1 : ದೇವರು ತಮ್ಮ ವಿಶ್ರಾಂತಿಯ ನೆಲೆಯನ್ನು ನೀಡುವುದಾಗಿ ಮಾಡಿದ ವಾಗ್ದಾನ ಇನ್ನೂ ರದ್ದಾಗದೆ ಉಳಿದಿದೆ. ನಿಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯದೆ ಇರಬಾರದು. ಎಂತಲೇ, ನಾವು ಭಯಭಕ್ತಿಯಿಂದ ಬಾಳೋಣ.
2 : ಶುಭವಾರ್ತೆಯನ್ನು ಅವರಿಗೆ ಸಾರಲಾದಂತೆ ನಮಗೂ ಸಾರಲಾಯಿತು. ಅವರು ಅದನ್ನು ಆಲಿಸಿದರು; ಆದರೆ ಅವರಲ್ಲಿ ವಿಶ್ವಾಸವಿರಲಿಲ್ಲ. ಈ ಕಾರಣ, ಅವರು ಕೇಳಿದ ಸಂದೇಶದಿಂದ ಫಲಪಡೆಯದೆ ಹೋದರು.
3 : ಲೋಕಾದಿಯಲ್ಲೇ, ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿದ್ದರೂ ಅವರು, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು,” ಎಂದು ಹೇಳಿದ್ದಾರೆ. ವಿಶ್ವಾಸಿಸುವ ನಾವಾದರೋ ಆ ವಿಶ್ರಾಂತಿಯ ನೆಲೆಯನ್ನು ಸೇರುತ್ತೇವೆ.
4 : ಪವಿತ್ರಗ್ರಂಥದ ಒಂದೆಡೆಯಲ್ಲಿ, ಏಳನೆಯ ದಿನವನ್ನು ಕುರಿತು: “ದೇವರು ತಮ್ಮ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂದು ಬರೆದಿದೆ
5 : ಮೇಲೆ ಹೇಳಿದ ವಚನದಲ್ಲಾದರೋ, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ” ಎಂದಿದೆ.
6 : ಆದುದರಿಂದ, ಈ ವಿಶ್ರಾಂತಿಯ ನೆಲೆಯನ್ನು ಸೇರುವ ಸಾಧ್ಯತೆ ಬೇರೆಯವರಿಗಾದರೂ ಇದೆ ಎಂಬುದು ಸ್ಪಷ್ಟವಾಗುತ್ತದೆ. ದೇವರ ವಾಕ್ಯವನ್ನು ಮೊದಲು ಕೇಳಿದವರಾದರೋ, ತಮ್ಮ ಅವಿಶ್ವಾಸದಿಂದ ಅದನ್ನು ಸೇರದೆ ಹೋದರು.
7 : ಈ ಕಾರಣದಿಂದಲೇ ದೇವರು, “ಇಂದು” ಎಂದು ಬೇರೊಂದು ದಿನವನ್ನು ಗೊತ್ತುಮಾಡುತ್ತಾರೆ. ಈ ದಿನವನ್ನು ಕುರಿತೇ ದೀರ್ಘಕಾಲದ ನಂತರ ದಾವೀದನ ಮುಖಾಂತರ:
“ದೇವರ ದನಿಯನು ಕೇಳುವಿರಾದರೆ ನೀವಿಂದು
ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ
ಹೃದಯವನು,”
ಎಂದು ಹೇಳಿದ್ದಾರೆ.
8 : ಯೆಹೋಶುವನು ಆ ಜನರನ್ನು ವಾಗ್ದತ್ತ ವಿಶ್ರಾಂತಿಗೆ ಸೇರಿಸಿದ್ದರೆ ದೇವರು ಬೇರೊಂದು ದಿನವನ್ನು ಗೊತ್ತುಮಾಡುತ್ತಿರಲಿಲ್ಲ.
9 : ಆದಕಾರಣ, ದೇವಜನರು ಅನುಭವಿಸುವುದಕ್ಕಿರುವ ಸಬ್ಬತ್ತೆಂಬ ವಿಶ್ರಾಂತಿ ಇನ್ನೂ ಉಳಿದಿದೆ.
10 : ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿ ವಿಶ್ರಾಂತಿ ಪಡೆದಂತೆ ದೇವರ ವಿಶ್ರಾಂತಿಯನ್ನು ಪಡೆದವನು ಸಹ ತನ್ನ ಕೆಲಸ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿಯನ್ನು ಪಡೆಯುತ್ತಾನೆ.
11 : ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಪಡೋಣ. ನಮ್ಮಲ್ಲಿ ಯಾರೂ ಆ ಜನರಂತೆ ಅವಿಧೇಯತೆಯಿಂದ ವರ್ತಿಸಿ ವಿಶ್ವಾಸ ಭ್ರಷ್ಟರಾಗದೆ ಇರೋಣ.
12 : ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದು; ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು. ಪ್ರಾಣ ಮತ್ತು ಆತ್ಮಗಳ, ಕೀಲು ಮತ್ತು ಮಜ್ಜೆಗಳ ಭೇದವನ್ನು ಛೇದಿಸುವಂತಾದ್ದು; ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತಾದ್ದು.
13 : ನಾವು ಯಾರಿಗೆ ಲೆಕ್ಕೆ ಒಪ್ಪಿಸಬೇಕಾಗಿದೆಯೋ, ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು.
14 : ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ.
15 : ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ.
16 : ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.