1 : ಜಗದಾದ್ಯಂತ ಚದರಿರುವ ಇಸ್ರಯೇಲಿನ ಹನ್ನೆರಡು ಕುಲದವರಿಗೆ - ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬನ ಶುಭಾಶಯಗಳು.
2 : ನನ್ನ ಪ್ರಿಯ ಸಹೋದರರೇ, ನಿಮಗೆ ವಿವಿಧ ಸಂಕಟ ಶೋಧನೆಗಳು ಬಂದೊದಗಿದಾಗ ಅವುಗಳನ್ನು ಸಂತೋಷದಿಂದ ಸಹಿಸಿಕೊಳ್ಳಿ.
3 : ಇವು ನಿಮ್ಮ ವಿಶ್ವಾಸವನ್ನು ಒರೆಗೆ ಹಚ್ಚಿ ನಿಮ್ಮನ್ನು ದೃಢಪಡಿಸುತ್ತೇವೆ; ನಿಮ್ಮನ್ನು ಸಹನಶೀಲರನ್ನಾಗಿ ಮಾಡುತ್ತವೆ.
4 : ಈ ಸಹನೆ ಸಿದ್ಧಿಗೆ ಬಂದಾಗ ನೀವು ಯಾವ ಕುಂದುಕೊರತೆ ಇಲ್ಲದೆ, ಪರಿಪೂರ್ಣರೂ ಸರ್ವಗುಣ ಸಂಪನ್ನರೂ ಆಗುತ್ತೀರಿ.
5 : ನಿಮ್ಮಲ್ಲಿ ಯಾರಿಗಾದರೂ ಜ್ಞಾನದ ಕೊರತೆಯಿದ್ದರೆ ಅಂಥವನು ದೇವರಲ್ಲಿ ಬೇಡಿಕೊಳ್ಳಲಿ. ಯಾರನ್ನೂ ತಿರಸ್ಕರಿಸದೆ ಎಲ್ಲರಿಗೂ ಯಥೇಚ್ಛವಾಗಿ ನೀಡುವ ದೇವರು, ಅವನಿಗೆ ಜ್ಞಾನವನ್ನು ದಯಪಾಲಿಸುತ್ತಾರೆ.
6 : ಆದರೆ ಬೇಡುವವನು ವಿಶ್ವಾಸದಿಂದ ಬೇಡಲಿ. ಸಂಶಯಕ್ಕೆ ಎಡೆಕೊಡದಿರಲಿ. ಸಂಶಯಕ್ಕೀಡಾಗುವವನ ಪರಿಸ್ಥಿತಿಯಾದರೋ ಬಿರುಗಾಳಿಯ ಬಡಿತಕ್ಕೆ ಸಿಕ್ಕಿದ ಸಮುದ್ರದ ಅಲೆಯಂತೆ ತುಯ್ದಾಡುತ್ತಿರುತ್ತದೆ.
7 : ಅಂಥವನು ಚಂಚಲಚಿತ್ತನು. ಆಚಾರವಿಚಾರಗಳಲ್ಲಿ ಅಸ್ಥಿರ ಮನಸ್ಸುಳ್ಳವನು.
8 : ಆದ್ದರಿಂದ ಅವನು ಪ್ರಭುವಿನಿಂದ ಏನನ್ನಾದರೂ ಪಡೆಯುತ್ತೇನೆಂದು ಭಾವಿಸದಿರಲಿ.
9 : ದೀನದಲಿತನಾದ ಸಹೋದರನು, ದೇವರು ತನ್ನನ್ನು ಉನ್ನತ ಸ್ಥಿತಿಗೆ ಏರಿಸಿದಾಗ ಅನಂದಿಸಲಿ.
10 : ಅಂತೆಯೇ ಧನಿಕನಾದ ಸಹೋದರನು, ದೇವರು ತನ್ನನ್ನು ದೀನಸ್ಥಿತಿಗೆ ಇಳಿಸಿದಾಗ ಆನಂದಿಸಲಿ.
11 : ಏಕೆಂದರೆ, ಧನಿಕರು ಹುಲ್ಲಿನ ಹೂವಿನಂತೆ ಗತಿಸಿ ಹೋಗುತ್ತಾರೆ. ಸೂರ್ಯನ ಸುಡು ಬಿಸಿಲಿಗೆ ಹುಲ್ಲು ಒಣಗಿಹೋಗುತ್ತದೆ, ಅದರ ಹೂವು ಉದುರಿ ಹೋಗುವುದು, ಅದರ ಅಂದ ಚೆಂದವೂ ಹಾಳಾಗಿ ಹೋಗುತ್ತದೆ. ಅಂತೆಯೇ ಧನಿಕನು ತನ್ನ ವ್ಯವಹಾರಗಳಲ್ಲಿಯೇ ಕುಂದಿ ಹೋಗುತ್ತಾನೆ.
12 : ಸಂಕಟ ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನೇ ಧನ್ಯನು. ಅವನು ಪರಿಶೋಧನೆಯಲ್ಲಿ ಯಶಸ್ವಿಯಾದ ಮೇಲೆ ಸಜ್ಜೀವವೆಂಬ ಜಯಮಾಲೆಯನ್ನು ಪಡೆಯುತ್ತಾನೆ. ದೇವರು ತಮ್ಮನ್ನು ಪ್ರೀತಿಸುವವರಿಗೆ ಇದನ್ನು ಕಾದಿರಿಸಿರುತ್ತಾರೆ.
13 : ಪಾಪಪ್ರಲೋಭನೆಗೆ ಒಳಗಾದಾಗ, “ಈ ಪ್ರಲೋಭನೆಗಳು ದೇವರಿಂದಲೇ ಬಂದವು,” ಎಂದು ಯಾರೂ ಹೇಳದಿರಲಿ. ಏಕೆಂದರೆ, ದೇವರು ಸ್ವತಃ ಪಾಪಪ್ರಲೋಭನೆಗೆ ಗುರಿಯಾಗುವುದಿಲ್ಲ ಮತ್ತು ಯಾರನ್ನೂ ಅಂಥ ಪ್ರಲೋಭನೆಗೆ ಗುರಿಪಡಿಸುವುದಿಲ್ಲ.
14 : ಮಾನವನು ಪ್ರಲೋಭನೆಗೆ ಒಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ.
15 : ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ.
16 : ಪ್ರಿಯ ಸಹೋದರರೇ, ಮೋಸಹೋಗಬೇಡಿ.
17 : ಎಲ್ಲಾ ಯೋಗ್ಯ ವರಗಳೂ ಉತ್ತಮಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ.
18 : ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.
19 : ಸಹೋದರರೇ, ಇದನ್ನು ನೆನಪಿನಲ್ಲಿಡಿ; ನಿಮ್ಮಲ್ಲಿ ಪ್ರತಿಯೊಬ್ಬನು ಆಲಿಸುವುದರಲ್ಲಿ ಚುರುಕಾಗಿ, ಮಾತನಾಡುವುದರಲ್ಲಿ ದುಡುಕದೆ, ಸಿಟ್ಟುಗೊಳ್ಳುವುದರಲ್ಲಿ ಸಾವಧಾನವಾಗಿ ಇರಲಿ.
20 : ಮಾನವನ ಕೋಪ ದೇವನೀತಿಗೆ ಧಕ್ಕೆ ! ಆದುದರಿಂದ ನಿಮ್ಮಲ್ಲಿರುವ ಎಲ್ಲಾ ನೀಚತನವನ್ನು ಮತ್ತು ಬೆಳೆಯುತ್ತಿರುವ ದುಷ್ಟತನವನ್ನು ಕಿತ್ತೊಗೆಯಿರಿ.
21 : ನಿಮ್ಮ ಹೃದಯದಲ್ಲಿ ದೇವರು ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರ ಮಾಡಬಲ್ಲುದು.
22 : ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ.
23 : ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿ,
24 : ಮರುಕ್ಷಣವೇ ತಾನು ಹೇಗಿದ್ದೇನೆಂದು ಮರೆತುಬಿಡುವವನಿಗೆ ಸಮಾನನು.
25 : ಆದರೆ ನಮಗೆ ವಿಮೋಚನೆಯನ್ನು ತರುವ ಸರ್ವೋತ್ತಮ ಧರ್ಮಶಾಸ್ತ್ರವನ್ನು ಲಕ್ಷ್ಯವಿಟ್ಟು ನೋಡಿ ಅದರಲ್ಲೇ ಧ್ಯಾನಾಸಕ್ತನಾಗಿರುವವನು ಅದನ್ನು ಮರೆಯುವುದಿಲ್ಲ. ಅವನು ಕೇಳುವವನು ಮಾತ್ರ ಆಗಿರದೆ, ವಾಕ್ಯದ ಪ್ರಕಾರ ನಡೆಯುವವನೂ ಆಗಿರುತ್ತಾನೆ. ಇಂಥವನು ಭಾಗ್ಯವಂತನು !
26 : ತಾನು ಸದ್ಭಕ್ತನೆಂದು ಭಾವಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದಿದ್ದರೆ, ಅಂಥವನ ಭಕ್ತಿ ವ್ಯರ್ಥ. ಅವನು ತನ್ನನ್ನೇ ವಂಚಿಸಿಕೊಳ್ಳುತ್ತಾನಷ್ಟೆ.
27 : ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು - ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.