Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ಈ ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರುರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು.
2 : ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯ ನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು.
3 : ಆತನಿಗೆ ತಂದೆತಾಯಿಯಾಗಲಿ ವಂಶಾವಳಿಯಾಗಲಿ ಇಲ್ಲ. ಆತನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಆತನು ದೇವಪುತ್ರನನ್ನು ಹೋಲುತ್ತಾನೆ. ಶಾಶ್ವತ ಯಾಜಕನಾಗಿ ಉಳಿಯುತ್ತಾನೆ.
4 : ನಮ್ಮ ಪಿತಾಮಹ ಅಬ್ರಹಾಮನೇ ತಾನು ಗೆದ್ದುತಂದ ಶ್ರೇಷ್ಠ ವಸ್ತುಗಳಲ್ಲಿ ದಶಮಾಂಶವನ್ನು ಈ ಮೆಲ್ಕಿಸದೇಕನಿಗೆ ಸಲ್ಲಿಸಿ ಗೌರವಿಸಬೇಕಾದರೆ ಆತನು ಎಂಥಾ ಮಹಾಪುರುಷನೆಂದು ನೀವೇ ಆಲೋಚಿಸಿ ನೋಡಿ.
5 : ಲೇವಿಯ ಕುಲದವರಲ್ಲಿ ಯಾಜಕ ಪದವಿಯನ್ನು ಹೊಂದಿದವರು ಜನರಿಂದ, ಅಂದರೆ ಅಬ್ರಹಾಮನ ವಂಶಜರಾದ ತಮ್ಮ ಸ್ವಜನರಿಂದ, ದಶಮಾಂಶವನ್ನು ತೆಗೆದುಕೊಳ್ಳುವುದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆ ಉಂಟು.
6 : ಆದರೆ ಲೇವಿಯ ಕುಲದವನಲ್ಲದ ಮೆಲ್ಕಿಸದೇಕನು ಅಬ್ರಹಾಮನಿಂದಲೇ ದಶಮಾಂಶವನ್ನು ಪಡೆದನು; ಮಾತ್ರವಲ್ಲದೆ, ದೇವರ ವಾಗ್ದಾನವನ್ನು ಪಡೆದ ಅಬ್ರಹಾಮನನ್ನೇ ಆಶೀರ್ವದಿಸಿದನು.
7 : ಆಶೀರ್ವದಿಸುವವನು, ಆಶೀರ್ವಾದ ಪಡೆಯುವವನಿಗಿಂತ ದೊಡ್ಡವನು ಎನ್ನುವುದು ನಿರ್ವಿವಾದ.
8 : ಇದಲ್ಲದೆ, ದಶಮಾಂಶವನ್ನು ಪಡೆಯುತ್ತಿರುವ ಲೇವಿಯರು ಕೇವಲ ಮತ್ರ್ಯ ಮಾನವರು; ಅದನ್ನು ಪಡೆದ ಮೆಲ್ಕಿಸದೇಕನು ತಾನು ಅಮತ್ರ್ಯ ಯಾಜಕನೆಂದು ಸಾಕ್ಷ್ಯಾಧಾರ ಪಡೆದವನು.
9 : ಅಷ್ಟೇ ಅಲ್ಲ, ದಶಮಾಂಶವನ್ನು ತೆಗೆದುಕೊಳ್ಳುತ್ತಿದ್ದ ಲೇವಿಯೂ ಕೂಡ ಅಬ್ರಹಾಮನ ಮುಖಾಂತರ ದಶಮಾಂಶವನ್ನು ತೆತ್ತನು ಎಂದು ಹೇಳಬಹುದು.
10 : ಹೇಗೆಂದರೆ, ಮೆಲ್ಕಿಸದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ಇನ್ನೂ ಹುಟ್ಟಿರಲಿಲ್ಲವಾದರೂ ತತ್ವಶಃ ಆತನು ತನ್ನ ಪೂರ್ವಜ ಅಬ್ರಹಾಮನ ಉದರದಲ್ಲಿದ್ದನು.
11 : ಇಸ್ರಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆಯೇ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿತ್ತಾದರೆ, ಆರೋನನ ಪರಂಪರೆಗೆ ಸೇರದೆ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಕಾಣಿಸಿಕೊಳ್ಳುವ ಅವಶ್ಯಕತೆ ಏನಿತ್ತು?
12 : ಯಾಜಕತ್ವ ಬದಲಾವಣೆಗೊಂಡರೆ ಧರ್ಮಶಾಸ್ತ್ರವೂ ಬದಲಾವಣೆಗೊಳ್ಳಬೇಕಾದುದು ಅಗತ್ಯ.
13 : ಇದನ್ನೆಲ್ಲಾ ಯಾರನ್ನು ಕುರಿತು ಹೇಳಲಾಗಿದೆಯೋ ಆ ವ್ಯಕ್ತಿ ಹುಟ್ಟಿದ್ದು ಬೇರೊಂದು ಕುಲದಲ್ಲಿ ಆ ಕುಲದಲ್ಲಿ ಎಂದೂ ಯಾರೂ ಬಲಿಪೀಠದ ಸೇವೆ ಮಾಡಿದವರಲ್ಲ.
14 : ನಮ್ಮ ಪ್ರಭು ಹುಟ್ಟಿದ್ದು ಯೂದನ ಕುಲದಲ್ಲಿ ಎಂಬುದು ತಿಳಿದ ವಿಷಯ. ಮೋಶೆ ಯಾಜಕರನ್ನು ಕುರಿತು ಮಾತನಾಡಿದಾಗ ಈ ಕುಲದ ಬಗ್ಗೆ ಏನನ್ನೂ ಹೇಳಲಿಲ್ಲ.
15 : ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ.
16 : ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ.
17 : “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕನು,” ಎಂದು ಪವಿತ್ರಗ್ರಂಥ ಸಮರ್ಥಿಸುತ್ತದೆ.
18 : ಹಳೆಯ ಶಾಸನವು ಶಿಥಿಲವೂ ವಿಫಲವೂ ಆದಕಾರಣ, ಅದನ್ನು ರದ್ದುಗೊಳಿಸಲಾಯಿತು.
19 : ಏಕೆಂದರೆ, ಧರ್ಮಶಾಸ್ತ್ರವು ಏನನ್ನೂ ಸಿದ್ಧಿಗೆ ತರಲಿಲ್ಲ. ಅದಕ್ಕೆ ಬದಲಾಗಿ ದೇವರ ಸನ್ನಿಧಿಗೆ ನಮ್ಮನ್ನು ಕೊಂಡೊಯ್ಯಬಲ್ಲ ನಂಬಿಕೆ ನಿರೀಕ್ಷೆಯನ್ನು ನಮಗೆ ಒದಗಿಸಲಾಗಿದೆ.
20 : ಇದಲ್ಲದೆ, ಲೇವಿಯರು ಯಾಜಕರಾದಾಗ, ದೇವರು ಯಾವ ಶಪಥವನ್ನೂ ಮಾಡಲಿಲ್ಲ.
21 : ಇವರಾದರೋ: “ಎಂದೆಂದಿಗೂ ನೀ ಯಾಜಕನೆಂದು ಸರ್ವೇಶ್ವರನೇ ಪ್ರಮಾಣಿಸಿಹರು ಮನಸ್ಸನ್ನೆಂದೂ ಬದಲಾಯಿಸರವರು,” ಎಂಬ ಶಪಥ ಪಡೆದಿರುವ ಯಾಜಕರು.
22 : ಆದ್ದರಿಂದಲೇ, ಯೇಸು ಅತ್ಯಂತ ಶ್ರೇಷ್ಠವಾದ ಒಡಂಬಡಿಕೆಗೆ ಆಧಾರಪುರುಷರಾಗಿದ್ದಾರೆ.
23 : ಲೇವಿಯರ ಯಾಜಕಸೇವೆಯನ್ನು ಮರಣವು ಮೊಟಕುಗೊಳಿಸುತ್ತಿದ್ದುದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.
24 : ಯೇಸುವಾದರೋ ಚಿರಂಜೀವಿಯಾದುದರಿಂದ ಅವರ ಯಾಜಕತ್ವವು ಶಾಶ್ವತವಾಗಿ ಉಳಿಯುವಂಥಾದ್ದು.
25 : ಆದಕಾರಣ, ತಮ್ಮ ಮುಖಾಂತರ ದೇವರನ್ನು ಅರಸುವವರನ್ನು ಯೇಸು ಸಂಪೂರ್ಣವಾಗಿ ಉದ್ಧಾರಮಾಡಬಲ್ಲರು. ಅಂಥವರ ಪರವಾಗಿ ವಿಜ್ಞಾಪಿಸಲೆಂದೇ ಯೇಸು ಸದಾ ಬದುಕಿರುವರು.
26 : ನಮಗೆ ಬೇಕಾಗಿದ್ದ ಪ್ರಧಾನ ಯಾಜಕರು ಯೇಸುವೇ. ಇವರು ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ ಉನ್ನತದಲ್ಲಿರುವವರು.
27 : ಇವರು ಮಿಕ್ಕ ಪ್ರಧಾನ ಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು.
28 : ಧರ್ಮಶಾಸ್ತ್ರ ನೇಮಿಸುವ ಪ್ರಧಾನ ಯಾಜಕರು ಕುಂದು ಕೊರತೆಯುಳ್ಳ ಮಾನವರು. ಆದರೆ, ಧರ್ಮಶಾಸ್ತ್ರದ ತರುವಾಯ ಬಂದ ಹಾಗೂ ಶಪಥದಿಂದ ಕೂಡಿದ ದೈವವಾಕ್ಯವು ಸದಾ ಸರ್ವಸಂಪೂರ್ಣರಾದ ಪುತ್ರನನ್ನೇ ಪ್ರಧಾನ ಯಾಜಕರನ್ನಾಗಿ ನೇಮಿಸುತ್ತದೆ.

· © 2017 kannadacatholicbible.org Privacy Policy