Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ಆದುದರಿಂದ ಕ್ರಿಸ್ತಯೇಸುವನ್ನು ಕುರಿತಾದ ಪ್ರಾಥಮಿಕ ಪಾಠಗಳಲ್ಲೇ ನಿಂತುಬಿಡದೆ ಪ್ರೌಢ ವಿಷಯಗಳತ್ತ ಸಾಗೋಣ.
2 : ಜಡಕರ್ಮಗಳನ್ನು ಬಿಟ್ಟು ದೇವರಲ್ಲಿ ವಿಶ್ವಾಸವಿಡುವುದು, ಸ್ನಾನಸಂಸ್ಕಾರಗಳು, ಹಸ್ತನಿಕ್ಷೇಪ, ಸತ್ತವರ ಪುನರುತ್ಥಾನ, ನಿತ್ಯವಾದ ನ್ಯಾಯತೀರ್ಪು-ಈ ಬೋಧನಾ ಅಸ್ತಿವಾರವನ್ನು ಮತ್ತೆ ಮತ್ತೆ ಹಾಕಬೇಕಾಗಿಲ್ಲ.
3 : ದೇವರ ಚಿತ್ತವಾದರೆ ಪ್ರೌಢ ವಿಷಯಗಳತ್ತ ಪ್ರಗತಿಪರರಾಗೋಣ.
4 : ಒಬ್ಬನು, ಒಮ್ಮೆ ಜ್ಞಾನೋದಯವನ್ನು ಪಡೆದು, ಸ್ವರ್ಗೀಯ ವರದಾನಗಳನ್ನು ಆಸ್ವಾದಿಸಿ, ಪವಿತ್ರಾತ್ಮ ಅವರ ಸಹಭಾಗಿಯಾಗಿ,
5 : ದೇವರ ವಾಕ್ಯದ ಸವಿಯುಂಡು, ಬರಲಿರುವ ಯುಗದ ವೈಭವವನ್ನು ಮನಗಂಡು,
6 : ಅನಂತರವೂ ವಿಶ್ವಾಸಭ್ರಷ್ಟನಾದರೆ, ಅಂಥವನು ಪಶ್ಚಾತ್ತಾಪಪಟ್ಟು ದೈವಾಭಿಮುಖನಾಗುವುದು ಅಸಾಧ್ಯ. ಏಕೆಂದರೆ, ಅಂಥವನು ತನ್ನ ಪಾಲಿಗೆ ದೇವರ ಪುತ್ರನನ್ನು ಪುನಃ ಶಿಲುಬೆಗೆ ಏರಿಸಿ ಅವರನ್ನು ಬಹಿರಂಗವಾಗಿ ಅವಮಾನಗೊಳಿಸುವವನಾಗುತ್ತಾನೆ.
7 : ಭೂಮಿಯು ಕಾಲಾನುಕಾಲಕ್ಕೆ ತನ್ನ ಮೇಲೆ ಬೀಳುವ ಮಳೆಯ ನೀರನ್ನು ಹೀರಿಕೊಂಡು ವ್ಯವಸಾಯಗಾರನಿಗೆ ಅನುಕೂಲವಾದ ಬೆಳೆಯನ್ನು ಕೊಟ್ಟರೆ ದೇವರ ಆಶೀರ್ವಾದವನ್ನು ಪಡೆಯುತ್ತದೆ.
8 : ಆದರೆ, ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ಅಪ್ರಯೋಜಕವೆನಿಸಿಕೊಂಡು ಶಾಪಕ್ಕೆ ಗುರಿಯಾಗುತ್ತದೆ; ಕೊನೆಗದು ಬೆಂಕಿಗೆ ತುತ್ತಾಗುತ್ತದೆ.
9 : ಪ್ರಿಯರೇ, ನಾವು ಈ ರೀತಿ ಹೇಳಿದೆವಾದರೂ ನಿಮ್ಮ ಪರಿಸ್ಥಿತಿ ಉತ್ತಮವಾಗಿದೆ ಮತ್ತು ನೀವು ಜೀವೋದ್ಧಾರದ ಮಾರ್ಗದಲ್ಲಿ ಇದ್ದೀರಿ ಎಂಬ ದೃಢವಾದ ನಂಬಿಕೆ ನನಗಿದೆ.
10 : ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಮಾಡುತ್ತಲೂ ಇದ್ದೀರಿ. ದೇವರ ಹೆಸರಿನಲ್ಲಿ ನೀವು ಮಾಡಿದ ಪ್ರೀತಿಪೂರ್ವಕವಾದ ಸೇವೆಯನ್ನು ದೇವರು ಮರೆಯುವಂತಿಲ್ಲ. ಅವರು ಅನ್ಯಾಯ ಮಾಡುವವರೇನೂ ಅಲ್ಲ.
11 : ನೀವು ಹೊಂದಿರುವ ನಿರೀಕ್ಷೆ ಪೂರ್ಣವಾಗಿ ಕೈಗೂಡುವಂತೆ ನಿಮ್ಮಲ್ಲಿ ಪ್ರತಿಯೊಬ್ಬನೂ ಮೊದಲಿನ ಆಸಕ್ತಿಯನ್ನು ಕಡೆಯತನಕವೂ ತೋರಿಸಬೇಕೆಂದು ಹಾರೈಸುತ್ತೇನೆ.
12 : ನೀವು ಆಲಸಿಗಳಾಗಿರಬಾರದು; ವಿಶ್ವಾಸದಿಂದಲೂ ಬಹು ತಾಳ್ಮೆಯಿಂದಲೂ ದೈವ ವಾಗ್ದಾನಗಳನ್ನು ಬಾಧ್ಯವಾಗಿಸಿಕೊಂಡವರನ್ನು ಅನುಸರಿಬೇಕು.
13 : ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮ್ಮ ಮಾತನ್ನು ಈಡೇರಿಸುವುದಾಗಿ ಶಪಥ ಮಾಡಿದರು. ತಮಗಿಂತಲೂ ಮೇಲಾದವರಾರೂ ಇಲ್ಲವಾದ ಕಾರಣ ತಮ್ಮ ಸ್ವಂತ ಹೆಸರಿನಲ್ಲೇ ಶಪಥ ಮಾಡಿದರು.
14 : “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಹೆಚ್ಚಿಸಿಯೇ ತೀರುವೆನು,” ಎಂದರು.
15 : ಅಂತೆಯೇ, ಅಬ್ರಹಾಮನು ದೀರ್ಘಕಾಲ ಕಾದಿದ್ದು ದೇವರ ವಾಗ್ದಾನದ ಫಲವನ್ನು ಪಡೆದನು.
16 : ಮನುಷ್ಯರು ತಮಗಿಂತಲೂ ಹೆಚ್ಚಿನವರ ಮೇಲೆ ಆಣೆಯಿಡುವುದು ವಾಡಿಕೆ. ಹೀಗೆ ಆಣೆಯಿಟ್ಟ ಪ್ರಮಾಣಮಾಡಿದರೆ ಎಲ್ಲ ವಿವಾದಗಳು ಕೊನೆಗೊಳ್ಳುತ್ತವೆ.
17 : ಹಾಗೆಯೇ, ದೇವರು ತಮ್ಮ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವವರಿಗೆ ತಮ್ಮ ಸಂಕಲ್ಪ ಅಚಲವಾದುದು ಎಂಬುದನ್ನು ಸ್ಪಷ್ಟಪಡಿಸಲು, ಶಪಥಮಾಡಿ ಸ್ಥಿರಪಡಿಸಿದರು.
18 : ದೇವರ ವಾಗ್ದಾನ ಮತ್ತು ಶಪಥ ಇವೆರಡೂ ಅಚಲವಾದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಮೋಸಮಾಡುವವರೇ ಅಲ್ಲ. ಇದರಿಂದಾಗಿ, ದೇವರ ಆಶ್ರಯಕ್ಕಾಗಿ ಧಾವಿಸಿ ಬಂದಿರುವ ನಾವು, ನಮ್ಮ ಮುಂದಿರಿಸಿರುವ ನಂಬಿಕೆ ನಿರೀಕ್ಷೆಯಲ್ಲಿ ಸ್ಥಿರವಾಗಿ ನಿಲ್ಲಲು ಬಲವಾದ ಪ್ರೋತ್ಸಾಹ ದೊರೆತಂತಾಯಿತು.
19 : ಈ ನಂಬಿಕೆ, ನಿರೀಕ್ಷೆ ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು.
20 : ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನ ಯಾಜಕರಾದ ಯೇಸು ನಮ್ಮ ಮುಂದಾಳಾಗಿ ಹೋಗಿ ಆ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ.

· © 2017 kannadacatholicbible.org Privacy Policy