1 : ಹಳೆಯ ಒಡಂಬಡಿಕೆಯಲ್ಲಿ ದೇವಾರಾಧನೆಗೆ ವಿಧಿನಿಯಮಗಳಿದ್ದವು; ಮಾನವನಿರ್ಮಿತ ದೇವಾಲಯವೂ ಇತ್ತು.
2 : ಅಂದರೆ, ಒಂದು ಗುಡಾರವನ್ನು ಕಟ್ಟುತ್ತಿದ್ದರು. ಅದರಲ್ಲಿ ಎರಡು ಭಾಗಗಳು ಇದ್ದವು. ಮೊದಲನೆಯ ಭಾಗಕ್ಕೆ ಪವಿತ್ರ ಸ್ಥಳ ಎಂದು ಹೆಸರು. ಅಲ್ಲಿ, ಒಂದು ದೀಪಸ್ತಂಭ ಮತ್ತು ಒಂದು ಮೇಜು ಇದ್ದವು. ಆ ಮೇಜಿನ ಮೇಲೆ ಅರ್ಪಣೆಯ ನೈವೇದ್ಯ ರೊಟ್ಟಿಗಳನ್ನು ಇಡುತ್ತಿದ್ದರು
3 : ಅದರ ಎರಡನೆಯ ಭಾಗಕ್ಕೆ ಗರ್ಭಗುಡಿ ಎಂದು ಹೆಸರು. ಈ ಎರಡು ಭಾಗಗಳ ನಡುವೆ ತೆರೆಯಿತ್ತು. ಗರ್ಭಗುಡಿಯನ್ನು ಈ ತೆರೆ ಮರೆಮಾಡಿತ್ತು.
4 : ಗರ್ಭಗುಡಿಯಲ್ಲಿ ಚಿನ್ನದ ಧೂಪಾರತಿ ಮತ್ತು ಚಿನ್ನದ ತಗಡನ್ನು ಸುತ್ತಲೂ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇದ್ದವು. ಈ ಮಂಜೂಷದಲ್ಲಿ ಮನ್ನವನ್ನು ಇಟ್ಟಿದ್ದ ಚಿನ್ನದ ಪಾತ್ರೆ, ಆರೋನನ ಚಿಗುರಿದ ಕೋಲು ಮತ್ತು ಒಡಂಬಡಿಕೆಯ ಶಿಲಾಶಾಸನಗಳು ಇದ್ದವು.
5 : ಮಂಜೂಷದ ಮೇಲೆ ದೇವರ ಸಾನ್ನಿಧ್ಯವನ್ನು ಸೂಚಿಸುವ ಕೆರೂಬಿ ಎಂಬ ದೂತರ ಆಕೃತಿಗಳಿದ್ದವು. ಅವುಗಳ ರೆಕ್ಕೆಗಳು ಕೃಪಾಸನವನ್ನು ಆವರಿಸಿಕೊಂಡಿದ್ದವು. ಸದ್ಯಕ್ಕೆ ಇವನ್ನು ಸವಿಸ್ತಾರವಾಗಿ ವಿವರಿಸಲು ಸಾಧ್ಯವಿಲ್ಲ.
6 : ಹೀಗೆ ಇದೆಲ್ಲಾ ವ್ಯವಸ್ಥಿತವಾಗಿರಲು, ಯಾಜಕರು ಮೊದಲನೆಯ ಭಾಗವಾದ ಪವಿತ್ರ ಸ್ಥಳವನ್ನು ಮಾತ್ರ ಪ್ರವೇಶಿಸಿ, ಅಲ್ಲಿ ದೇವಾರಾಧನೆಯ ವಿಧಿಗಳನ್ನು ನಿರಂತರವಾಗಿ ನೆರವೇರಿಸುತ್ತಿದ್ದರು.
7 : ಆದರೆ ಎರಡನೆಯ ಭಾಗವಾದ ಗರ್ಭಗುಡಿಯನ್ನು ಪ್ರಧಾನ ಯಾಜಕನೊಬ್ಬನೇ ಪ್ರವೇಶಿಸುತ್ತಿದ್ದನು; ಅದೂ ವರ್ಷಕ್ಕೆ ಒಮ್ಮೆ ಮಾತ್ರ. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಅವನು ಅಲ್ಲಿಗೆ ಹೋಗುವಂತಿರಲಿಲ್ಲ. ಆ ರಕ್ತವನ್ನು ತನಗಾಗಿಯೂ ಜನರು ತಿಳಿಯದೆ ಮಾಡಿದ ಅಪರಾಧಗಳಿಗಾಗಿಯೂ ಅರ್ಪಿಸಬೇಕಾಗಿತ್ತು.
8 : ಈ ವ್ಯವಸ್ಥೆಯಲ್ಲಿ ಗುಡಾರದ ಮೊದಲನೆಯ ಭಾಗ ಇರುವ ತನಕ ಗರ್ಭಗುಡಿಯನ್ನು ಪ್ರವೇಶಿಸುವ ಮಾರ್ಗ ತೆರೆದಿರುವುದಿಲ್ಲ, ಎಂಬುದನ್ನು ಪವಿತ್ರಾತ್ಮ ಸಾಂಕೇತಿಕವಾಗಿ ತಿಳಿಯಪಡಿಸುತ್ತಾರೆ.
9 : ಇವೆಲ್ಲವೂ ಈ ಕಾಲದ ಪರಿಸ್ಥಿತಿಗೆ ಒಂದು ನಿದರ್ಶನವಾಗಿವೆ. ಈ ವ್ಯವಸ್ಥೆಯ ಪ್ರಕಾರ ಸಮರ್ಪಣೆಯಾಗುತ್ತಿದ್ದ ಕಾಣಿಕೆಗಳೂ ಬಲಿಗಳೂ ಆರಾಧಕನ ಅಂತರಂಗವನ್ನು ಪೂರ್ಣವಾಗಿ ಶುದ್ಧಗೊಳಿಸಲು ಅಸಮರ್ಥವಾಗಿದ್ದವು.
10 : ಏಕೆಂದರೆ, ಈ ಕಾಣಿಕೆಗಳು ಮತ್ತು ಬಲಿಗಳು ಕೇವಲ ಲೌಕಿಕವಾದುವು. ಅನ್ನ ಪಾನೀಯಗಳಿಂದಲೂ ನಾನಾ ತರದ ಸ್ನಾನವಿಧಿಗಳಿಂದಲೂ ಕೂಡಿದ ಇವು ಸುಧಾರಣೆಯ ಕಾಲದವರೆಗೆ ಮಾತ್ರ ಇರಬೇಕಾದುವು.
11 : ಆದರೆ ಕ್ರಿಸ್ತಯೇಸು ಈಗಾಗಲೇ ಪ್ರಧಾನ ಯಾಜಕರಾಗಿ ಬಂದಿದ್ದಾರೆ. ಅವರು ಅನುಗ್ರಹಿಸುವ ಸತ್ಫಲಗಳು ಈಗಾಗಲೇ ನಮಗೆ ದೊರೆತಿವೆ. ಅವರು ಸೇವೆ ಸಲ್ಲಿಸುತ್ತಿರುವ ಗುಡಾರವು ಹಿಂದಿನವುಗಳಿಗಿಂತ ಶ್ರೇಷ್ಠವಾದುದು ಮತ್ತು ಪರಿಪೂರ್ಣವಾದುದು. ಇದು ಕೈಯಿಂದ ಕಟ್ಟಿದ್ದಲ್ಲ, ಇಹಲೋಕದ ಸೃಷ್ಟಿಗೆ ಸಂಬಂಧಪಟ್ಟಿದ್ದಲ್ಲ.
12 : ಇಂಥ ಗರ್ಭಗುಡಿಯನ್ನು ಅವರು ಒಮ್ಮೆಗೇ ಶಾಶ್ವತವಾಗಿ ಪ್ರವೇಶಿಸಿದ್ದಾರೆ. ಹೋತಗಳ ಅಥವಾ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅವರು ಪ್ರವೇಶಿಸಲಿಲ್ಲ. ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ಪ್ರವೇಶಿಸಿ ನಮಗೆ ಶಾಶ್ವತ ಜೀವೋದ್ಧಾರವು ದೊರಕುವಂತೆ ಮಾಡಿದ್ದಾರೆ.
13 : ಹೋತಹೋರಿಗಳ ರಕ್ತವನ್ನೂ ಯಜ್ಞಪಶುಗಳ ಬೂದಿಯನ್ನೂ ಮಲಿನರಾದವರ ಮೇಲೆ ಚಿಮುಕಿಸುವುದರ ಮೂಲಕ ಶಾರೀರಿಕ ಮೈಲಿಗೆಯನ್ನು ಹೋಗಲಾಡಿಸಿ ಅವರನ್ನು ಪರಿಶುದ್ಧಗೊಳಿಸಬಹುದಾದರೆ,
14 : ಯೇಸುವಿನ ರಕ್ತವು ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಪರಿಶುದ್ಧಗೊಳಿಸುತ್ತದಲ್ಲವೇ? ನಿತ್ಯಾತ್ಮದ ಮೂಲಕ ಅವರು ತಮ್ಮನ್ನೇ ನಿಷ್ಕಳಂಕ ಬಲಿಯಾಗಿ ದೇವರಿಗೆ ಸಮರ್ಪಿಸಿದ್ದಾರೆ; ನಾವು ಜೀವಸ್ವರೂಪರಾದ ದೇವರನ್ನು ಆರಾಧಿಸುವಂತೆ, ಜಡ ಕರ್ಮಗಳಿಂದ ನಮ್ಮನ್ನು ಬಿಡುಗಡೆಮಾಡಿ ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸುತ್ತಾರೆ.
15 : ಈ ಕಾರಣ, ಯೇಸು ಹೊಸ ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ ಹೊಂದಿದವರು ದೇವರು ವಾಗ್ದಾನ ಮಾಡಿದ ಅಮರ ಸೌಭಾಗ್ಯವನ್ನು ಬಾಧ್ಯವಾಗಿ ಪಡೆಯುವಂತೆ ಈ ಒಡಂಬಡಿಕೆಯನ್ನು ಏರ್ಪಡಿಸಲಾಯಿತು. ಇದು ಯೇಸುವಿನ ಮರಣದ ಮೂಲಕವೇ ಉಂಟಾಯಿತು. ಈ ಮರಣವು ಹಳೆಯ ಒಡಂಬಡಿಕೆಯನ್ನು ವಿೂರಿ ಮಾಡಿದ ಅಪರಾಧಗಳನ್ನೂ ಪರಿಹರಿಸುತ್ತದೆ.
16 : ಒಂದು ಮರಣ ಶಾಸನವು ಪರಿಣಾಮಕಾರಿಯಾಗಬೇಕಾದರೆ, ಅದನ್ನು ಬರೆದಾತನು ಸತ್ತಿದ್ದಾನೆಂಬುದು ಖಚಿತವಾಗಬೇಕು;
17 : ಅವನು ಸತ್ತನಂತರ ಮಾತ್ರ ಆ ಶಾಸನವು ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಅವನು ಜೀವದಿಂದ ಇರುವಾಗ ಅಲ್ಲ.
18 : ಆದ್ದರಿಂದಲೇ, ಮೊದಲನೆಯ ಒಡಂಬಡಿಕೆ ಕೂಡ ರಕ್ತಧಾರೆ ಇಲ್ಲದೆ ಪ್ರತಿಷ್ಠಾಪನೆಗೊಳ್ಳಲಿಲ್ಲ.
19 : ಮೋಶೆ ಧರ್ಮಶಾಸ್ತ್ರದ ಆಜ್ಞೆಗಳನ್ನೆಲ್ಲ ಸಾರಿ ಹೇಳಿ, ಹೋತ ಹಾಗೂ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅದಕ್ಕೆ ನೀರು ಬೆರೆಸಿದನು; ಅದನ್ನು ಕೆಂಪು ಉಣ್ಣೆಯ ನೂಲಿನಿಂದ ಕಟ್ಟಿದ ಹಿಸ್ಸೋಪ್ ಕಡ್ಡಿಗಳಿಂದ ಪವಿತ್ರಗ್ರಂಥದ ಮೇಲೂ ಜನರ ಮೇಲೂ ಚಿಮುಕಿಸಿದನು.
20 : ಹೀಗೆ ಚಿಮುಕಿಸುವಾಗ, “ದೇವರು ನಿಮಗೆ ಆಜ್ಞಾಪಿಸಿರುವ ಒಡಂಬಡಿಕೆಯ ರಕ್ತವಿದು,” ಎಂದು ಹೇಳಿದನು.
21 : ಅಂತೆಯೇ ಗುಡಾರದ ಮೇಲೂ ದೇವಾರಾಧನೆಗೆ ಬೇಕಾದ ಎಲ್ಲಾ ಪೂಜಾಸಾಮಗ್ರಿಗಳ ಮೇಲೂ ಆ ರಕ್ತವನ್ನು ಚಿಮುಕಿಸಿದನು.
22 : ಎಂದೇ, ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲವೂ ರಕ್ತದಿಂದಲೇ ಶುದ್ಧೀಕರಣ ಹೊಂದುತ್ತವೆ. ರಕ್ತಧಾರೆ ಇಲ್ಲದೆ ಪಾಪಪರಿಹಾರವಿಲ್ಲ.
23 : ಸ್ವರ್ಗೀಯವಾದವುಗಳ ಛಾಯೆಯಂತೆ ಇರುವ ಈ ವಸ್ತುಗಳೇ ಈ ಪ್ರಕಾರ ಶುದ್ಧೀಕರಣ ಹೊಂದಬೇಕಾಗಿತ್ತಾದರೆ, ನಿಜವಾಗಿ ಸ್ವರ್ಗೀಯವಾದವುಗಳ ಶುದ್ದೀಕರಣಕ್ಕೆ ಮತ್ತಷ್ಟು ಶ್ರೇಷ್ಠವಾದ ಬಲಿಗಳು ಬೇಕಾಗಿತ್ತು.
24 : ಕ್ರಿಸ್ತಯೇಸು ಪ್ರವೇಶಿಸಿದ್ದು ನೈಜದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನ್ನಲ್ಲ, ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸ್ವರ್ಗವನ್ನೇ ಅವರು ಪ್ರವೇಶಿಸಿದರು.
25 : ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ.
26 : ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣ ಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು; ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ, ಪಾಪ ನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು.
27 : ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು.
28 : ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತಯೇಸು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು; ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಸಿಕೊಂಡಿರುವವರನ್ನು ಜೀವೋದ್ಧಾರ ಮಾಡಲೆಂದು.