Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ತಿಮೊಥೇಯ


1 : ದಾಸ್ಯದಲ್ಲಿರುವವರು ತಮ್ಮ ಯಜಮಾನರನ್ನು ಎಲ್ಲಾ ವಿಧದಲ್ಲೂ ಗೌರವಿಸಬೇಕು. ಇಲ್ಲದಿದ್ದರೆ, ದೇವರ ಹೆಸರಿಗೂ ನಮ್ಮ ಬೋಧನೆಗೂ ಕಳಂಕವುಂಟಾಗುತ್ತದೆ.
2 : ಒಂದು ವೇಳೆ ಯಜಮಾನರು ಕ್ರೈಸ್ತವಿಶ್ವಾಸಿಗಳಾಗಿದ್ದರೆ ತಮ್ಮ ಯಜಮಾನರು ಸಹೋದರ ವರ್ಗದವರು ಎಂದು ಉದಾಸೀನ ಮಾಡಬಾರದು. ಬದಲಿಗೆ ಹೆಚ್ಚಿನ ಉತ್ಸಾಹದಿಂದ ಸೇವೆ ಸಲ್ಲಿಸಬೇಕು. ಏಕೆಂದರೆ, ಅವರ ಸೇವೆಯ ಪ್ರಯೋಜನವನ್ನು ಪಡೆಯುತ್ತಿರುವ ಯಜಮಾನರು, ಕ್ರೈಸ್ತ ವಿಶ್ವಾಸಿಗಳೂ ಪ್ರೀತಿಗೆ ಪಾತ್ರರಾದವರು. ಈ ವಿಷಯಗಳ ಬಗ್ಗೆ ಆಜ್ಞಾಪೂರ್ವಕವಾಗಿ ಬೋಧಿಸು.
3 : ಯಾರಾದರೂ ನಮ್ಮ ಧಾರ್ಮಿಕ ಉಪದೇಶವನ್ನು ಅನುಸರಿಸದೆ, ಪ್ರಭು ಯೇಸುಕ್ರಿಸ್ತರ ನೈಜ ಬೋಧನೆಯನ್ನು ಒಪ್ಪಿಕೊಳ್ಳದೆ ಭಿನ್ನ ಬೋಧನೆಯನ್ನು ಮಾಡುವುದಾದರೆ, ಅಂಥವನು ಅಹಂಭಾವಿ ಹಾಗೂ ಅಜ್ಞಾನಿಯೇ ಸರಿ.
4 : ಅಂಥವನಿಗೆ ಒಣ ವಾಗ್ವಾದಗಳಲ್ಲಿ ಮತ್ತು ಬರಡು ಮಾತುಗಳಲ್ಲಿ ಬಲು ಹಂಬಲ. ಇವುಗಳು ಅಸೂಯೆ, ಕಲಹ, ದೂಷಣೆ, ಅನುಮಾನ ಮತ್ತು ಕಚ್ಚಾಟಗಳಿಗೆ ಎಡೆಕೊಡುತ್ತವೆ.
5 : ಮತಿಗೆಟ್ಟ ಅಂಥವರಲ್ಲಿ ಸತ್ಯವೆಂಬುದು ಇರದು. ಧಾರ್ಮಿಕ ಸೇವೆಯು ಧನಗಳಿಕೆಯ ಸಾಧನವೆಂದೇ ಇವರ ನಂಬಿಕೆ.
6 : ಇರುವುದರಲ್ಲೇ ಸಂತೃಪ್ತನಾಗಿರುವವನು ಭಕ್ತಿಯಲ್ಲಿ ನಿಜಕ್ಕೂ ಶ್ರೀಮಂತನಾಗಿರುತ್ತಾನೆ.
7 : ಹುಟ್ಟಿದಾಗ ನಾವು ಈ ಲೋಕಕ್ಕೆ ಏನನ್ನೂ ತರಲಿಲ್ಲ; ಸಾಯುವಾಗ ಏನನ್ನೂ ಕೊಂಡು ಒಯ್ಯುವುದಿಲ್ಲ.
8 : ನಮಗೆ ಊಟ, ಬಟ್ಟೆ ಇದ್ದರೆ ಅಷ್ಟೇ ಸಾಕು.
9 : ಐಶ್ವರ್ಯವಂತರಾಗಬೇಕೆಂದು ಆಶಿಸುವವರು ಅನೇಕ ಪ್ರಲೋಭನೆಗಳಿಗೆ ಒಳಗಾಗುತ್ತಾರೆ. ನಿರರ್ಥಕವೂ ಹಾನಿಕರವೂ ಆದ ಆಶಾಪಾಶಗಳಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ದುರಾಶೆಗಳು ಮನುಷ್ಯರನ್ನು ಕೇಡಿಗೂ ವಿನಾಶಕ್ಕೂ ಒಯ್ಯುತ್ತವೆ.
10 : ಹಣದ ವ್ಯಾಮೋಹವೇ ಎಲ್ಲಾ ಕೇಡುಗಳಿಗೂ ಮೂಲ. ಹಣದ ವ್ಯಾಮೋಹದಿಂದಲೇ ಹಲವರು ವಿಶ್ವಾಸದಿಂದ ದೂರ ಸರಿದು, ತಮ್ಮ ಹೃದಯಗಳನ್ನು ಹಲತರದ ತಿವಿತಗಳಿಗೆ ಗುರಿ ಮಾಡುತ್ತಾರೆ.
11 : ದೇವರ ಭಕ್ತನಾದ ನೀನು ಈ ಎಲ್ಲಾ ಕೇಡುಗಳಿಂದ ದೂರವಿರು. ದೇವರೊಡನೆ ಸತ್ಸಂಬಂಧ, ಭಕ್ತಿ, ವಿಶ್ವಾಸ, ಪ್ರೀತಿ, ಸ್ಥಿರಚಿತ್ತ, ಸಾತ್ವಿಕತೆ - ಇವೇ ಮೊದಲಾದ ಸದ್ಗುಣಗಳನ್ನು ಸಂಪಾದಿಸಲು ಪ್ರಯತ್ನಿಸು.
12 : ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸಪ್ರಮಾಣ ಮಾಡಿರುವೆ.
13 : ಸಕಲ ಸೃಷ್ಟಿಗೂ ಜೀವದಾತರಾದ ದೇವರ ಸನ್ನಿಧಿಯಲ್ಲಿ ಪೊಂತಿಯ ಪಿಲಾತನ ಮುಂದೆ ಸೂಕ್ತ ಸಾಕ್ಷಿ ನೀಡಿದ ಪ್ರಭು ಯೇಸುವಿನ ಸನ್ನಿಧಿಯಲ್ಲಿ ನಾನು ಆಜ್ಞಾಪಿಸುವುದೇನೆಂದರೆ:
14 : ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷರಾಗುವ ತನಕ ಯಾವ ದೋಷಾರೋಪಣೆಗೂ ಎಡೆಗೊಡದೆ ಈ ಕಟ್ಟಳೆಗಳೆಲ್ಲವನ್ನೂ ಪ್ರಾಮಾಣಿಕತೆಯಿಂದ ಅನುಸರಿಸು:
15 : ಸೂಕ್ತಕಾಲದಲ್ಲಿ ಕ್ರಿಸ್ತಯೇಸುವನು ಪ್ರತ್ಯಕ್ಷಪಡಿಸುವನು ಪರಮ ದೇವನು. ಆ ದೇವನು ಪರಮಾನಂದನು ಏಕಾಧಿಪತಿ, ರಾಜಾಧಿರಾಜನು ಒಡೆಯರಿಗೆಲ್ಲಾ ಒಡೆಯನು, ಅಮರನು ಅಗಮ್ಯ ಜ್ಯೋತಿಯಲ್ಲಿ ವಾಸಿಸುವವನು.
16 : ಆತನನು ಕಂಡವರಾರೂ ಇಲ್ಲ ಕಾಣಬಲ್ಲವರಾರೂ ಇಲ್ಲ. ಆತನೊಬ್ಬನಿಗೆ ಮಹಿಮೆಯೂ ಗೌರವವೂ ಪ್ರಭುತ್ವವೂ ಸಲ್ಲಲಿ ಎಂದೆಂದಿಗೂ, ಆಮೆನ್.
17 : ಈ ಲೋಕದ ಐಶ್ವರ್ಯವಂತರು ಅಹಂಕಾರಿಗಳಾಗಬಾರದೆಂದು ಎಚ್ಚರಿಸು. ಅವರು ಅಳಿದು ಹೋಗುವ ಆಸ್ತಿಯ ಮೇಲೆ ಭರವಸೆ ಇಡದೆ, ನಮ್ಮ ಸಂತೋಷಕ್ಕಾಗಿ ಸಮಸ್ತವನ್ನೂ ಧಾರಾಳವಾಗಿ ದಯಪಾಲಿಸುವ ದೇವರಲ್ಲೇ ಭರವಸೆಯಿಡುವಂತೆ ಅವರಿಗೆ ಆಜ್ಞಾಪಿಸು.
18 : ಅವರು ಸದ್ಗುಣಶೀಲರಾಗಬೇಕು, ಸತ್ಕಾರ್ಯಗಳನ್ನು ಮಾಡುವುದರಲ್ಲಿ ಶ್ರೀಮಂತರಾಗಿರಬೇಕು. ದಾನಶೀಲರೂ ಇತರರೊಂದಿಗೆ ಪಾಲು ಹಂಚಿಕೊಳ್ಳುವವರೂ ಪರೋಪಕಾರಿಗಳೂ ಆಗಿರಬೇಕು.
19 : ಹೀಗೆ, ಅವರು ತಮ್ಮ ಭವಿಷ್ಯ ಜೀವನಕ್ಕೆ ಭದ್ರವಾದ ಬುನಾದಿಯಾಗಬಲ್ಲ ನಿಧಿಯನ್ನು ಕೂಡಿಸಿಕೊಳ್ಳಬೇಕೆಂದು ವಿಧಿಸು. ಆಗ ಅವರು ಶಾಶ್ವತ ಜೀವವನ್ನು ಪಡೆಯುವರು.
20 : ಪ್ರಿಯ ತಿಮೊಥೇಯನೇ, ನಿನ್ನ ವಶಕ್ಕೆ ಕೊಡಲಾಗಿರುವ ಸದ್ಭೋಧನೆಯನ್ನು ಸುರಕ್ಷಿತವಾಗಿ ಕಾಪಾಡಿಕೋ. ಪ್ರಾಪಂಚಿಕ ವ್ಯರ್ಥ ಸಂಭಾಷಣೆಗಳಿಂದಲೂ ‘ಜ್ಞಾನಿ’ಗಳೆಂದು ತಪ್ಪಾಗಿ ಕೊಚ್ಚಿಕೊಳ್ಳುವವರ ವಾಗ್ವಾದಗಳಿಂದಲೂ ದೂರವಿರು.
21 : ಕೆಲವರು ಇಂಥ ಕಪಟಜ್ಞಾನವನ್ನು ಅವಲಂಬಿಸಿ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ದೇವರ ಅನುಗ್ರಹ ನಿಮ್ಮಲ್ಲಿರಲಿ !

· © 2017 kannadacatholicbible.org Privacy Policy