1 : ಅಂತಿಮ ದಿನಗಳು ಕಷ್ಟಕರವಾದ ಕಾಲವಾಗಿರುತ್ತದೆಂಬುದನ್ನು ಜ್ಞಾಪಕದಲ್ಲಿಡು.
2 : ಜನರು ಸ್ವಾರ್ಥಚಿಂತಕರೂ ಲೋಭಿಗಳೂ ಅಹಂಕಾರಿಗಳೂ ಬಡಾಯಿಕೋರರೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಘ್ನರೂ ಭಕ್ತಿಹೀನರೂ ಆಗುವರು.
3 : ಅವರು ಮಮತೆ ಇಲ್ಲದವರೂ ಸಮಾಧಾನ ಸಹಿಸದವರೂ ಚಾಡಿಕೋರರೂ ಸ್ವೇಚ್ಛಾವರ್ತಿಗಳೂ ಕ್ರೂರಿಗಳೂ ಒಳಿತನ್ನು ದ್ವೇಷಿಸುವವರೂ ಆಗುವರು.
4 : ನಂಬಿಕೆ ದ್ರೋಹಿಗಳೂ ದುಡುಕುವವರೂ ಮಹಾಗರ್ವಿಗಳೂ ಆಗುವರು. ದೇವರನ್ನು ಅರಸದೆ ಭೋಗಗಳನ್ನೇ ಬಯಸುವರು.
5 : ಅವರು ಭಕ್ತಿಯ ವೇಷ ಧರಿಸಿದ್ದರೂ ಅದರ ನಿಜವಾದ ಶಕ್ತಿಯನ್ನು ಅಲ್ಲಗಳೆಯುವರು. ಇಂಥವರ ಸಹವಾಸ ನಿನಗೆ ಬೇಡ.
6 : ಇವರಲ್ಲಿ ಕೆಲವರು ಮನೆಮನೆಗಳಿಗೆ ನುಸುಳಿ ನಾನಾ ಪಾಪಗಳಿಂದಲೂ ಕಾಮನೆಗಳಿಂದಲೂ ಕೂಡಿರುವ ಮತಿಗೆಟ್ಟ ಮಹಿಳೆಯರನ್ನು ವಶಪಡಿಸಿಕೊಳ್ಳುವರು.
7 : ಆ ಮಹಿಳೆಯರಾದರೋ ಯಾರಿಗೆ ಬೇಕಾದರೂ ಕಿವಿಗೊಡುವರು. ಸತ್ಯವನ್ನು ಮಾತ್ರ ಮನಗಾಣರು.
8 : ಯನ್ನ ಮತ್ತು ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆ, ಇವರು ಸತ್ಯವನ್ನು ಪ್ರತಿಭಟಿಸುತ್ತಾರೆ.
9 : ದುರ್ಮತಿಗಳೂ ವಿಶ್ವಾಸಭ್ರಷ್ಟರೂ ಆಗಿದ್ದಾರೆ. ಆದರೆ ಅವರ ಮೂರ್ಖತನ ದೀರ್ಘಕಾಲ ಬಾಳದು. ಯನ್ನ ಮತ್ತು ಯಂಬ್ರಳ ದೋಷದಂತೆ ಅದು ಸರ್ವರಿಗೂ ಬಟ್ಟಬಯಲಾಗುತ್ತದೆ.
10 : ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ.
11 : ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟ ದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು.
12 : ಕ್ರಿಸ್ತ ಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ.
13 : ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ.
14 : ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು.
15 : ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ.
16 : ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ.
17 : ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.