Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ.
2 : ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ;
3 : ವಿಶ್ವವು ದೇವರ ವಾಣಿಯಿಂದ ಉಂಟಾಯಿತು ಎಂಬುದನ್ನು ಮತ್ತು ಗೋಚರವಾದವುಗಳು ಅಗೋಚರವಾದವುಗಳಿಂದ ಉಂಟಾದವು ಎಂಬುದನ್ನು ವಿಶ್ವಾಸದಿಂದಲೇ ತಿಳಿಯುತ್ತೇವೆ
4 : ವಿಶ್ವಾಸವಿದ್ದುದರಿಂದಲೇ ಹೇಬೆಲನು ಕಾಯಿನನಿಗಿಂತ ಉತ್ತಮವಾದ ಬಲಿಯನ್ನು ದೇವರಿಗೆ ಸಮರ್ಪಿಸಿದನು. ವಿಶ್ವಾಸದಿಂದಲೇ ತಾನು ಸತ್ಪುರುಷನೆಂದು ಸನ್ಮಾನಿತನಾದನು. ಅವನ ಕಾಣಿಕೆ ತಮಗೆ ಸ್ವೀಕೃತವಾಯಿತೆಂದು ದೇವರೇ ಸಾದರಪಡಿಸಿದರು. ಅವನು ಮೃತನಾಗಿದ್ದರೂ ಅವನ ವಿಶ್ವಾಸದ ಮೂಲಕ ಇಂದಿಗೂ ಮಾತನಾಡುತ್ತಿದ್ದಾನೆ.
5 : ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಆತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ.
6 : ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವುದೆಂದು ನಂಬಬೇಕು.
7 : ವಿಶ್ವಾಸವಿದ್ದುದರಿಂದಲೇ ನೋವನು ಕಾಣದೆ ಇದ್ದ ತನ್ನ ಭವಿಷ್ಯದ ಬಗ್ಗೆ ದೇವರಿಂದ ಮುನ್ನೆಚ್ಚರಿಕೆ ಪಡೆದಾಗ ಅದನ್ನು ಲಕ್ಷ್ಯಕ್ಕೆ ತಂದುಕೊಂಡು ಕುಟುಂಬವನ್ನು ರಕ್ಷಿಸಿಕೊಳ್ಳಲು ನಾವೆಯೊಂದನ್ನು ನಿರ್ಮಿಸಿದನು. ಇಡೀ ಜಗತ್ತೇ ದಂಡನೆಗೆ ಗುರಿಯಾಯಿತು. ನೋವನಾದರೋ ತನ್ನ ವಿಶ್ವಾಸದ ಫಲವಾಗಿ ಸತ್ಸಂಬಂಧಕ್ಕೆ ಬಾಧ್ಯಸ್ಥನಾದನು.
8 : ಅಬ್ರಹಾಮನು ದೇವರ ಕರೆಗೆ ಓಗೊಡುವುದಕ್ಕೂ ವಿಶ್ವಾಸವೇ ಕಾರಣವಾಗಿತ್ತು. ಆತನು ಆ ಕರೆಗನುಸಾರವಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ಸ್ಥಳ ಯಾವುದೆಂದು ತಿಳಿಯದಿದ್ದರೂ ಸ್ವದೇಶವನ್ನು ಬಿಟ್ಟು ತೆರಳಿದನು.
9 : ದೇವರು ವಾಗ್ದಾನ ಮಾಡಿದ ನಾಡಿಗೆ ಬಂದಾಗಲೂ ಆತನು ಅದೇ ವಿಶ್ವಾಸದ ನಿಮಿತ್ತ ಒಬ್ಬ ಅನ್ಯದೇಶೀಯನಂತೆ ಬಾಳಿದನು. ಡೇರೆಗಳಲ್ಲಿದ್ದುಕೊಂಡು ಒಬ್ಬ ಪ್ರವಾಸಿಗನಂತೆ ಜೀವಿಸಿದನು. ಅದೇ ವಾಗ್ದಾನಕ್ಕೆ ಸಹಬಾಧ್ಯಸ್ಥರಾದ ಇಸಾಕನೂ ಯಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು.
10 : ಏಕೆಂದರೆ, ಶಾಶ್ವತವಾದ ಅಸ್ತಿವಾರವುಳ್ಳ ಅಂದರೆ, ದೇವರೇ ನಿಯೋಜಿಸಿ ನಿರ್ಮಿಸಿದ ನಗರವನ್ನು ಆತನು ಎದುರು ನೋಡುತ್ತಿದ್ದನು.
11 : ಇದಲ್ಲದೆ, ಪ್ರಾಯ ಮೀರಿದ ಸಾರಳು ಕೂಡ ವಿಶ್ವಾಸದ ಮೂಲಕವಾಗಿಯೇ ಗರ್ಭವತಿ ಆಗುವ ಶಕ್ತಿಯನ್ನು ಪಡೆದಳು; ವಾಗ್ದಾನಮಾಡಿದ ದೇವರು ನಂಬಿಗಸ್ಥರು ಎಂಬ ಭರವಸೆ ಆಕೆಗಿತ್ತು.
12 : ಹೀಗೆ ಮೃತಪ್ರಾಯನಾಗಿದ್ದ ಒಬ್ಬ ವ್ಯಕ್ತಿ ಆಕಾಶದ ನಕ್ಷತ್ರಗಳಂತೆಯೂ ಕಡಲ ತೀರದ ಮರಳಿನಂತೆಯೂ ಅಸಂಖ್ಯಾತವಾದ ಸಂತತಿಗೆ ತಂದೆಯಾದನು.
13 : ಇವರೆಲ್ಲರೂ ವಿಶ್ವಾಸವುಳ್ಳವರಾಗಿಯೇ ಮೃತರಾದರು. ದೇವರು ವಾಗ್ದಾನ ಮಾಡಿದವುಗಳನ್ನು ಪಡೆಯದಿದ್ದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿ ಸಂತೋಷಪಟ್ಟರು; ತಾವು ಜಗತ್ತಿನಲ್ಲಿ ಕೇವಲ ಪರದೇಶಿಗಳೂ ಪ್ರವಾಸಿಗರೂ ಎಂಬುದನ್ನು ಒಪ್ಪಿಕೊಂಡರು.
14 : ಹೀಗೆ ಒಪ್ಪಿಕೊಳ್ಳುವವರೇ ಸ್ವದೇಶವನ್ನು ಅರಸುವವರು ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ.
15 : ತಾವು ಬಿಟ್ಟುಬಂದ ನಾಡಿನ ಮೇಲೆ ಅವರು ಮನಸ್ಸಿಡಲಿಲ್ಲ, ಹಾಗಿದ್ದಿದ್ದರೆ, ಮರಳಿ ಅಲ್ಲಿಗೆ ಹೋಗುವುದಕ್ಕೆ ಅವರಿಗೆ ಅವಕಾಶ ಯಾವಾಗಲೂ ಇರುತ್ತಿತ್ತು.
16 : ಆದರೆ, ಅವರು ಬಯಸಿದ್ದು ಶ್ರೇಷ್ಠವಾದ ನಾಡನ್ನು, ಅಂದರೆ ಸ್ವರ್ಗವನ್ನು. ಆದ್ದರಿಂದಲೇ ದೇವರು, “ಅವರ ದೇವರು”, ಎಂದು ಕರೆಸಿಕೊಳ್ಳಲು ಅವಮಾನಪಡಲಿಲ್ಲ. ಅದಕ್ಕೆ ಬದಲು, ಅವರಿಗಾಗಿ ಒಂದು ನಗರವನ್ನು ಸಜ್ಜುಗೊಳಿಸಿದ್ದಾರೆ.
17 : ವಿಶ್ವಾಸವಿದ್ದುದರಿಂದಲೇ ಅಬ್ರಹಾಮನು ತಾನು ಪರಿಶೋಧಿತನಾದಾಗ ಇಸಾಕನನ್ನು ಬಲಿಯಾಗಿ ಅರ್ಪಿಸಲು ಮುಂದೆ ಬಂದನು.
18 : “ಇಸಾಕನಿಂದ ಹುಟ್ಟುವವರು ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂಬ ವಾಗ್ದಾನವನ್ನು ಪಡೆದಿದ್ದರೂ ಅಬ್ರಹಾಮನು ತನ್ನ ಆ ಏಕಮಾತ್ರ ಪುತ್ರನನ್ನು ಬಲಿಕೊಡಲು ಹಿಂಜರಿಯಲಿಲ್ಲ.
19 : ಏಕೆಂದರೆ, ಸತ್ತವರನ್ನು ದೇವರು ಜೀವಕ್ಕೆ ಎಬ್ಬಿಸಬಲ್ಲರು ಎಂಬುದನ್ನು ಅಬ್ರಹಾಮನು ತಿಳಿದಿದ್ದನು. ಅಂತೆಯೇ, ತನ್ನ ಮಗನನ್ನು ಸಾವಿನಿಂದ ಮರಳಿ ಪಡೆದನು. ಮುಂಬರಲಿರುವ ಘಟನೆಗೆ ಇದೊಂದು ಮುನ್ಸೂಚನೆಯಾಗಿತ್ತು.
20 : ವಿಶ್ವಾಸವಿದ್ದುದರಿಂದಲೇ ಇಸಾಕನು ಸಹ ಮುಂದೆ ಸಂಭವಿಸಬೇಕಾದ್ದನ್ನು ಸೂಚಿಸಿ, ಯಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು.
21 : ವಿಶ್ವಾಸದಿಂದಲೇ ಯಕೋಬನು, ತಾನು ಸಾಯುವ ಸಮಯದಲ್ಲಿ ಜೋಸೆಫನ ಪ್ರತಿಯೊಬ್ಬ ಮಗನನ್ನೂ ಆಶೀರ್ವದಿಸಿದನು; ಊರುಗೋಲಿನ ಮೇಲೆ ಬಾಗಿಕೊಂಡೇ ದೇವರನ್ನು ಆರಾಧಿಸಿದನು.
22 : ವಿಶ್ವಾಸದಿಂದಲೇ ಜೋಸೆಫನು, ತಾನು ಸಾಯುವ ಗಳಿಗೆಯು ಸವಿೂಪಿಸಿದಾಗ, ಇಸ್ರಯೇಲಿನ ಜನರು ಈಜಿಪ್ಟಿನಿಂದ ಹೊರಬರುವುದನ್ನು ಸೂಚಿಸಿದನು. ಅಲ್ಲದೆ, ತನ್ನ ಶವಸಂಸ್ಕಾರದ ಬಗ್ಗೆ ಆದೇಶ ನೀಡಿದನು.
23 : ವಿಶ್ವಾಸವಿದ್ದುದರಿಂದಲೇ ಮೋಶೆ ಹುಟ್ಟಿದಾಗ ಆ ಮಗುವಿನ ಸೌಂದರ್ಯವನ್ನು ಕಂಡು, ತಂದೆತಾಯಿಗಳು ರಾಜಾಜ್ಞೆಗೆ ಅಂಜದೆ, ಮೂರು ತಿಂಗಳವರೆಗೆ ಅದನ್ನು ಬಚ್ಚಿಟ್ಟರು.
24 : ಮೋಶೆ ದೊಡ್ಡವನಾದ ಮೇಲೆ ತಾನು ಅರಸನಾದ ಫರೋಹನ ಕುಮಾರಿಯ ಪುತ್ರ ಎಂದು ಕರೆಸಿಕೊಳ್ಳಲು ನಿರಾಕರಿಸಿದುದೂ ಸಹ ವಿಶ್ವಾಸದಿಂದಲೇ.
25 : ಕ್ಷಣಿಕ ಪಾಪಭೋಗಗಳನ್ನು ಸವಿಯುವುದಕ್ಕಿಂತಲೂ ದೇವಜನರೊಂದಿಗೆ ಕಷ್ಟಕ್ಕೆ ಈಡಾಗುವುದೇ ಲೇಸೆಂದು ಆತನು ತೀರ್ಮಾನಿಸಿಕೊಂಡನು.
26 : ಈಜಿಪ್ಟಿನ ಸಕಲ ಐಶ್ವರ್ಯಕ್ಕಿಂತಲೂ ‘ಕ್ರಿಸ್ತ’ನಿಗೋಸ್ಕರ ನಿಂದೆಯನ್ನು ಅನುಭವಿಸುವುದು ದೊಡ್ಡ ಭಾಗ್ಯವೆಂದು ಆತನು ಎಣಿಸಿದನು. ಏಕೆಂದರೆ, ದೇವರಿಂದ ದೊರಕಲಿದ್ದ ಪ್ರತಿಫಲದ ಮೇಲೆಯೇ ಆತನ ಮನಸ್ಸು ನಾಟಿತ್ತು.
27 : ವಿಶ್ವಾಸವಿದ್ದುದರಿಂದಲೇ ಆತನು ಅರಸನ ಕಡುಕೋಪಕ್ಕೂ ಅಂಜದೆ ಈಜಿಪ್ಟ್ ದೇಶವನ್ನು ಬಿಟ್ಟುಬಂದನು. ಕಣ್ಣಿಗೆ ಕಾಣದ ದೇವರನ್ನು ಕಣ್ಣಾರೆ ಕಾಣುತ್ತಿರುವನೋ ಎನ್ನುವಷ್ಟು ದೃಢಚಿತ್ತನಾಗಿ ಅವನು ಮುನ್ನಡೆದನು.
28 : ಚೊಚ್ಚಲ ಮಕ್ಕಳನ್ನು ಸಂಹರಿಸುವಾತನು ಇಸ್ರಯೇಲರನ್ನು ಮುಟ್ಟದಂತೆ ರಕ್ತವನ್ನು ಚಿಮುಕಿಸಿ ಪಾಸ್ಕವನ್ನು ಆಚರಿಸುವಂತೆ ಮೋಶೆ ವಿಧಿಸಿದ್ದು ವಿಶ್ವಾಸದಿಂದಲೇ.
29 : ವಿಶ್ವಾಸದಿಂದಲೇ ಇಸ್ರಯೇಲರು ಒಣನೆಲವನ್ನು ದಾಟುವಂತೆ, ಕೆಂಪು ಸಮುದ್ರವನ್ನು ದಾಟಿದರು. ಈಜಿಪ್ಟಿನವರು ಹಾಗೆಯೇ ದಾಟಲೆತ್ನಿಸಿದಾಗ ನೀರಿನ ಪಾಲಾದರು.
30 : ಇಸ್ರಯೇಲರು ಏಳು ದಿನಗಳವರೆಗೆ ಜೆರಿಕೊ ಪಟ್ಟಣದ ಕೋಟೆಯನ್ನು ಪ್ರದಕ್ಷಿಣೆ ಮಾಡಿ ಬಂದ ನಂತರ ಅವು ತಮ್ಮಷ್ಟಕ್ಕೆ ತಾವೇ ಕುಸಿದು ಬಿದ್ದುದಕ್ಕೆ ಕಾರಣ ಆ ವಿಶ್ವಾಸವೇ.
31 : ವಿಶ್ವಾಸವಿದ್ದುದರಿಂದಲೇ ರಹಾಬಳೆಂಬ ಜಾರಿಣಿ ಇಸ್ರಯೇಲ್ ಗೂಢಚಾರರಿಗೆ ಸೌಹಾರ್ದತೆಯಿಂದ ಆಶ್ರಯ ನೀಡಿ, ಅವಿಶ್ವಾಸಿಗಳೊಡನೆ ನಾಶವಾಗದೆ ಉಳಿದಳು.
32 : ಇನ್ನೂ ಹೇಳಬೇಕೇ? ಗಿಡಿಯೋನ್, ಬಾರಾಕ್, ಸಂಸೋನ್, ಯೆಪ್ತಾಹ, ದಾವೀದ, ಸಮುವೇಲ ಇವರನ್ನೂ ಇತರ ಪ್ರವಾದಿಗಳನ್ನೂ ಕುರಿತು ಹೇಳಬೇಕಾದರೆ ನನಗೆ ಸಮಯ ಸಾಲದು.
33 : ಇವರು ವಿಶ್ವಾಸದಿಂದಲೇ ರಾಜ್ಯಗಳನ್ನು ಗೆದ್ದರು; ನ್ಯಾಯನೀತಿಯಿಂದ ಆಳಿದರು; ದೇವರಿಂದ ವಾಗ್ದಾನಗಳನ್ನು ಪಡೆದರು; ಸಿಂಹಗಳ ಬಾಯನ್ನು ಬಂಧಿಸಿದರು.
34 : ಅಗ್ನಿಜ್ವಾಲೆಯನ್ನು ಆರಿಸಿದರು; ಖಡ್ಗದ ಬಾಯಿಂದ ತಪ್ಪಿಸಿಕೊಂಡರು; ಬಲಹೀನರಾಗಿದ್ದರೂ ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಶತ್ರುಗಳ ಸೈನ್ಯವನ್ನು ಸದೆಬಡಿದರು.
35 : ವಿಶ್ವಾಸದಿಂದಲೇ ಮಹಿಳೆಯರು ಮೃತರಾಗಿದ್ದ ತಮ್ಮವರನ್ನು ಮರಳಿ ಜೀವಂತರಾಗಿ ಪಡೆದರು. ಕೆಲವರು ಇದಕ್ಕಿಂತ ಶ್ರೇಷ್ಠವಾದ ಪುನರುತ್ಥಾನವನ್ನು ಪಡೆಯುವ ಉದ್ದೇಶದಿಂದ ಬಿಡುಗಡೆಯನ್ನು ನಿರಾಕರಿಸಿ ಹಿಂಸೆಬಾಧೆಗಳಿಗೆ ತುತ್ತಾಗಿ ಮರಣವನ್ನಪ್ಪಿದರು
36 : ಇನ್ನೂ ಕೆಲವರು ಹಾಸ್ಯ ಪರಿಹಾಸ್ಯ, ಏಟುಪೆಟ್ಟು, ಸೆರೆಸಂಕಲೆಗಳನ್ನು ಅನುಭವಿಸಿದರು.
37 : ಮತ್ತೆ ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಗರಗಸದಿಂದ ಸೀಳಿ ಸಾಯಿಸಿದರು; ಖಡ್ಗದಿಂದ ಕಡಿದುಹಾಕಿದರು. ಇನ್ನೂ ಕೆಲವರು ನಿರ್ಗತಿಕರಾಗಿ ಕುರಿ ಮೇಕೆಗಳ ಚರ್ಮಗಳನ್ನು ಹೊದ್ದುಕೊಂಡು ಅಲೆದಾಡಿದರು. ಬಡತನಕ್ಕೂ ಹಿಂಸೆಬಾಧೆಗಳಿಗೂ ಕಷ್ಟಸಂಕಟಗಳಿಗೂ ಈಡಾದರು;
38 : ಇಂಥವರಿಗೆ ಈ ಲೋಕ ತಕ್ಕ ಸ್ಥಳವಾಗಿರಲಿಲ್ಲ. ಈ ಕಾರಣದಿಂದ, ಅವರು ಕಾಡು ಬೆಟ್ಟಗಳಲ್ಲೂ ಗುಹೆ ಕಣಿವೆಗಳಲ್ಲೂ ತಲೆಮರೆಸಿಕೊಂಡಿದ್ದರು.
39 : ಇವರೆಲ್ಲರೂ ವಿಶ್ವಾಸವುಳ್ಳವರಾದುದರಿಂದಲೇ ಸಜ್ಜನರೆಂದು ಹೆಸರುವಾಸಿಯಾದರು. ಆದರೂ ದೇವರು ವಾಗ್ದಾನಮಾಡಿದ ಸತ್ಫಲಗಳನ್ನು ಸವಿಯಲಿಲ್ಲ.
40 : ಏಕೆಂದರೆ ದೇವರು ನಮ್ಮೆಲ್ಲರಿಗೋಸ್ಕರ, ಶ್ರೇಷ್ಠವಾದ ಯೋಜನೆಯೊಂದನ್ನು ರೂಪಿಸಿ, ನಮ್ಮೊಡನೆಯೇ ಅಂದಿನ ವಿಶ್ವಾಸಿಗಳೂ ಸಿದ್ಧಿಗೆ ಬರಬೇಕೆಂದು ಸಂಕಲ್ಪಿಸಿದರು.

· © 2017 kannadacatholicbible.org Privacy Policy