Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಥೆಸ


1 : ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ;
2 : ಪ್ರಭುವಿನ ದಿನವು ಬಂದೇಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ.
3 : ನಿಮ್ಮನ್ನು ಯಾರೂ ಯಾವ ರೀತಿಯಲ್ಲೂ ವಂಚಿಸದಿರಲಿ. ಆ ದಿನವು ಬರುವುದಕ್ಕೆ ಮುಂಚೆ ದೇವರಿಗೆ ವಿರುದ್ಧವಾದ ‘ಅಂತಿಮ ಪ್ರತಿಭಟನೆ’ ಉಂಟಾಗುವುದು. ‘ಪಾಪ ಪುರುಷನಾದ’ ಅಧರ್ಮಿ ತಲೆ ಎತ್ತಿಕೊಳ್ಳುವನು.
4 : ದೇವರೆನಿಸಿಕೊಳ್ಳುವ ಎಲ್ಲವನ್ನೂ ಅಲ್ಲಗಳೆಯುವನು; ಆರಾಧನೆಗೈಯುವ ಎಲ್ಲವನ್ನೂ ಇಲ್ಲಗೊಳಿಸುವನು; ಇವೆಲ್ಲಕ್ಕೂ ತಾವೇ ಮಿಗಿಲೆಂದು ಭಾವಿಸಿ ದೇವಮಂದಿರದಲ್ಲಿ ಕುಳಿತುಕೊಂಡು ತಾನೇ ದೇವರೆಂದು ಘೋಷಿಸಿಕೊಳ್ಳುವನು.
5 : ನಾನು ನಿಮ್ಮೊಡನೆ ಇದ್ದಾಗಲೇ ಇದೆಲ್ಲವನ್ನು ತಿಳಿಸಿದ ನೆನಪು ನಿಮಗಿಲ್ಲವೇ?
6 : ನಿಯಮಿತ ಕಾಲಕ್ಕೆ ಮುಂಚೆ ಕಾಣಿಸಿಕೊಳ್ಳದಂತೆ ಅವನನ್ನು ತಡೆಹಿಡಿದಿರುವುದು ಯಾವುದೆಂದು ನೀವು ಬಲ್ಲಿರಿ.
7 : ಅಧರ್ಮವು ಈಗಾಗಲೇ ಗುಪ್ತವಾಗಿ ತನ್ನ ಕೆಲಸವನ್ನು ಸಾಧಿಸುತ್ತಿದೆ; ತಡೆಗಟ್ಟಿರುವವನು ದಾರಿ ಬಿಡುವ ತನಕ ಅದು ಗುಪ್ತವಾಗಿಯೇ ಇರುವುದು.
8 : ಆಮೇಲೆ ಆ ಅಧರ್ಮಿ ಕಾಣಿಸಿಕೊಳ್ಳುವನು. ಅವನನ್ನು ಪ್ರಭು ಯೇಸು ತಮ್ಮ ಬಾಯುಸಿರಿನಿಂದಲೇ ಕೊಂದುಹಾಕುವರು; ತಮ್ಮ ಪ್ರತ್ಯಕ್ಷತೆಯ ತೇಜಸ್ಸಿನಿಂದಲೇ ತರಿದು ಬಿಡುವರು.
9 : ಆ ಅಧರ್ಮಿ ಸೈತಾನನ ಶಕ್ತಿಯೊಂದಿಗೆ ಬರುವನು. ಮೋಸಗೊಳಿಸುವ ಎಲ್ಲಾ ಬಗೆಯ ಪವಾಡಗಳನ್ನು, ಚಮತ್ಕಾರಗಳನ್ನು ಮತ್ತು ಶಕ್ತಿಯುತ ಕಾರ್ಯಗಳನ್ನು ಮಾಡಿತೋರಿಸುವನು.
10 : ಸತ್ಯವನ್ನು ಪ್ರೀತಿಸದೆ, ಜೀವೋದ್ಧಾರವನ್ನು ನಿರಾಕರಿಸಿ, ವಿನಾಶದ ಮಾರ್ಗದಲ್ಲಿರುವವರನ್ನು ಎಲ್ಲಾ ತರಹದ ಕುಯುಕ್ತಿಯಿಂದ ಅವನು ವಂಚಿಸುವನು.
11 : ಆದಕಾರಣ, ಅಸತ್ಯವನ್ನು ನಂಬುವಂಥ ಗಾಢಭ್ರಮೆಗೆ ದೇವರು ಅವರನ್ನು ಒಳಪಡಿಸುವರು.
12 : ಹೀಗೆ ಸತ್ಯವನ್ನು ವಿಶ್ವಾಸಿಸದೆ, ಅಧರ್ಮದಲ್ಲಿ ಆನಂದಿಸುವವರೆಲ್ಲರೂ ಖಂಡನೆಗೆ ಗುರಿಯಾಗುವರು.
13 : ಸಹೋದರರೇ, ಪ್ರಭುವಿಗೆ ಪ್ರಿಯರಾದವರೇ, ನಿಮಗಾಗಿ ನಿರಂತರವೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾವು ಬದ್ಧರು. ಏಕೆಂದರೆ, ದೇವರು ನಿಮ್ಮನ್ನು ಪವಿತ್ರಾತ್ಮರ ಮುಖಾಂತರ ಪಾವನಗೊಳಿಸಿ, ನೀವು ಸತ್ಯದಲ್ಲಿ ವಿಶ್ವಾಸವಿಡುವಂತೆ ಮಾಡಿ, ಜೀವೋದ್ಧಾರವನ್ನು ಪಡೆಯುವಂತೆ ನಿಮ್ಮನ್ನು ಪ್ರಥಮ ಫಲವನ್ನಾಗಿ ಆರಿಸಿಕೊಂಡಿದ್ದಾರೆ.
14 : ಹೀಗೆ ಉದ್ಧಾರಹೊಂದಿ ನಮ್ಮ ಪ್ರಭು ಯೇಸುಕ್ರಿಸ್ತರ ಮಹಿಮೆಯಲ್ಲಿ ನೀವು ಸಹ ಪಾಲುಗೊಳ್ಳುವಂತೆ, ನಾವು ಸಾರಿದ ಶುಭಸಂದೇಶದ ಮೂಲಕ ದೇವರು ನಿಮ್ಮನ್ನು ಕರೆದಿದ್ದಾರೆ.
15 : ಆದ್ದರಿಂದ ಸಹೋದರರೇ, ನಾವು ನಿಮಗೆ ಬಾಯಿ ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ಬೋಧಿಸಿರುವ ಸತ್‍ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾ ಸ್ಥಿರವಾಗಿ ನಿಲ್ಲಿರಿ.
16 : ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ.

· © 2017 kannadacatholicbible.org Privacy Policy