Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಥೆಸ


1 : ಕೊನೆಯದಾಗಿ ಸಹೋದರರೇ, ನಮಗಾಗಿಯೂ ಪ್ರಾರ್ಥನೆಮಾಡಿ; ಪ್ರಭುವಿನ ಸಂದೇಶ ನಿಮ್ಮಲ್ಲಿ ಹಬ್ಬಿಹರಡಿದಂತೆ ಎಲ್ಲೆಲ್ಲಿಯೂ ಪಸರಿಸಿ ಪ್ರಖ್ಯಾತವಾಗಲಿ.
2 : ದುಷ್ಟರ ಹಾಗೂ ಕೆಡುಕರ ಬಲೆಗೆ ನಾವು ಬೀಳದಂತೆ ಪ್ರಾರ್ಥಿಸಿರಿ. ಏಕೆಂದರೆ, ವಿಶ್ವಾಸವೆಂಬುದು ಎಲ್ಲರಲ್ಲಿಯೂ ಇರುವುದಿಲ್ಲ.
3 : ಪ್ರಭು ವಿಶ್ವಾಸಕ್ಕೆ ಪಾತ್ರರು. ಅವರು ನಿಮ್ಮನ್ನು ಸದೃಢರನ್ನಾಗಿ ಮಾಡಿ ಕೇಡಿನಿಂದ ನಿಮ್ಮನ್ನು ಕಾಪಾಡುವರು.
4 : ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ.
5 : ದೇವರ ಪ್ರೀತಿಯನ್ನೂ ಕ್ರಿಸ್ತಯೇಸುವಿನ ಸಹನೆಯನ್ನೂ ನೀವು ಕಲಿತುಕೊಳ್ಳುವಂತೆ, ಪ್ರಭುವೇ ನಿಮ್ಮ ಅಂತರಂಗವನ್ನು ಬೆಳಗಿಸಲಿ.
6 : ಪ್ರಿಯ ಸಹೋದರರೇ, ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ; ನಾವು ನಿಮಗೆ ಬೋಧಿಸಿದ ಸದಾಚಾರವನ್ನು ಪಾಲಿಸದೆ, ಮೈಗಳ್ಳತನದಿಂದ ದಿನಗಳೆಯುವ ಯಾವ ಸೋದರನೊಂದಿಗೂ ಸಂಪರ್ಕವಿಟ್ಟುಕೊಳ್ಳಬೇಡಿ.
7 : ನಾವು ಹೇಗೆ ನಡೆದುಕೊಂಡೆವೊ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ.
8 : ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ.
9 : ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು.
10 : ನಾವು ನಿಮ್ಮೊಡನಿದ್ದಾಗ, “ದುಡಿಯಲೊಲ್ಲದವನು ಉಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.
11 : ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದು ಬಂದಿದೆ.
12 : ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.
13 : ನೀವಾದರೋ ಸಹೋದರರೇ, ಸತ್ಕಾರ್ಯದ ಸಾಧನೆ ಸಾಕಾಯಿತೆಂದು ಹೇಳದಿರಿ.
14 : ಈ ಪತ್ರದ ಮೂಲಕ ನಾವು ಹೇಳಿರುವ ಮಾತನ್ನು ಯಾರಾದರೂ ಕೇಳದಿದ್ದರೆ, ಅಂಥವನನ್ನು ಗುರುತಿಸಿ ಅವನ ಸಹವಾಸವನ್ನೇ ತೊರೆದುಬಿಡಿ. ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.
15 : ಆದರೂ ಅವನನ್ನು ಶತ್ರುವೆಂದು ಭಾವಿಸದೆ, ಸಹೋದರನಂತೆ ಕಂಡು, ಬುದ್ಧಿಹೇಳಿರಿ.
16 : ಶಾಂತಿದಾತರಾದ ಪ್ರಭು ಎಲ್ಲ ಕಾಲಕ್ಕೂ ಎಲ್ಲ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭು ನಿಮ್ಮೆಲ್ಲರೊಡನೆ ಇರಲಿ !
17 : ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದಲೇ ಇದನ್ನು ಬರೆಯುತ್ತಿದ್ದೇನೆ. ನನ್ನ ಪ್ರತಿ ಪತ್ರಕ್ಕೂ, ನಾನು ಹಾಕುವ ಸಹಿ ಹಾಗೂ ನಾನು ಬರೆಯುವ ಧಾಟಿ ಇದೇ. ನಿಮಗೆ ನನ್ನ ಶುಭಾಶಯಗಳು !
18 : ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೆಲ್ಲರೊಡನೆ ಇರಲಿ !

· © 2017 kannadacatholicbible.org Privacy Policy