1 : ಪ್ರತಿಯೊಬ್ಬ ಪ್ರಧಾನ ಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆ ಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು.
2 : ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ಞಾನಿಗಳನ್ನೂ ದುರ್ಮಾರ್ಗಿಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲನು.
3 : ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕಬಲಿಯನ್ನು ಅರ್ಪಿಸಬೇಕಾಗಿದೆ.
4 : ಅಲ್ಲದೆ, ಪ್ರಧಾನ ಯಾಜಕನೆಂಬ ಗೌರವ ಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು.
5 : ಅದೇ ರೀತಿ ಕ್ರಿಸ್ತಯೇಸು, ಪ್ರಧಾನ ಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ.
“ನೀನೇ ನನ್ನ ಪುತ್ರನು;
ನಾನೇ ನಿನ್ನನ್ನು ಪಡೆದಿದ್ದೇನೆ,” ಎಂದ
ದೇವರೇ ಅವರನ್ನು ಆ ಪದವಿಗೆ
ಏರಿಸಿದರು.
6 : ಅವರೇ ಮತ್ತೊಂದು ಕಡೆಯಲ್ಲಿ:
“ನೀನು ಸದಾಕಾಲವೂ
ಮೆಲ್ಕಿಸದೇಕನ ಪರಂಪರೆಗೆ ಸೇರಿದ
ಯಾಜಕ,” ಎಂದಿದ್ದಾರೆ.
7 : ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು.
8 : ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು.
9 : ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.
10 : ಅಲ್ಲದೆ, ದೇವರಿಂದ, “ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನ ಯಾಜಕ,” ಎನಿಸಿಕೊಂಡರು.
11 : ಈ ವಿಷಯದಲ್ಲಿ ನಾವು ಹೇಳಬೇಕಾದುದು ಎಷ್ಟೋ ಇದೆ. ಆದರೆ ನಿಮ್ಮ ಬುದ್ಧಿಯು ಮಂದವಾಗಿರುವುದರಿಂದ ಅದನ್ನೆಲ್ಲಾ ವಿವರಿಸುವುದು ಕಷ್ಟವಾಗಿದೆ.
12 : ಇಷ್ಟರೊಳಗೆ ನೀವು ಇತರರಿಗೆ ಬೋಧಿಸಲು ಶಕ್ತರಾಗಬೇಕಾಗಿತ್ತು; ಆದರೆ ದೇವರ ವಾಕ್ಯದ ಮೂಲ ಪಾಠಗಳನ್ನೇ ಇತರರು ನಿಮಗೆ ಮತ್ತೆ ಹೇಳಿಕೊಡಬೇಕಾಗಿದೆ. ಗಟ್ಟಿಯಾದ ಆಹಾರವನ್ನು ಉಣ್ಣುವ ಬದಲು ನೀವಿನ್ನೂ ಹಾಲನ್ನೇ ಕುಡಿಯಬೇಕಾಗಿದೆ.
13 : ಹಾಲು ಕುಡಿಯಬೇಕಾದವನು ಹಸುಗೂಸು. ನ್ಯಾಯ ನೀತಿಯ ಅನುಭವ ಅವನಿಗಿಲ್ಲ.
14 : ಗಟ್ಟಿಯಾದ ಆಹಾರ ಬೆಳೆದವರಿಗೆ; ಸ್ವಂತ ಅನುಭವದಿಂದ ಒಳ್ಳೆಯದಾವುದು ಕೆಟ್ಟದ್ದಾವುದು ಎಂದು ಅರಿತುಕೊಳ್ಳಬಲ್ಲವರಿಗೆ.