1 : ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೆ ಬಲಿಬಿದ್ದು, ದುರಾತ್ಮಗಳ ದುರುಪದೇಶಗಳಿಗೆ ಕಿವಿಗೊಟ್ಟು ವಿಶ್ವಾಸಭ್ರಷ್ಟರಾಗುವರೆಂದು ಪವಿತ್ರಾತ್ಮ ಸ್ಪಷ್ಟವಾಗಿ ತಿಳಿಸಿದ್ದಾರೆ.
2 : ಕಪಟಿಗಳು ದುರ್ಬೋಧನೆಗಳನ್ನು ಪ್ರಸರಿಸುತ್ತಾರೆ. ಬರೆಹಾಕಿದ ಚರ್ಮದಂತೆ ಅವರ ಮನಸ್ಸಾಕ್ಷಿಯು ಸುಟ್ಟುಹೋಗಿದೆ.
3 : ಮದುವೆಯಾಗಬಾರದು, ಇಂತಿಂಥ ಆಹಾರವನ್ನು ಸೇವಿಸಬಾರದು ಎಂದು ಬೋಧಿಸುತ್ತಾರೆ. ಆದರೆ ಸತ್ಯವನ್ನು ಅರಿತು ಯಾರು ವಿಶ್ವಾಸಿಗಳಾಗಿದ್ದಾರೋ ಅಂಥವರು ಎಲ್ಲ ಆಹಾರ ಪದಾರ್ಥಗಳನ್ನು ಕೃತಜ್ಞತಾಸ್ತುತಿಯೊಡನೆ ಸೇವಿಸಲೆಂದೇ ದೇವರು ಅವುಗಳನ್ನು ಸೃಷ್ಟಿಸಿದ್ದಾರೆ.
4 : ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದೇ. ಅವರಿಗೆ ಸ್ತುತಿಸಲ್ಲಿಸಿ ಸ್ವೀಕರಿಸಿದ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ.
5 : ಏಕೆಂದರೆ, ದೇವರ ವಾಕ್ಯದಿಂದಲೂ ನಮ್ಮ ಪ್ರಾರ್ಥನೆಯಿಂದಲೂ ಅದು ಪಾವನಗೊಳ್ಳುತ್ತದೆ.
6 : ಈ ವಿಷಯಗಳನ್ನೆಲ್ಲಾ ಇತರ ಸಹೋದರರಿಗೆ ನೀನು ವಿವರಿಸುವವನಾದರೆ, ನೀನು ಕ್ರಿಸ್ತಯೇಸುವಿನ ಯೋಗ್ಯ ದಾಸನಾಗುವೆ. ನೀನು ಅನುಸರಿಸುತ್ತಾ ಬಂದಿರುವ ಸದ್ಭೋಧನೆಯಿಂದಲೂ ವಿಶ್ವಾಸದಿಂದಲೂ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯುವೆ.
7 : ಪ್ರಾಪಂಚಿಕ ಹಾಗೂ ತಿರುಳಿಲ್ಲದ ಕಟ್ಟುಕತೆಗಳನ್ನು ತಳ್ಳಿಬಿಟ್ಟು, ನಿನ್ನ ಭಕ್ತಿಯನ್ನು ವೃದ್ಧಿಮಾಡಿಕೋ.
8 : ಅಂಗಸಾಧನೆಯು ಸ್ವಲ್ಪ ಮಟ್ಟಿಗೆ ಪ್ರಯೋಜನಕರವಾದುದು; ಭಕ್ತಿಸಾಧನೆಯಾದರೋ ಎಲ್ಲಾ ದೃಷ್ಟಿಯಿಂದಲೂ ಪ್ರಯೋಜನಕರ ವಾದುದು; ಭಕ್ತಿಸಾಧನೆಯಿಂದ ಇಹಪರಗಳೆರಡರಲ್ಲೂ ನಿತ್ಯಜೀವವನ್ನು ಪಡೆಯುವ ಭರವಸೆ ನಮಗಿದೆ.
9 : ಈ ಉಪದೇಶ ಸತ್ಯವಾದುದು ಹಾಗೂ ನಂಬಲರ್ಹವಾದುದು; ಎಲ್ಲರ ಅಂಗೀಕಾರಕ್ಕೂ ಯೋಗ್ಯವಾದುದು.
10 : ಸಕಲ ಮಾನವರ, ವಿಶೇಷವಾಗಿ ಕ್ರೈಸ್ತವಿಶ್ವಾಸಿಗಳ, ಉದ್ಧಾರಕರಾದ ಜೀವಸ್ವರೂಪ ದೇವರಲ್ಲಿಯೇ ನಾವು ಭರವಸೆಯಿಟ್ಟಿದ್ದೇವೆ; ಅದಕ್ಕಾಗಿಯೇ ನಾವು ಹೋರಾಡುತ್ತೇವೆ ಹಾಗೂ ಶ್ರಮಿಸುತ್ತೇವೆ.
11 : ಈ ಅಂಶಗಳನ್ನು ಆಜ್ಞಾಪಿಸಿ ಬೋಧಿಸು.
12 : ನೀನಿನ್ನೂ ಯುವಕನೆಂದು ನಿನ್ನನ್ನು ತಾತ್ಸಾರ ಮಾಡುವುದಕ್ಕೆ ಯಾರಿಗೂ ಅವಕಾಶ ಕೊಡಬೇಡ. ನಿನ್ನ ನಡೆನುಡಿ, ಪ್ರೀತಿ ವಿಶ್ವಾಸ ಹಾಗೂ ಪರಿಶುದ್ಧತೆಯ ವಿಷಯದಲ್ಲಿ ವಿಶ್ವಾಸಿಗಳಿಗೆಲ್ಲರಿಗೂ ನೀನೇ ಆದರ್ಶಪ್ರಾಯನಾಗಿರು.
13 : ನಾನು ಬರುವವರೆಗೂ ಪವಿತ್ರಗ್ರಂಥವನ್ನು ಪಠಿಸುವುದರಲ್ಲೂ ಪ್ರಬೋಧಿಸುವುದರಲ್ಲೂ ಉಪದೇಶಿಸುವುದರಲ್ಲೂ ಆಸಕ್ತನಾಗಿರು.
14 : ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತ ನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ?
15 : ನಿನ್ನ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಗೋಚರವಾಗುವಂತೆ ಈ ಕಾರ್ಯಸಾಧನೆಗಳಲ್ಲಿ ನಿರತನಾಗಿರು; ಇವುಗಳಲ್ಲೇ ಮಗ್ನನಾಗಿರು. ಇದರಿಂದ ನಿನ್ನ ಮತ್ತು ನಿನ್ನ ಉಪದೇಶವನ್ನು ಕೇಳುವವರ ಜೀವೋದ್ಧಾರವನ್ನು ಸಾಧಿಸುವೆ.