Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ತಿಮೊಥೇಯ


1 : ಯಾರಾದರೂ ಧರ್ಮಾಧ್ಯಕ್ಷನಾಗಲು ಅಪೇಕ್ಷಿಸಿದರೆ, ಅಂಥವನು ಉತ್ತಮ ಸೇವೆಯನ್ನೇ ಬಯಸುತ್ತಾನೆಂಬುದು ನಿಜ.
2 : ಅಂಥವನು ನಿಂದಾರಹಿತನಾಗಿರಬೇಕು. ಏಕಪತ್ನಿ ಉಳ್ಳವನು, ಸ್ವಸ್ಥಬುದ್ಧಿಯುಳ್ಳವನು, ಜಿತೇಂದ್ರಿಯನು, ಗೌರವಸ್ಥನು ಮತ್ತು ಅತಿಥಿ ಸತ್ಕಾರ ಮಾಡುವವನು ಆಗಿರಬೇಕು. ಬೋಧಿಸುವುದರಲ್ಲಿ ಪ್ರವೀಣನಾಗಿರಬೇಕು.
3 : ಅವನು ಕುಡುಕನು, ಕಲಹಪ್ರಿಯನು ಮತ್ತು ಹೊಡೆದಾಡುವವನು ಆಗಿರಬಾರದು. ಶಾಂತನೂ ದಯಾವಂತನೂ ಹಣದ ವ್ಯಾಮೋಹ ಇಲ್ಲದವನೂ ಆಗಿರಬೇಕು.
4 : ತನ್ನ ಕುಟುಂಬವನ್ನು ಜವಾಬ್ದಾರಿಯುತವಾಗಿ ನಡೆಸುವವನೂ ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸಿ ಅವರಿಂದ ಗೌರವವನ್ನು ಪಡೆದುಕೊಳ್ಳುವವನೂ ಆಗಿರಬೇಕು.
5 : ತನ್ನ ಕುಟುಂಬವನ್ನೇ ಜವಾಬ್ದಾರಿಯುತವಾಗಿ ನಡೆಸಲು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ಪರಿಪಾಲಿಸಿಯಾನು?
6 : ಆತನು ಹೊಸದಾಗಿ ಕ್ರೈಸ್ತಧರ್ಮವನ್ನು ಅಂಗೀಕರಿಸಿದವನಾಗಿರಬಾರದು; ಇಲ್ಲದಿದ್ದರೆ ಅಹಂಕಾರದಿಂದ ಉಬ್ಬಿಕೊಂಡು ಸೈತಾನನಂತೆಯೇ ದಂಡನೆಗೆ ಗುರಿಯಾದಾನು.
7 : ಕ್ರೈಸ್ತರಲ್ಲದವರಿಂದಲೂ ಆತನು ಒಳ್ಳೆಯವನೆನಿಸಿಕೊಂಡಿರಬೇಕು. ಹೀಗಿದ್ದರೆ ಮಾತ್ರ ನಿಂದೆಗೊಳಗಾಗದೆ ಸೈತಾನನ ಕುತಂತ್ರಗಳಿಂದ ದೂರವಿರಬಲ್ಲನು.
8 : ಸಭಾಸೇವಕರು ಸಜ್ಜನರಾಗಿರಬೇಕು. ಎರಡು ನಾಲಿಗೆಯುಳ್ಳವರೂ ಕುಡುಕರೂ ಲಾಭಕೋರರೂ ಆಗಿರಬಾರದು.
9 : ವಿಶ್ವಾಸದ ನಿಗೂಢ ರಹಸ್ಯಗಳನ್ನು ಶುದ್ಧ ಮನಸ್ಸಾಕ್ಷಿಯಿಂದ ಕಾಪಾಡಿಕೊಂಡು ಬರುವವರಾಗಿರಬೇಕು.
10 : ಇವರನ್ನು ಮೊದಲು ಪರೀಕ್ಷೆಗೊಳಪಡಿಸಬೇಕು. ಯಾವುದೇ ಕುಂದುಕೊರತೆ ಕಂಡು ಬರದಿದ್ದಲ್ಲಿ, ಇವರನ್ನು ಸಭಾಸೇವಕರನ್ನಾಗಿ ನೇಮಿಸಬಹುದು.
11 : ಅಂತೆಯೇ, ಸಭಾಸೇವಕಿಯರು ಸಜ್ಜನೆಯರಾಗಿರಬೇಕು. ಚಾಡಿಮಾತುಗಳನ್ನು ಆಡುವವರೂ ಮದ್ಯಾಸಕ್ತರೂ ಆಗಿರದೆ ಎಲ್ಲ ವಿಷಯಗಳಲ್ಲಿ ನಂಬಿಕಸ್ಥರಾಗಿರಬೇಕು.
12 : ಸಭಾಸೇವಕರು ಏಕಪತ್ನಿಯುಳ್ಳವರಾಗಿದ್ದು ತಮ್ಮ ಮಕ್ಕಳನ್ನೂ ಕುಟುಂಬವನ್ನೂ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವವರಾಗಿರಬೇಕು.
13 : ನಿಷ್ಠೆಯಿಂದ ಸೇವೆಸಲ್ಲಿಸುವ ಸಭಾಸೇವಕರು ಒಳ್ಳೆಯ ಸ್ಥಾನಮಾನಗಳನ್ನು ಪಡೆಯುತ್ತಾರೆ; ಕ್ರಿಸ್ತ ಯೇಸುವಿನಲ್ಲಿ ಅವರಿಗಿರುವ ವಿಶ್ವಾಸವನ್ನು ಸಾರಲು ಧೈರ್ಯಸ್ಥೈರ್ಯವನ್ನು ಪಡೆಯುತ್ತಾರೆ.
14 : ನಾನು ನಿನ್ನ ಬಳಿಗೆ ಬೇಗನೆ ಬರುವೆನೆಂಬ ನಿರೀಕ್ಷೆಯಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ.
15 : ಒಂದು ವೇಳೆ ನಾನು ಬರುವುದು ತಡವಾದರೆ, ದೇವರ ಮಂದಿರದಲ್ಲಿ ಅಂದರೆ, ಜೀವಸ್ವರೂಪಿಯಾದ ದೇವರ ಸಭೆಯಲ್ಲಿ, ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ತಿಳಿಯಲೆಂದು ಇದನ್ನು ಬರೆದಿದ್ದೇನೆ. ಸಭೆಯು ಸತ್ಯಕ್ಕೆ ಸ್ತಂಭವೂ ಅಸ್ತಿವಾರವೂ ಆಗಿದೆ.
16 : ನಿಜವಾಗಿಯೂ ನಮ್ಮ ಧರ್ಮದ ನಿಗೂಢಾರ್ಥ ಶ್ರೇಷ್ಠವಾದದ್ದು ಎಂಬುದು ನಿಸ್ಸಂದೇಹವಾದ ವಿಷಯ. “ನರಮಾನವ ರೂಪದಲ್ಲಿ ಪ್ರತ್ಯಕ್ಷನಾಗಿ ದೇವರಿಗೆ ಪ್ರಿಯನೆಂದು ಪವಿತ್ರಾತ್ಮನಿಂದ ಪ್ರಕಟಿತನಾಗಿ ದೇವದೂತರಿಗೆ ಪ್ರದರ್ಶಿತವಾಗಿ ಅನ್ಯಜನರಿಗೆ ಪ್ರಬೋಧಿತನಾಗಿ ಜಗದಲ್ಲೆಲ್ಲೂ ವಿಶ್ವಾಸಪಡೆದವನಾಗಿ ಸ್ವರ್ಗಕ್ಕೇರಿದಾತ ಮಹಿಮಾನ್ವಿತ ಯೇಸುಕ್ರಿಸ್ತ.

· © 2017 kannadacatholicbible.org Privacy Policy