Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ.
2 : ಅತಿಥಿಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೆ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ.
3 : ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ. ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?
4 : ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.
5 : ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ.
6 : ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ.
7 : ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ.
8 : ಯೇಸುಕ್ರಿಸ್ತರು, ನಿನ್ನೆ ಇದ್ದ ಹಾಗೆಯೇ ಇಂದೂ ಎಂದೆಂದೂ ಇದ್ದಾರೆ.
9 : ನಾನಾವಿಧವಾದ ವಿಚಿತ್ರ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ನಿಮ್ಮ ಹೃದಯವನ್ನು, ಊಟೋಪಚಾರಗಳನ್ನು ಕುರಿತ ವಿಧಿನಿಯಮಗಳಿಂದ ಅಲ್ಲ, ದೇವರ ವರಪ್ರಸಾದದಿಂದ ದೃಢಪಡಿಸಿಕೊಳ್ಳಿ. ಅಂಥ ವಿಧಿನಿಯಮಗಳಿಗೆ ಬದ್ಧರಾಗಿದ್ದವರು ಯಾವ ಪ್ರಯೋಜನವನ್ನೂ ಪಡೆಯಲಿಲ್ಲ.
10 : ನಮಗೊಂದು ಬಲಿಪೀಠವಿದೆ; ಅಲ್ಲಿ ಅರ್ಪಿಸಲಾಗುವ ಬಲಿಯನ್ನು ಭುಜಿಸಲು ಯೆಹೂದ್ಯ ಗುಡಾರಗಳಲ್ಲಿ ಸೇವೆಸಲ್ಲಿಸುವ ಯಾಜಕರಿಗೆ ಹಕ್ಕಿಲ್ಲ.
11 : ಪ್ರಧಾನ ಯಾಜಕನು ಪಾಪಪರಿಹಾರಕಬಲಿಗಾಗಿ ಯಾವ ಪ್ರಾಣಿಗಳ ರಕ್ತವನ್ನು ಗರ್ಭಗುಡಿಗೆ ತರುತ್ತಾನೋ ಆ ಪ್ರಾಣಿಗಳ ದೇಹವನ್ನು ಪಾಳೆಯದಾಚೆ ಸುಡುವುದುಂಟು.
12 : ಯೇಸುಸ್ವಾಮಿ ಕೂಡ ತಮ್ಮ ರಕ್ತದಿಂದ ಜನರನ್ನು ಪರಿಶುದ್ಧಗೊಳಿಸುವುದಕ್ಕೋಸ್ಕರ, ನಗರ ದ್ವಾರದ ಹೊರಗಡೆ ಮರಣಕ್ಕೆ ಈಡಾದರು.
13 : ಅಂತೆಯೇ ನಾವು ಅವರ ನಿಮಿತ್ತ ನಮಗೆ ಬರುವ ನಿಂದೆ ಅವಮಾನಗಳನ್ನು ಹೊತ್ತು ನಮ್ಮ ಪಾಳೆಯದಿಂದಾಚೆ ಅವರ ಬಳಿಗೆ ಹೋಗೋಣ.
14 : ಏಕೆಂದರೆ, ಇಹದಲ್ಲಿ ಶಾಶ್ವತವಾದ ನಗರವು ನಮಗಿಲ್ಲ. ಬರಲಿರುವ ನಗರವನ್ನು ನಾವು ಎದುರುನೋಡುವವರು.
15 : ಆದ್ದರಿಂದ, ಪ್ರಭುವಾದ ಯೇಸುಕ್ರಿಸ್ತರನ್ನು ಮುಕ್ತ ಕಂಠದಿಂದ ಗುಣಗಾನ ಮಾಡುತ್ತಾ ಅವರ ಮುಖಾಂತರ ಸ್ತುತಿಯೆಂಬ ಬಲಿಯನ್ನು ದೇವರಿಗೆ ಸತತವಾಗಿ ಸಮರ್ಪಿಸೋಣ.
16 : ಇದಲ್ಲದೆ, ಪರೋಪಕಾರ ಮಾಡುವುದನ್ನೂ ನಿಮಗಿರುವುದನ್ನು ಪರರೊಡನೆ ಹಂಚಿಕೊಳ್ಳುವುದನ್ನೂ ನಿಲ್ಲಿಸಬೇಡಿ. ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೇ.
17 : ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ. ಅವರ ಆಜ್ಞೆಗಳನ್ನು ಪಾಲಿಸಿರಿ. ಅವರು ನಿಮ್ಮ ಆತ್ಮಗಳ ಪಾಲಕರು; ದೇವರಿಗೆ ಲೆಕ್ಕ ಒಪ್ಪಿಸಬೇಕಾದವರು. ಈ ಸೇವೆಯನ್ನು ಅವರು ಸಂತೋಷದಿಂದ ಮಾಡುವಂತೆ ನೀವು ನಡೆದುಕೊಳ್ಳಿ. ಅವರು ಮನನೊಂದುಕೊಂಡು ಮಾಡುವ ಸೇವೆಯಿಂದ ನಿಮಗೆ ಒಳಿತಾಗದು.
18 : ನಮಗಾಗಿಯೂ ಪ್ರಾರ್ಥಿಸಿರಿ. ಎಲ್ಲಾ ವಿಷಯಗಳಲ್ಲಿ ನಾವು ಸಜ್ಜನರಾಗಿ ನಡೆದುಕೊಳ್ಳಬೇಕೆಂಬುದೇ ನಮ್ಮ ಅಪೇಕ್ಷೆ. ನಮ್ಮ ಮನಸ್ಸಾಕ್ಷಿ ಶುದ್ಧವಾಗಿದೆಯೆಂಬ ದೃಢನಂಬಿಕೆ ನಮಗಿದೆ.
19 : ನಿಮ್ಮ ಬಳಿಗೆ ನಾನು ಆದಷ್ಟು ಬೇಗನೆ ಬಂದು ಸೇರುವಂತೆ ಪ್ರಾರ್ಥಿಸಬೇಕೆಂದು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.
20 : ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು.
21 : ನೀವು ಇಂಥ ದೇವರ ಚಿತ್ತವನ್ನು ನೆರವೇರಿಸಲು ನಿಮಗೆ ಬೇಕಾದ ಎಲ್ಲಾ ವರದಾನಗಳನ್ನು ಅವರು ನಿಮಗೆ ಅನುಗ್ರಹಿಸಲಿ. ಸ್ವಾಮಿ ಯೇಸುಕ್ರಿಸ್ತರ ಮುಖಾಂತರ ನಾವು ಅವರಿಗೆ ಪ್ರಿಯರಾದವರಾಗಿ ಬಾಳುವಂತಾಗಲಿ. ಯೇಸುಕ್ರಿಸ್ತರಿಗೆ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ ! ಆಮೆನ್.
22 : ಸಹೋದರರೇ, ಈ ಬುದ್ಧಿಮಾತುಗಳನ್ನು ತಾಳ್ಮೆಯಿಂದ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇವನ್ನು ಸಂಕ್ಷೇಪವಾಗಿಯೇ ನಿಮಗೆ ಬರೆದಿದ್ದೇನೆ.
23 : ನಿಮ್ಮ ಸಹೋದರ ತಿಮೊಥೇಯನಿಗೆ ಬಿಡುಗಡೆಯಾಗಿದೆ ಎಂದು ನಿಮಗೆ ತಿಳಿಸಬಯಸುತ್ತೇನೆ. ಆತನು ಬೇಗ ಬಂದರೆ, ನಾನೂ ಆತನೊಂದಿಗೆ ಬಂದು ನಿಮ್ಮನ್ನು ಕಾಣುತ್ತೇನೆ.
24 : ನಿಮ್ಮ ಸಭಾನಾಯಕರೆಲ್ಲರಿಗೂ ಎಲ್ಲಾ ದೇವಜನರಿಗೂ ನನ್ನ ವಂದನೆಗಳು. ಇಟಲಿಯಿಂದ ಬಂದ ಸಹೋದರರು ನಿಮಗೆ ವಂದನೆ ತಿಳಿಸಿದ್ದಾರೆ.
25 : ದೇವರ ಕೃಪಾಶೀರ್ವಾದ ನಿಮ್ಮೆಲ್ಲರಲ್ಲೂ ಇರಲಿ !

· © 2017 kannadacatholicbible.org Privacy Policy