Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ಹೀಗಿರುವಲ್ಲಿ ದೇವಜನರಾದ ಸಹೋದರರೇ, ಸ್ವರ್ಗಸೌಭಾಗ್ಯದಲ್ಲಿ ಸಹಭಾಗಿಗಳಾಗಲು ಕರೆಹೊಂದಿದವರೇ, ದೇವರು ಕಳುಹಿಸಿದಂಥವರು ಹಾಗೂ ನಾವು ವಿಶ್ವಾಸಿಸುವ ಧರ್ಮದ ಪ್ರಧಾನ ಯಾಜಕರು ಆದ ಯೇಸುವನ್ನು ಭಕ್ತಿಯಿಂದ ಧ್ಯಾನಿಸಿರಿ.
2 : ದೇವಮಂದಿರ ಸೇವೆಯಲ್ಲಿ ಮೋಶೆ ಪ್ರಾಮಾಣಿಕನಾಗಿದ್ದಂತೆಯೇ ಯೇಸುಸ್ವಾಮಿ ತಮ್ಮನ್ನು ನೇಮಿಸಿದವರಿಗೆ ಪ್ರಮಾಣಿಕರಾಗಿದ್ದರು.
3 : ಆದರೆ, ಮನೆಕಟ್ಟುವವನು ಮನೆಗಿಂತ ಹೆಚ್ಚಿನ ಮಾನ್ಯತೆ ಉಳ್ಳವನಾಗಿರುವಂತೆ ಯೇಸು, ಮೋಶೆಗಿಂತಲೂ ಹೆಚ್ಚಿನ ಗೌರವಕ್ಕೆ ಪಾತ್ರರು.
4 : ಪ್ರತಿಯೊಂದು ಮನೆಗೂ ಕಟ್ಟಿದವನೊಬ್ಬನು ಇರುತ್ತಾನೆ; ಸಮಸ್ತವನ್ನು ಕಟ್ಟಿದವರಾದರೋ ದೇವರೇ.
5 : ಮೋಶೆ ದೇವರ ಮನೆಗೆಲ್ಲಾ ಪ್ರಾಮಾಣಿಕ ದಾಸನಾಗಿದ್ದನು; ಮುಂದೆ ಪ್ರಕಟವಾಗಬೇಕಿದ್ದ ಸಂಗತಿಗಳಿಗೆ ಸಾಕ್ಷಿಯಾಗಿದ್ದನು.
6 : ಕ್ರಿಸ್ತ ಯೇಸುವಾದರೋ, ದೇವರ ಮನೆಯಲ್ಲಿ ಅಧಿಕಾರ ಹೊಂದಿದ ಪ್ರಾಮಾಣಿಕ ಪುತ್ರನಾಗಿದ್ದಾರೆ. ನಾವು ನಿರೀಕ್ಷಿಸುತ್ತಿರುವ ಭಾಗ್ಯದ ಬಗ್ಗೆ ನಮಗಿರುವ ಶ್ರದ್ಧೆಯನ್ನೂ ಶೌರ್ಯವನ್ನೂ ಕಳೆದುಕೊಳ್ಳದೆ ದೃಢವಾಗಿದ್ದರೆ, ನಾವೇ ಅವರ ಮನೆಯಾಗಿರುತ್ತೇವೆ.
7 : ಆದಕಾರಣ ಪವಿತ್ರಾತ್ಮ ಹೇಳುವ ಪ್ರಕಾರ: “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು.
8 : ಮರುಭೂಮಿಯಲ್ಲವರು ದೇವರನು ಪರೀಕ್ಷಿಸಿದರು ಆತನ ವಿರುದ್ಧ ಅಲ್ಲೇ ದಂಗೆ ಎದ್ದರು.
9 : ಎಂದೇ ದೇವರಿಂತೆಂದರು: ಮರುಭೂಮಿಯಲಿ ಅವರೆನ್ನನು ಕೆಣಕಿದರು; ನಲವತ್ತು ವರುಷ ನಾನೆಸಗಿದ ಮಹತ್ಕಾರ್ಯಗಳನು ಕಂಡರಾದರೂ ಎನ್ನ ಕೆಣಕಿ ಪರೀಕ್ಷಿಸಿದರು.
10 : ಎಂತಲೇ ಆ ಜನರ ವಿರುದ್ಧ ಕೆರಳಿ ಇಂತೆಂದೆನು: ಹಾದಿ ತಪ್ಪಿದ ಹೃದಯಿಗಳು ಇವರೆಂದಿಗೂ, ಗ್ರಹಿಸಿಕೊಳ್ಳರಿವರು ಎನ್ನ ಮಾರ್ಗವನು
11 : ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು.”
12 : ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ.
13 : ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ “ಇಂದು” ಎನ್ನುವ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ.
14 : ನಾವೆಲ್ಲರೂ ಕ್ರಿಸ್ತಯೇಸುವಿನೊಡನೆ ಸಹಬಾಧ್ಯರು; ಆದರೆ, ಪ್ರಾರಂಭದಲ್ಲಿ ನಮಗಿದ್ದ ನಂಬಿಕೆ-ನಿರೀಕ್ಷೆಯನ್ನು ಕೊನೆಯವರೆಗೂ ಸ್ಥಿರವಾಗಿ ಇರಿಸಿಕೊಳ್ಳಬೇಕು.
15 : “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು ಮರುಭೂಮಿಯಲ್ಲಿ ದೇವರ ವಿರುದ್ಧ ದಂಗೆಯೆದ್ದವರವರು.”
16 : ಇಲ್ಲಿ, ದೇವರ ದನಿಯನು ಕೇಳಿಯೂ ದಂಗೆ ಎದ್ದವರು ಯಾರು? ಮೋಶೆಯ ಮುಂದಾಳತ್ವದಲ್ಲಿ ಈಜಿಪ್ಟ್ ದೇಶವನ್ನು ಬಿಟ್ಟುಬಂದ ಎಲ್ಲರೂ ಅಲ್ಲವೇ?
17 : ನಲವತ್ತು ವರ್ಷಗಳು ದೇವರು ಸಿಟ್ಟುಗೊಂಡದ್ದು ಯಾರ ಮೇಲೆ? ಪಾಪ ಮಾಡಿದವರ ಮೇಲಲ್ಲವೇ? ಅವರ ಶವಗಳು ಬಿದ್ದುದು ಮರುಭೂಮಿಯಲ್ಲಲ್ಲವೇ?
18 : “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ” ಎಂದು ಯಾರನ್ನು ಕುರಿತು ಶಪಥ ಮಾಡಿದರು? ತಮಗೆ ಅವಿಧೇಯರಾದ ಜನರನ್ನು ಕುರಿತಲ್ಲವೇ?
19 : ಆ ವಿಶ್ರಾಂತಿಯ ನೆಲೆಯನ್ನು ಅವರು ಸೇರದೆ ಹೋದದ್ದು ತಮ್ಮ ಅವಿಶ್ವಾಸದಿಂದಲೇ ಎಂಬುದು ನಮಗೆ ಸ್ಪಷ್ಟವಾಗುತ್ತದೆ.

· © 2017 kannadacatholicbible.org Privacy Policy