1 : ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು.
2 : ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ.
3 : ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿರುವವರೂ ಇವರೇ.
4 : ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರು ವಾಸಿಯಾದಾತ.
5 : ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ -
“ನೀನೇ ನನ್ನ ಪುತ್ರ;
ನಾನೇ ನಿನ್ನನಿಂದು ಪಡೆದವ,”
ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ,
“ನಾನಾತನಿಗೆ ಪಿತನು,
ಆತನೆನಗೆ ಪುತ್ರನು,”
ಎಂದಾಗಲಿ ಹೇಳಿದ್ದುಂಟೇ?
6 : ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ:
“ದೇವದೂತರೆಲ್ಲರೂ ಆತನನ್ನು
ಆರಾಧಿಸಲಿ,” ಎಂದಿದ್ದಾರೆ.
7 : ದೇವದೂತರ ವಿಷಯದಲ್ಲಿ -
“ದೇವರು ತಮ್ಮ ದೂತರನ್ನು
ಬೀಸುಗಾಳಿಯನ್ನಾಗಿಯೂ
ತಮ್ಮ ಸೇವಕರನ್ನು
ಅಗ್ನಿಜ್ವಾಲೆಯನ್ನಾಗಿಯೂ
ಮಾಡುತ್ತಾರೆ,”
ಎಂದು ಹೇಳಿದ್ದಾರೆ.
8 : ತಮ್ಮ ಪುತ್ರನನ್ನು ಕುರಿತಾದರೋ:
“ದೇವಾ, ನಿನ್ನ ಸಿಂಹಾಸನವು ಶಾಶ್ವತವಾದುದು;
ನ್ಯಾಯದಂಡವೇ ನಿನ್ನ ರಾಜದಂಡವಾಗಿದೆ.
9 : ನ್ಯಾಯನೀತಿಗಳನ್ನು ನೀನು ಪ್ರೀತಿಸಿದೆ
ಅನ್ಯಾಯ, ಅಕ್ರಮಗಳನ್ನು ದ್ವೇಷಿಸಿದೆ.
ಆದ್ದರಿಂದ ದೇವರು, ಹೌದು ನಿನ್ನ ದೇವರು
ನಿನ್ನನ್ನು ನಿನ್ನ ಮಿತ್ರರಿಗಿಂತ ಮಿಗಿಲಾಗಿ
ಸನ್ಮಾನಿಸಿ
ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾರೆ,”
ಎಂದು ಹೇಳಿದ್ದಾರೆ.
10 : ಇದಲ್ಲದೆ,
“ಸರ್ವೇಶ್ವರಾ, ಆದಿಯಲ್ಲಿ ನೀ
ಭೂಮಿಯನು ಸೃಜಿಸಿದೆ
ನಭ ಮಂಡಲದಲ್ಲಿ ನಿನ್ನ ಕೈಚಳಕವ ತೋರಿದೆ.
11 : ಇವುಗಳೆಲ್ಲವೂ ಅಳಿಯುತ್ತವೆ
ನೀನಾದರೋ ಸದಾ ಉಳಿಯುವೆ.
ಹಳತಾಗುವುವು ಇವೆಲ್ಲಾ ಬಟ್ಟೆಬರೆಯಂತೆ.
12 : ಮುದುರಿ ಮೂಲೆಗೆಸೆಯುವೆ ಇವನ್ನು
ಮೇಲಂಗಿಯಂತೆ.
ಬದಲಾಯಿಸುವೆ ನೀ ಅವನ್ನು ಉಡುಪಿನಂತೆ
ನೀನಾದರೋ ಬದಲಾಗದೆ ಇರುವೆ
ಮೊದಲಿನಂತೆ.
ಮುಗಿವೇ ಇರದು ನಿನ್ನ ಬಾಳುವೆಗೆ,”
ಎಂದೂ ಸಹ ದೇವರು ನುಡಿದಿದ್ದಾರೆ.
13 : ಯಾವ ದೇವದೂತನಿಗಾದರೂ ದೇವರು,
“ನಿನ್ನ ಶತ್ರುಗಳನ್ನು ನಾನು ನಿನ್ನ
ಪಾದದಡಿ ಹಾಕುವತನಕ
ನನ್ನ ಬಡಗಡೆಯಲ್ಲಿ ಆಸೀನನಾಗಿರು,”
ಎಂದು ಎಂದಾದರೂ ಹೇಳಿದ್ದುಂಟೇ?
14 : ದೂತರೆಲ್ಲರೂ ಕೇವಲ ಸೇವೆಮಾಡುವ ಆತ್ಮಗಳಲ್ಲವೇ? ಜೀವೋದ್ಧಾರವನ್ನು ಬಾಧ್ಯವಾಗಿ ಹೊಂದಬೇಕಾದವರ ಊಳಿಗಕ್ಕಾಗಿ ಕಳುಹಿಸಲಾದವರಲ್ಲವೇ?