Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಹಿಬ್ರಿಯ


1 : ಧರ್ಮಶಾಸ್ತ್ರವು ಬರಲಿದ್ದ ಸೌಭಾಗ್ಯದ ಛಾಯೆಯೇ ಹೊರತು ಅದರ ನಿಜಸ್ವರೂಪವಲ್ಲ. ವರ್ಷವರ್ಷವೂ ನಿರಂತರವಾಗಿ ಅದೇ ಬಲಿಗಳು ಅರ್ಪಿತವಾಗುತ್ತಿವೆ. ಹೀಗಿರುವಲ್ಲಿ, ದೇವರನ್ನು ಅರಸಿ ಬರುತ್ತಿರುವವರನ್ನು ಇಂಥ ಬಲಿಗಳಿಂದ ಸಿದ್ಧಿಗೆ ತರಲು ಹೇಗೆತಾನೆ ಸಾಧ್ಯ?
2 : ಹಾಗೆ ಸಿದ್ಧಿಗೆ ತರಲು ಸಾಧ್ಯವಿದ್ದಿದ್ದರೆ ಬಲಿಯರ್ಪಣೆಯು ಎಂದೋ ನಿಂತು ಹೋಗುತ್ತಿತ್ತು. ಏಕೆಂದರೆ, ಆಗ ಆರಾಧಕರು ಒಮ್ಮೆಗೇ ಶುದ್ಧಿಹೊಂದಿ ತಾವು ಪಾಪಿಗಳೆಂಬ ಮನವರಿಕೆಯೇ ಇಲ್ಲದೆ ಇರುತ್ತಿದ್ದರು.
3 : ಬದಲಿಗೆ, ಪ್ರತಿ ವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ ತರುತ್ತವೆ.
4 : ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ.
5 : ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು.
6 : ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು.
7 : ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.”
8 : ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ.
9 : ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ.
10 : ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.
11 : ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಇವುಗಳಿಂದ ಎಂದಿಗೂ ಪಾಪನಿವಾರಣೆ ಆಗದು.
12 : ಕ್ರಿಸ್ತಯೇಸು ಪಾಪನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿದ್ದಾರೆ.
13 : ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ.
14 : ತಾವು ಪುನೀತಗೊಳಿಸಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ.
15 : ಇದನ್ನು ಕುರಿತು ಪವಿತ್ರಾತ್ಮರು ಕೂಡ ನಮಗೆ ಸಾಕ್ಷಿಕೊಡುತ್ತಾರೆ:
16 : “ಆ ದಿನಗಳು ಬಂದಮೇಲೆ ನಾನು ಅವರೊಡನೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು: ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ನಾಟಿಸುವೆನು; ಅವರ ಮನದಲ್ಲಿ ಬರೆಯುವೆನು,” ಎಂದು ಹೇಳಿದ ನಂತರವೇ,
17 : “ಅವರ ಪಾಪಗಳನ್ನೂ ತಪ್ಪುನೆಪ್ಪುಗಳನ್ನೂ ನೆನಪಿಗೆ ತಂದುಕೊಳ್ಳೆನು,” ಎಂದಿದ್ದಾರೆ.
18 : ಪಾಪಗಳ ಕ್ಷಮಾಪಣೆಯಾದ ಬಳಿಕ ಪಾಪಪರಿಹಾರಕ ಬಲಿಯ ಅವಶ್ಯಕತೆ ಇಲ್ಲ.
19 : ಹೀಗಿರುವಲ್ಲಿ, ಪ್ರಿಯ ಸಹೋದರರೇ, ಯೇಸುಸ್ವಾಮಿ ತಮ್ಮ ದೇಹವೆಂಬ ತೆರೆಯ ಮೂಲಕ ನಮಗೆ ಹೊಸದಾದ ಸಜ್ಜೀವ ಮಾರ್ಗವನ್ನು ತೆರೆದಿಟ್ಟಿದ್ದಾರೆ.
20 : ಅದರ ಮೂಲಕ ಗರ್ಭಗುಡಿಯನ್ನು ಧೈರ್ಯದಿಂದ ಪ್ರವೇಶಿಸುವ ಹಕ್ಕು ಅವರ ರಕ್ತಧಾರೆಯಿಂದಲೇ ನಮಗೆ ದೊರೆತಿದೆ.
21 : ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕ ನಮಗಿದ್ದಾರೆ.
22 : ಆದಕಾರಣ, ನಾವು ಕೆಟ್ಟ ಮನಸ್ಸಾಕ್ಷಿಯನ್ನು ತೊರೆದ ಹೃದಯದಿಂದಲೂ ಪುಣ್ಯಜಲದಿಂದ ತೊಳೆದ ದೇಹದಿಂದಲೂ ಕೂಡಿದವರಾಗಿ ಶುದ್ಧ ಅಂತರಂಗದಿಂದಲೂ ಪೂರ್ಣವಿಶ್ವಾಸದಿಂದಲೂ ದೇವರ ಬಳಿಗೆ ಸಾಗೋಣ.
23 : ಕೊಟ್ಟ ಮಾತನ್ನು ದೇವರು ಮೀರುವುದಿಲ್ಲ. ಆದ್ದರಿಂದ ನಾವು ನಿವೇದಿಸುವ ನಂಬಿಕೆ ನಿರೀಕ್ಷೆಯಲ್ಲಿ ಚಂಚಲರಾಗದೆ ಸದೃಢರಾಗಿರೋಣ.
24 : ಪರಸ್ಪರ ಹಿತಚಿಂತಕರಾಗಿರೋಣ; ಪ್ರೀತಿಸಬೇಕು, ಒಳಿತನ್ನು ಮಾಡಬೇಕು ಎಂದು ಒಬ್ಬರನ್ನೊಬ್ಬರು ಹುರಿದುಂಬಿಸೋಣ.
25 : ಸಭೆ ಸೇರುವ ರೂಢಿಯನ್ನು ಕೆಲವರು ಕೈಬಿಟ್ಟಿದ್ದಾರೆ. ನಾವು ಹಾಗೆ ಮಾಡದಿರೋಣ. ನಿಮಗೆ ತಿಳಿದಿರುವಂತೆ ಪ್ರಭು ಪ್ರತ್ಯಕ್ಷರಾಗುವ ದಿನವು ಸವಿೂಪಿಸುತ್ತಿರುವುದರಿಂದ ಮತ್ತಷ್ಟು ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ.
26 : ನಾವು ಸತ್ಯವನ್ನು ಅರಿತವರಾದ ಮೇಲೂ ಬೇಕುಬೇಕಾಗಿ ಪಾಪಮಾಡುತ್ತಲೇ ಇದ್ದರೆ, ಪಾಪಪರಿಹಾರಕ್ಕೆ ಇನ್ನು ನಮಗೆ ಬೇರೆ ಯಾವ ಬಲಿಯೂ ಇರುವುದಿಲ್ಲ;
27 : ಬದಲಿಗೆ, ಅತ್ಯಂತ ಭಯದಿಂದ ಎದುರು ನೋಡಬೇಕಾದ ದಂಡನಾತೀರ್ಪು ಹಾಗೂ ದೇವರ ಶತ್ರುಗಳನ್ನು ದಹಿಸುವ ಉಗ್ರ ಕೋಪಾಗ್ನಿ - ಇವುಗಳನ್ನು ಮಾತ್ರ ನಮಗೆ ಉಳಿದಿರುತ್ತವೆ.
28 : ಮೋಶೆಯ ಆಜ್ಞಾವಿಧಿಗಳನ್ನು ಉಲ್ಲಂಘಿಸಿದವನು, ಇಬ್ಬರು ಅಥವಾ ಮೂವರು ಸಾಕ್ಷಿಗಳು ನೀಡುವ ಸಾಕ್ಷ್ಯದ ಆಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆಗೆ ಗುರಿ ಆಗುತ್ತಾನೆ.
29 : ಹೀಗಿರುವಲ್ಲಿ, ದೇವರ ಪುತ್ರನನ್ನು ತುಚ್ಛೀಕರಿಸುವವನೂ ತನ್ನನ್ನು ಶುದ್ಧೀಕರಿಸಿದ ಹಾಗು ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವನ್ನು ತೃಣೀಕರಿಸುವವನೂ ವರಪ್ರಸಾದವನ್ನು ತರುವ ಪವಿತ್ರಾತ್ಮ ಅವರನ್ನು ತಿರಸ್ಕರಿಸುವವನೂ ಎಂಥಾ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ!
30 : “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ; ನಾನೇ ಪ್ರತೀಕಾರವನ್ನು ಸಲ್ಲಿಸುವೆನು,” ಎಂದು ಹೇಳಿದವರು ಯಾರೆಂದು ಬಲ್ಲೆವು. ಅಲ್ಲದೆ, “ಸರ್ವೇಶ್ವರ ತಮ್ಮ ಪ್ರಜೆಗಳಿಗೆ ನ್ಯಾಯ ತೀರ್ಪನ್ನು ನೀಡುವರು,” ಎಂದೂ ಹೇಳಲಾಗಿದೆ.
31 : ಜೀವಸ್ವರೂಪರಾದ ದೇವರ ಕೈಯಲ್ಲಿ ಸಿಕ್ಕಿ ಬೀಳುವುದು ಅದೆಷ್ಟು ಭಯಂಕರ!
32 : ನಿಮ್ಮ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿ: ನಿಮಗೆ ಜ್ಞಾನೋದಯವಾದ ತರುವಾಯ, ಕಷ್ಟಸಂಕಟಗಳಿಂದ ಕೂಡಿದ ಹೋರಾಟವನ್ನು ಎದುರಿಸಿದಿರಿ!
33 : ಕೆಲವೊಮ್ಮೆ ಬಹಿರಂಗವಾಗಿ ಹಿಂಸೆಬಾಧೆಗಳಿಗೂ ನಿಂದೆ ಅವಮಾನಗಳಿಗೂ ಗುರಿಯಾದಿರಿ; ಮತ್ತೆ ಕೆಲವೊಮ್ಮೆ ನಿಮ್ಮಂತೆ ಸಂಕಟಪಡುವವರ ಸಂಗಡ ಸಹಭಾಗಿಗಳಾದಿರಿ;
34 : ಸೆರೆಯಾಳುಗಳಿಗೆ ಸಂತಾಪ ತೋರಿಸಿದಿರಿ, ನಿಮ್ಮ ಸೊತ್ತನ್ನು ಸುಲಿಗೆ ಮಾಡಿದಾಗ ಸಂತೋಷದಿಂದ ಬಿಟ್ಟುಕೊಟ್ಟಿರಿ. ಏಕೆಂದರೆ, ಇದಕ್ಕೂ ಶ್ರೇಷ್ಠವಾದ ಹಾಗೂ ಶಾಶ್ವತವಾದ ಸೊತ್ತು ನಿಮಗಿದೆಯೆಂದು ಚೆನ್ನಾಗಿ ಅರಿತಿದ್ದಿರಿ.
35 : ಆ ದೃಢ ನಂಬಿಕೆಯನ್ನು ಕಳೆದುಕೊಳ್ಳಬೇಡಿ; ಅದರ ಪ್ರತಿಫಲ ಮಹತ್ತಾದುದು.
36 : ದೇವರ ಚಿತ್ತವನ್ನು ನೆರವೇರಿಸಿ, ಅವರು ವಾಗ್ದಾನ ಮಾಡಿರುವುದನ್ನು ಪಡೆದುಕೊಳ್ಳುವಂತೆ, ನೀವು ದೃಢಮನಸ್ಕರಾಗಿರಬೇಕು.
37 : ಏಕೆಂದರೆ: “ಇನ್ನು ಅಲ್ಪ, ಅತ್ಯಲ್ಪ ಕಾಲದಲ್ಲೇ ಬರುವಾತನು ಬಂದೇ ಬರುವನು, ವಿಳಂಬಮಾಡನು.
38 : ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು ನಾನವರನು,” ಎನ್ನುತ್ತದೆ ಪವಿತ್ರಗ್ರಂಥ.
39 : ಆದರೆ ನಾವು ಹಿಮ್ಮೆಟ್ಟಿ ಹಾಳಾಗುವ ಜನರಲ್ಲ; ವಿಶ್ವಾಸವುಳ್ಳವರಾಗಿ ಜೀವೋದ್ಧಾರವನ್ನು ಪಡೆಯುವವರು.

· © 2017 kannadacatholicbible.org Privacy Policy