Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ಈಗ ಹೇಳುತ್ತಿರುವುದರ ಮುಖ್ಯಾಂಶ ಏನೆಂದರೆ: ಸ್ವರ್ಗದಲ್ಲಿ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿರುವಂಥ ಪ್ರಧಾನ ಯಾಜಕ ನಮಗಿದ್ದಾರೆ.
2 : ಅಲ್ಲಿ, ಆ ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ದೇವರಿಂದಲೇ ನಿರ್ಮಿತವಾದ ನಿಜವಾದ ಗರ್ಭಗುಡಿಯಲ್ಲಿ, ಅವರು ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
3 : ಪ್ರತಿಯೊಬ್ಬ ಪ್ರಧಾನಯಾಜಕನು ಕಾಣಿಕೆಗಳನ್ನೂ ಬಲಿಗಳನ್ನೂ ಅರ್ಪಿಸುವುದಕ್ಕಾಗಿಯೇ ನೇಮಕಗೊಂಡಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ನಮ್ಮ ಈ ಪ್ರಧಾನಯಾಜಕರಿಗೂ ಏನಾದರೂ ಇರಲೇಬೇಕು.
4 : ಇವರು ಧರೆಯಲ್ಲೇ ಇದ್ದಿದ್ದರೆ ಯಾಜಕರಾಗಿರುತ್ತಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರ ವಿಧಿಸುವ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇರೆ ಯಾಜಕರು ಇದ್ದಾರೆ.
5 : ಸ್ವರ್ಗೀಯ ಗರ್ಭಗುಡಿಯ ಚಿಹ್ನೆ ಹಾಗೂ ಛಾಯೆಯಾಗಿರುವ ಆಲಯಗಳಲ್ಲಿ ಇಲ್ಲಿಯ ಯಾಜಕರು ಉಪಾಸನೆ ಮಾಡುತ್ತಾರೆ. ಮೋಶೆ ಗರ್ಭಗುಡಿಯನ್ನು ನಿರ್ಮಿಸಲು ಆರಂಭಿಸಿದಾಗ, ದೇವರು ಆತನಿಗೆ, “ಬೆಟ್ಟದ ಮೇಲೆ ನಾನು ತೋರಿಸಿದ ನಕ್ಷೆಯ ಪ್ರಕಾರವೇ ನೀನು ಎಲ್ಲವನ್ನೂ ನಿರ್ಮಿಸಬೇಕು,” ಎಂದು ಆಜ್ಞೆಯನ್ನಿತ್ತರು.
6 : ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ.
7 : ಮೊದಲನೆಯ ಒಡಂಬಡಿಕೆ ದೋಷರಹಿತ ಆಗಿದ್ದಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ.
8 : ಆದರೆ ದೇವರು ಆ ಒಡಂಬಡಿಕೆಗೆ ಸೇರಿದ ಜನರನ್ನು ಆರೋಪಿಸುತ್ತಾ ಇಂತೆಂದಿದ್ದಾರೆ: “ಇಗೋ, ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಕಾಲವು ಬರಲಿದೆ, ಎಂದರು ಸರ್ವೇಶ್ವರ.
9 : ಈ ಒಡಂಬಡಿಕೆ, ನಾನು ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕೈಹಿಡಿದು ಕರೆತಂದಾಗ ಮಾಡಿದ ಒಡಂಬಡಿಕೆಯಂತಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ; ಎಂದೇ, ನಾನು ಅವರನ್ನು ಲಕ್ಷಿಸಲೂ ಇಲ್ಲ, ಎಂದರು ಸರ್ವೇಶ್ವರ.
10 : ಆ ದಿನಗಳು ಬಂದಮೇಲೆ ಇಸ್ರಯೇಲ್ ವಂಶದವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು, ಎಂದರು ಸರ್ವೇಶ್ವರ. ನಾಟಿಸುವೆನು ನನ್ನಾಜ್ಞೆಗಳನು ಅವರ ಮನದಲಿ ಬರೆಯುವೆನು ಅವುಗಳನ್ನು ಅವರ ಹೃದಯದಲಿ ದೇವನಾಗಿರುವೆನು ನಾನವರಿಗೆ ಅವರಾಗುವರು ಪ್ರಜೆಗಳು ನನಗೆ.
11 : ‘ಸರ್ವೇಶ್ವರನನ್ನು ಅರಿತುಕೊಳ್ಳಿರಿ’ ಎಂದು ನೆರೆಯವನಿಗಾಗಲಿ, ಸೋದರನಿಗಾಗಲಿ ಯಾರೂ ಬೋಧಿಸಬೇಕಾಗಿಲ್ಲ. ಹಿರಿಯಕಿರಿಯರು ಎಲ್ಲರೂ ನನ್ನನ್ನು ಅರಿಯುವರು.
12 : ಅವರ ಪಾಪಗಳನ್ನು ಕ್ಷಮಿಸುವೆನು ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು ಎಂದರು ಸರ್ವೇಶ್ವರ.”
13 : ಇಲ್ಲ ‘ಹೊಸ ಒಡಂಬಡಿಕೆ’ ಎಂದು ಹೇಳಿ, ಹಿಂದಿನದನ್ನು ಹಳೆಯದಾಗಿಸಿದ್ದಾರೆ. ಹಳತಾದುದು ಹಾಗೂ ಮುದಿಯಾದುದು ಅಳಿದು ಹೋಗುವಂಥಾದ್ದು.

· © 2017 kannadacatholicbible.org Privacy Policy