್ನು ನೀಡದೆ,
16 : ‘ಹೋಗು, ಸುಖವಾಗಿ ಬಾಳು, ಚಳಿ ಕಾಯಿಸಿಕೊ, ಹೊಟ್ಟೆ ತುಂಬಾ ತಿನ್ನು,’ ಎಂದು ಬರೀ ಬಾಯಿಮಾತಿನಲ್ಲಿ ಉಪಚರಿಸಿದರೆ ಅದರಿಂದಾದ ಪ್ರಯೋಜನವೇನು?
17 : ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತ ವಿಶ್ವಾಸವೇ ಸರಿ.
18 : ಒಬ್ಬನು, “ನಿನ್ನಲ್ಲಿ ವಿಶ್ವಾಸವಿದೆ, ನನ್ನಲ್ಲಿ ಸತ್ಕ್ರಿಯೆಗಳಿವೆ,” ಎನ್ನಬಹುದು. ಅಂಥವನಿಗೆ, “ಸತ್ಕ್ರಿಯೆಗಳಿಲ್ಲದ ನಿನ್ನ ವಿಶ್ವಾಸವನ್ನು ನನಗೆ ತೋರಿಸು; ನನ್ನ ಸತ್ಕಾರ್ಯಗಳ ಮೂಲಕ ನನ್ನ ವಿಶ್ವಾಸವನ್ನು ನಿನಗೆ ವ್ಯಕ್ತಪಡಿಸುತ್ತೇನೆ,” ಎಂದು ಉತ್ತರಿಸಬಹುದು.
19 : ದೇವರು ಒಬ್ಬರೇ ಎಂದು ನೀವು ನಂಬುತ್ತೀರಿ. ಈ ನಂಬಿಕೆ ಒಳ್ಳೆಯದೇ. ಆದರೆ ದೆವ್ವಗಳೂ ನಂಬುತ್ತವೆ; ಹೆದರಿ ನಡುಗುತ್ತವೆ.
20 : ಮತಿಹೀನನೇ, ಸತ್ಕ್ರಿಯೆಗಳಿಲ್ಲದ ವಿಶ್ವಾಸ ಗೊಡ್ಡು ವಿಶ್ವಾಸ ಎಂಬುದಕ್ಕೆ ದೃಷ್ಟಾಂತ ಬೇಕೇ?
21 : ನಮ್ಮ ಪಿತಾಮಹ ಅಬ್ರಹಾಮನು ದೇವರೊಂದಿಗೆ ಸತ್ಸಂಬಂಧವನ್ನು ಪಡೆದುದ್ದಾದರೂ ಹೇಗೆ? ತನ್ನ ಮಗ ಇಸಾಕನನ್ನು ದೇವರಿಗೆ ಬಲಿಯಾಗಿ ಸಮರ್ಪಿಸಿದ ಸತ್ಕ್ರಿಯೆಯಿಂದಲ್ಲವೇ? ವಿಶ್ವಾಸವು ಸತ್ಕ್ರಿಯೆಗಳಿಂದ ಸಚೇತನಗೊಂಡಿತು.
22 : ಆತನ ಸತ್ಕ್ರಿಯೆಗಳಿಂದಲೇ ವಿಶ್ವಾಸವು ಸಿದ್ಧಿಗೆ ಬಂದಿತು ಎಂಬುದನ್ನು ನಾವು ನೋಡುತ್ತೇವೆ.
23 : ಆದುದರಿಂದಲೇ, “ಅಬ್ರಹಾಮನು ದೇವರಲ್ಲಿ ವಿಶ್ವಾಸ ಇಟ್ಟನು. ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ಮಾತು ನೆರವೇರಿತು. ಅಬ್ರಹಾಮನು ದೇವರ ಮಿತ್ರನೆನಿಸಿಕೊಂಡನು.
24 : ಮಾನವನು ದೇವರೊಡನೆ ಸತ್ಸಂಬಂಧವನ್ನು ಪಡೆಯುವುದು ವಿಶ್ವಾಸದಿಂದ ಮಾತ್ರವಲ್ಲ, ವಿಶ್ವಾಸವು ಸತ್ಕ್ರಿಯೆಗಳೊಡನೆ ಬೆರೆತಾಗ ಮಾತ್ರ ಎಂಬುದು ನಿಮಗೆ ತಿಳಿದಿರಲಿ.
25 : ಇದೇ ರೀತಿಯಾಗಿ ರಹಾಬಳೆಂಬ ಜಾರಿಣಿ ಗೂಢಚಾರರನ್ನು ತನ್ನ ಮನೆಗೆ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಸಾಗಕಳುಹಿಸಿದಳು. ಈ ಸತ್ಕ್ರಿಯೆಯಿಂದಲೇ ದೇವರೊಡನೆ ನೀತಿಯುತ ಸಂಬಂಧವನ್ನು ಪಡೆದಳು.
26 : ಆತ್ಮವಿಲ್ಲದ ದೇಹವು ಸತ್ತದ್ದು ಸತ್ಕ್ರಿಯೆಗಳಿಲ್ಲದ ವಿಶ್ವಾಸವೂ ಸತ್ತದ್ದೇ ಸರಿ.