1 : ಹಿರಿಯರನ್ನು ಗದರಿಸಬೇಡ; ಅವರನ್ನು ತಂದೆಯಂತೆ ಭಾವಿಸಿ ಗೌರವದಿಂದ ತಿಳುವಳಿಕೆ ನೀಡು. ಯುವಕರೊಡನೆ ಸೋದರಭಾವನೆಯಿಂದ ವರ್ತಿಸು.
2 : ವೃದ್ಧೆಯರೊಡನೆ ಮಾತೃಭಾವನೆಯಿಂದ ನಡೆದುಕೋ. ಯುವತಿಯರನ್ನು ಅಕ್ಕತಂಗಿಯರೆಂದು ಪರಿಗಣಿಸಿ ಪರಿಶುದ್ಧ ಭಾವನೆಯಿಂದ ನಡೆದುಕೋ.
3 : ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು.
4 : ವಿಧವೆಯಾದವಳಿಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ, ಆ ಮಕ್ಕಳು ಮೊತ್ತಮೊದಲು ತಮ್ಮ ಸ್ವಂತ ಕುಟುಂಬಕ್ಕೆ ಸಹಾಯ ಮಾಡಬೇಕಾದುದು ಅವರ ಧಾರ್ಮಿಕ ಕರ್ತವ್ಯವೆಂಬುದು ಅವರಿಗೆ ತಿಳಿದಿರಲಿ. ಹೀಗೆ ಅವರು ತಮ್ಮ ತಂದೆತಾಯಿಯರಿಗೆ ಪ್ರತ್ಯುಪಕಾರ ಮಾಡಿದಂತಾಗುತ್ತದೆ. ಅಲ್ಲದೆ, ಇದು ದೇವರ ದೃಷ್ಟಿಯಲ್ಲಿ ಮೆಚ್ಚುಗೆ ಪಡೆದುದು.
5 : ದಿಕ್ಕಿಲ್ಲದೆ ಒಬ್ಬಂಟಿಗಳಾಗಿರುವ ವಿಧವೆ ದೇವರ ಮೇಲೆ ಭರವಸೆಯಿಟ್ಟು ಹಗಲಿರುಳು ಪ್ರಾರ್ಥನೆಗಳಲ್ಲೂ ವಿಜ್ಞಾಪನೆಗಳಲ್ಲೂ ನಿರತಳಾಗಿರುತ್ತಾಳೆ.
6 : ವಿಲಾಸಿಯಾದ ವಿಧವೆಯಾದರೋ ಬದುಕಿದ್ದರೂ ಸತ್ತಂತೆಯೇ.
7 : ವಿಧವೆಯರು ಯಾವ ದೋಷಾರೋಪಣೆಗೂ ಗುರಿಯಾಗದಂತೆ, ಅವರಿಗೆ ಈ ಆಜ್ಞೆಗಳನ್ನು ಕೊಡು.
8 : ಯಾರಾದರೂ ತನ್ನ ಸಂಬಂಧಿಕರನ್ನು, ವಿಶೇಷವಾಗಿ ಸ್ವಂತ ಕುಟುಂಬದವರನ್ನು ಸಂರಕ್ಷಿಸದೆ ಹೋದರೆ, ಅಂಥವನು ವಿಶ್ವಾಸಭ್ರಷ್ಟನೂ ಅವಿಶ್ವಾಸಿಗಳಿಗಿಂತ ತುಚ್ಛನಾದವನೂ ಆಗಿದ್ದಾನೆ.
9 : ಅರವತ್ತು ವರ್ಷಕ್ಕೆ ಕಡಿಮೆಯಿಲ್ಲದ ವಿಧವೆಯನ್ನು, ವಿಧವೆಯರ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅಂಥವಳು ಒಂದೇ ಸಾರಿ ಮದುವೆ ಆದವಳಾಗಿರಬೇಕು.
10 : ಆಕೆ ಮಕ್ಕಳನ್ನು ಯೋಗ್ಯವಾಗಿ ಸಾಕಿಸಲಹಿದವಳೂ ಅತಿಥಿ ಸತ್ಕಾರ ಮಾಡಿದವಳೂ ಆಗಿರಬೇಕು. ಅಲ್ಲದೆ, ದೇವಜನರ ಪಾದಸೇವೆ ಮಾಡಿದವಳೂ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದವಳೂ ಆಗಿರಬೇಕು. ಇಂಥಾ ಪುಣ್ಯಕಾರ್ಯಗಳನ್ನು ಮಾಡಿ ಸತ್ಕ್ರಿಯೆಗಳಿಗೆ ಹೆಸರಾದವಳೂ ಆಗಿರಬೇಕು.
11 : ಯೌವನಸ್ಥ ವಿಧವೆಯರನ್ನು ಆ ಪಟ್ಟಿಯಲ್ಲಿ ಸೇರಿಸಬೇಡ. ಏಕೆಂದರೆ, ಯೇಸುಕ್ರಿಸ್ತರಿಂದ ವಿಮುಖರನ್ನಾಗಿಸುವ ಕಾಮನೆಗಳು ಇವರನ್ನು ಮರುಮದುವೆಗೆ ಹುರಿದುಂಬಿಸಬಹುದು.
12 : ಹೀಗೆ, ಅವರು ಮೊದಲು ಮಾಡಿದ ವಾಗ್ದಾನವನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗುತ್ತಾರೆ.
13 : ಇದಲ್ಲದೆ ಅವರು ಮನೆಮನೆಗಳನ್ನು ಸುತ್ತುತ್ತಾ ಅಲೆದಾಡುತ್ತಾ ಹರಟೆಮಲ್ಲರೂ ಸೋಮಾರಿಗಳೂ ಆಗಬಹುದು. ಇತರರ ವಿಷಯಗಳಲ್ಲಿ ತಲೆಹಾಕಬಹುದು.
14 : ಆದ್ದರಿಂದ, ತರುಣಿ ವಿಧವೆಯರು ವಿವಾಹ ಮಾಡಿಕೊಂಡು, ಮಕ್ಕಳನ್ನು ಹೆತ್ತು ಸಂಸಾರವನ್ನು ನಡೆಸುವುದೇ ಒಳ್ಳೆಯದೆಂದು ನನ್ನ ಭಾವನೆ. ಆಗ ನಮ್ಮನ್ನು ನಿಂದಿಸಲು ವಿರೋಧಿಗಳಿಗೆ ಆಸ್ಪದವಿರುವುದಿಲ್ಲ.
15 : ಏಕೆಂದರೆ, ಈಗಾಗಲೇ ಕೆಲವು ವಿಧವೆಯರು ದಾರಿತಪ್ಪಿ ಸೈತಾನನನ್ನು ಹಿಂಬಾಲಿಸಿದ್ದಾರೆ.
16 : ಕ್ರೈಸ್ತವಿಶ್ವಾಸಿಯಾದ ಒಬ್ಬ ಮಹಿಳೆಯ ಮನೆಯಲ್ಲಿ ವಿಧವೆಯರಿದ್ದರೆ, ಆಕೆಯೇ ಅವರನ್ನು ಸಂರಕ್ಷಿಸಲಿ. ಅವರ ಪೋಷಣೆಯ ಹೊಣೆಯನ್ನು ಧರ್ಮಸಭೆ ವಹಿಸಿಕೊಳ್ಳುವುದು ತಪ್ಪುತ್ತದೆ. ಆಗ ನಿಜವಾಗಿಯೂ ದಿಕ್ಕಿಲ್ಲದ ವಿಧವೆಯರಿಗೆ ಸಭೆ ನೆರವು ನೀಡಲು ಸಾಧ್ಯವಾಗುತ್ತದೆ.
17 : ಸರಿಯಾಗಿ ಆಡಳಿತವನ್ನು ನಿರ್ವಹಿಸುತ್ತಿರುವ ಸಭಾಹಿರಿಯರು, ವಿಶೇಷವಾಗಿ ಬೋಧನೆಯಲ್ಲೂ ಉಪದೇಶದಲ್ಲೂ ಶ್ರಮಿಸುತ್ತಿರುವವರು, ಇಮ್ಮಡಿ ಸಂಭಾವನೆಗೆ ಯೋಗ್ಯರು.
18 : ‘ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬೇಡ’ ಎಂದೂ, ‘ಕಾರ್ಮಿಕನು ಕೂಲಿಗೆ ಅರ್ಹನು’ ಎಂದೂ ಧರ್ಮಶಾಸ್ತ್ರ ಹೇಳುತ್ತದೆಯಲ್ಲವೇ?
19 : ಸಭಾಹಿರಿಯರ ವಿರುದ್ಧ ಯಾರಾದರೂ ದೂರು ತಂದರೆ, ಇಬ್ಬರ ಅಥವಾ ಮೂವರ ಸಾಕ್ಷಿ ಇಲ್ಲದೆ ಅದನ್ನು ಲಕ್ಷ್ಯಕ್ಕೆ ತಂದುಕೊಳ್ಳಬೇಡ.
20 : ಯಾರಾದರೂ ಪಾಪದಲ್ಲಿಯೇ ಮುಂದುವರಿಯುತ್ತಾ ಇದ್ದರೆ, ಅಂಥವರನ್ನು ಬಹಿರಂಗವಾಗಿಯೇ ಖಂಡಿಸು. ಇದು ಇತರರಿಗೂ ಎಚ್ಚರಿಕೆಯಾಗಿರಲಿ.
21 : ದೇವರ ಸನ್ನಿಧಿಯಲ್ಲಿಯೂ ಕ್ರಿಸ್ತಯೇಸುವಿನ ಪ್ರಸನ್ನತೆಯಲ್ಲಿಯೂ ಹಾಗೂ ಆಯ್ಕೆಯಾದ ದೇವದೂತರ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದಿದು: ಪೂರ್ವಾಗ್ರಹದಿಂದಾಗಲಿ, ಪಕ್ಷಪಾತದಿಂದಾಗಲಿ ಏನೂ ಮಾಡಬೇಡ.
22 : ದೇವರ ಸನ್ನಿಧಿಯಲ್ಲಿಯೂ ಕ್ರಿಸ್ತಯೇಸುವಿನ ಪ್ರಸನ್ನತೆಯಲ್ಲಿಯೂ ಹಾಗೂ ಆಯ್ಕೆಯಾದ ದೇವದೂತರ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದಿದು: ಪೂರ್ವಾಗ್ರಹದಿಂದಾಗಲಿ, ಪಕ್ಷಪಾತದಿಂದಾಗಲಿ ಏನೂ ಮಾಡಬೇಡ.
23 : ಆಗಾಗ್ಗೆ ನೀನು ಅಸ್ವಸ್ಥನಾಗುವುದುಂಟು. ಆದ್ದರಿಂದ ಬರೀ ನೀರನ್ನು ಕುಡಿದರೆ ಸಾಲದು. ನಿನ್ನ ಜೀರ್ಣಶಕ್ತಿಯ ಸುಧಾರಣೆಗಾಗಿ ಸ್ವಲ್ಪ ದ್ರಾಕ್ಷಾರಸವನ್ನೂ ಸೇವಿಸು.
24 : ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಟ್ಟಬಯಲಾಗುತ್ತವೆ; ಇನ್ನು ಕೆಲವರ ಪಾಪಗಳು ಮರೆಯಾಗಿದ್ದು ಕ್ರಮೇಣ ಬೆಳಕಿಗೆ ಬರುತ್ತವೆ.
25 : ಅಂತೆಯೇ, ಕೆಲವರ ಸತ್ಕಾರ್ಯಗಳು ಎಲ್ಲರಿಗೂ ಬೇಗನೆ ಗೋಚರವಾಗುತ್ತವೆ. ಇನ್ನು ಕೆಲವರ ಸತ್ಕಾರ್ಯಗಳು ಅಗೋಚರವಾಗಿದ್ದರೂ ಸದಾ ಗುಟ್ಟಾಗಿರಲಾರವು.