1 : ಪ್ರಿಯ ಪುತ್ರನೇ, ಕ್ರಿಸ್ತ ಯೇಸುವಿನಲ್ಲಿರುವವರಿಗೆ ಲಭಿಸುವ ಅನುಗ್ರಹದಲ್ಲಿ ನೀನು ದೃಢನಾಗಿರು.
2 : ಹಲವರ ಮುಂದೆ ನಾನು ಮಾಡಿದ ಉಪದೇಶವನ್ನು ನೀನೇ ಕೇಳಿದ್ದೀ. ಅದೇ ಉಪದೇಶವನ್ನು ಇತರರಿಗೂ ಬೋಧಿಸಲು ಪ್ರಾಮಾಣಿಕ ವ್ಯಕ್ತಿಗಳನ್ನು ನೇಮಿಸು.
3 : ಕ್ರಿಸ್ತಯೇಸುವಿನ ನಿಷ್ಠಾವಂತ ಸೈನಿಕನಂತೆ ಕಷ್ಟ ದುಃಖಗಳನ್ನು ತಾಳ್ಮೆಯಿಂದ ಸಹಿಸಿಕೋ.
4 : ಯುದ್ಧಕ್ಕೆ ಹೋಗುವ ಯಾವ ಸೈನಿಕನೂ ಲೋಕವ್ಯವಹಾರಗಳಲ್ಲಿ ಸಿಕ್ಕಿಕೊಳ್ಳನು. ಏಕೆಂದರೆ, ತನ್ನನ್ನು ಸೈನ್ಯಕ್ಕೆ ಸೇರಿಸಿಕೊಂಡವನನ್ನು ಮೆಚ್ಚಿಸಲು ಅವನು ಪ್ರಯತ್ನಿಸುತ್ತಾನೆ.
5 : ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟು ಅದರ ನಿಯಮಗಳನ್ನು ಪಾಲಿಸದಿದ್ದರೆ ಬಹುಮಾನಗಳಿಸಲು ಸಾಧ್ಯವಿಲ್ಲ.
6 : ವ್ಯವಸಾಯದ ಹುಟ್ಟುವಳಿಯಲ್ಲಿ ಮೊತ್ತಮೊದಲನೆಯ ಪಾಲು ಕಷ್ಟಪಟ್ಟ ರೈತನಿಗಲ್ಲವೇ?
7 : ನಾನು ಹೇಳುತ್ತಿರುವುದನ್ನು ಆಲೋಚಿಸಿ ನೋಡು; ಇದೆಲ್ಲವನ್ನು ಚೆನ್ನಾಗಿ ಗ್ರಹಿಸಲು ಪ್ರಭು ನಿನಗೆ ನೆರವಾಗುವರು.
8 : ಕ್ರಿಸ್ತಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ.
9 : ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ.
10 : ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ.
11 : ಈ ಮಾತು ನಂಬತಕ್ಕದ್ದಾಗಿದೆ:
12 : ನಾವು ಆತನೊಡನೆ ಸತ್ತಿದ್ದರೆ,
ಆತನೊಡನೆ ಜೀವಿಸುತ್ತೇವೆ;
ಸೈರಣೆಯುಳ್ಳವರು ನಾವಾದರೆ,
ಆತನೊಡನೆ ರಾಜ್ಯವಾಳುತ್ತೇವೆ;
ನಾವಾತನನು ನಿರಾಕರಿಸಿದರೆ,
ನಮ್ಮನ್ನಾತನು ನಿರಾಕರಿಸುತ್ತಾನೆ.
13 : ನಾವು ವಿಶ್ವಾಸಭ್ರಷ್ಟರಾದರೂ
ವಿಶ್ವಾಸಪಾತ್ರನಾತ;
ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ.
14 : ಈ ವಿಷಯಗಳನ್ನು ನಿನ್ನ ಸಭೆಯವರಿಗೆ ಜ್ಞಾಪಕಪಡಿಸು. ವ್ಯರ್ಥವಾದ ವಾಗ್ವಾದಗಳನ್ನು ನಿಲ್ಲಿಸಬೇಕೆಂದು ಅವರನ್ನು ದೇವರ ಮುಂದೆ ಖಂಡಿತವಾಗಿ ಎಚ್ಚರಿಸು. ಇಂಥ ವಾಗ್ವಾದಗಳಿಂದ ಕೇಳುವವರಿಗೆ ಕೇಡಾಗುವುದೇ ಹೊರತು ಒಳಿತೇನೂ ಆಗದು.
15 : ನೀನಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ ಬಾಳಲು ಪ್ರಯತ್ನಪಡು.
16 : ಪ್ರಾಪಂಚಿಕ ಹರಟೆಗಳಿಂದ ದೂರವಿರು. ಅವುಗಳಲ್ಲಿ ಕಾಲಹರಣ ಮಾಡುವವರು ದೇವರಿಂದ ದೂರಸರಿಯುತ್ತಾರೆ.
17 : ಅವರ ಮಾತು ರಾಜಹುಣ್ಣಿನಂತೆ ಹರಡಿಕೊಳ್ಳುತ್ತದೆ. ಹುಮೆನಾಯ ಮತ್ತು ಫಿಲೇತ ಇಂಥವರ ಗುಂಪಿಗೆ ಸೇರಿದ್ದಾರೆ.
18 : ಅವರು ಸತ್ಯಮಾರ್ಗವನ್ನು ತ್ಯಜಿಸಿದ್ದಾರಲ್ಲದೆ ನಮ್ಮ ಪುನರುತ್ಥಾನವು ಈಗಾಗಲೇ ಮುಗಿದು ಹೋಗಿದೆಯೆಂದು ಹೇಳುತ್ತಾ ಕೆಲವರ ವಿಶ್ವಾಸವನ್ನು ಕೆಡಿಸುತ್ತಿದ್ದಾರೆ.
19 : ಆದರೆ ದೇವರು ಹಾಕಿದಂಥ ಸುಸ್ಥಿರವಾದ ಅಸ್ತಿವಾರವನ್ನು ಯಾರಿಂದಲೂ ಕದಲಿಸಲಾಗದು. ಅದರಲ್ಲಿ “ತನ್ನವರು ಯಾರು ಎಂದು ಪ್ರಭು ಅರಿತಿದ್ದಾರೆ; ಮತ್ತು ತಾನು ಪ್ರಭುವಿನವನೆಂದು ಹೇಳಿಕೊಳ್ಳುವವರೆಲ್ಲರೂ ದುರ್ಮಾರ್ಗದಿಂದ ದೂರವಿರಲಿ,” ಎಂದು ಲಿಖಿತವಾಗಿದೆ.
20 : ದೊಡ್ಡ ಮನೆಯಲ್ಲಿ ಬೆಳ್ಳಿಬಂಗಾರದ ಪಾತ್ರೆಗಳಲ್ಲದೆ ಮರದ ಹಾಗೂ ಮಣ್ಣಿನ ಪಾತ್ರೆಗಳೂ ಇರುತ್ತವೆ. ಇವುಗಳಲ್ಲಿ ಕೆಲವು ಉತ್ತಮ ಬಳಕೆಗೂ ಇನ್ನೂ ಕೆಲವು ಸಾಮಾನ್ಯ ಬಳಕೆಗೂ ಬರುವುದುಂಟು.
21 : ಹೀಗಿರಲಾಗಿ, ಒಬ್ಬನು ಕೀಳುತನದಿಂದ ತನ್ನನ್ನು ತಾನೇ ಶುದ್ಧೀಕರಿಸಿಕೊಂಡರೆ, ಅವನು ಉತ್ತಮ ಬಳಕೆಗೆ ಯೋಗ್ಯನಾಗುತ್ತಾನೆ. ಅಂಥವನು ದೇವರ ಸೇವೆಗೆ ವಿೂಸಲಾಗುತ್ತಾನೆ, ಯಜಮಾನನಿಗೆ ಉಪಯುಕ್ತನಾಗುತ್ತಾನೆ. ಸತ್ಕಾರ್ಯಗಳನ್ನು ಕೈಗೊಳ್ಳಲು ಸಿದ್ಧನಾಗಿರುತ್ತಾನೆ.
22 : ನೀನು ಯೌವನದ ಭಾವೋದ್ರೇಕಗಳಿಗೆ ತುತ್ತಾಗದೆ ಧರ್ಮ, ವಿಶ್ವಾಸ, ಪ್ರೀತಿ ಮತ್ತು ಶಾಂತಿ - ಇವುಗಳನ್ನು ರೂಢಿಸಿಕೋ. ಈ ದಿಸೆಯಲ್ಲಿ ಶುದ್ಧ ಹೃದಯದಿಂದ ದೇವರನ್ನು ಅರಸುವವನು ನಿನಗೆ ಆದರ್ಶವಾಗಿರಲಿ.
23 : ಮೂರ್ಖ ಹಾಗೂ ಅನರ್ಥ ವಾಗ್ವಾದಗಳು ಜಗಳಕ್ಕೆ ಕಾರಣಗಳು. ಅವುಗಳ ಗೊಡವೆ ನಿನಗೆ ಬೇಡ.
24 : ಪ್ರಭುವಿನ ಶರಣನಿಗೆ ಜಗಳ ಸಲ್ಲದು. ಆತನು ಎಲ್ಲರೊಡನೆ ಸೌಹಾರ್ದದಿಂದ ನಡೆದುಕೊಳ್ಳಬೇಕು.
25 : ಬೋಧನೆಯಲ್ಲಿ ಪ್ರವೀಣನೂ ಕೇಡನ್ನು ಸಹಿಸದವನೂ ವಿರೋಧಿಗಳನ್ನು ತಾಳ್ಮೆಯಿಂದ ತಿದ್ದುವವನೂ ಆಗಿರಬೇಕು. ಆ ವಿರೋಧಿಗಳು ಪಶ್ಚಾತ್ತಾಪಪಟ್ಟು ಸನ್ಮಾರ್ಗವನ್ನು ಹಿಡಿಯುವಂತೆ ದೇವರು ಅವರಿಗೆ ಅನುಗ್ರಹಿಸಬಹುದು.
26 : ಸೈತಾನನ ಬಲೆಯಲ್ಲಿ ಸಿಕ್ಕಿಕೊಂಡು ಅವನ ಇಚ್ಛಾನುಸಾರ ನಡೆಯುವವರು ಹೀಗೆ ಬಿಡುಗಡೆ ಹೊಂದಲು ಸಾಧ್ಯವಾಗಬಹುದು.